– ಈವರೆಗೆ ಸಾವಿನ ಸಂಖ್ಯೆ 60ಕ್ಕೆ ಏರಿಕೆ, 100ಕ್ಕೂ ಅಧಿಕ ಜನರಿಗೆ ಗಾಯ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ ಜಿಲ್ಲೆಯ ಚಶೋತಿಯಲ್ಲಿ ಮೇಘಸ್ಫೋಟದ (Kishtwar cloudburst) ಬಳಿಕ ಸತತ ಮೂರನೇ ದಿನವಾದ ಇಂದು ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ಮುಂದುವರೆದಿದೆ. ಗ್ರಾಮದಲ್ಲಿ 60 ಜನರು ಪ್ರಾಣ ಕಳೆದುಕೊಂಡಿದ್ದು, 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಈ ನಡುವೆ
ಜಮ್ಮು ಮತ್ತು ಕಾಶ್ಮೀರ (Jammu Kashmir) ವಿಧಾನಸಭೆಯ ವಿಪಕ್ಷ ನಾಯಕ ಸುನಿಲ್ ಶರ್ಮಾ, ಮೇಘಸ್ಫೋಟ ಸಂಭವಿಸಿದ ಸ್ಥಳದಲ್ಲಿ ಸುಮಾರು 1200 ಜನರು ಹಾಜರಿದ್ದರು ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಅನಾಮಿಕ ಹೇಳಿದ ಎಲ್ಲಾ ಕಡೆ ಭೂಮಿ ಅಗೆದ್ರೂ ಖಾಲಿ ಖಾಲಿ – ಉತ್ಖನನ ನಿಲ್ಲಿಸಲು ಎಸ್‌ಐಟಿ ನಿರ್ಧಾರ?
ಕೇಂದ್ರ ಸಚಿವ ಜಿತೇಂದ್ರ ಸಿಂಗ್, ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ (DGP) ನಳಿನ್ ಪ್ರಭಾತ್ ಅವರೊಂದಿಗೆ ಶುಕ್ರವಾರ ತಡರಾತ್ರಿ ಧ್ವಂಸಗೊಂಡ ಗ್ರಾಮಕ್ಕೆ ಭೇಟಿ ನೀಡಿ, ಪೊಲೀಸರು, ಸೇನೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF), ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF), ಗಡಿ ರಸ್ತೆ ಸಂಸ್ಥೆ (BRO), ನಾಗರಿಕ ಆಡಳಿತ ಮತ್ತು ಎತ್ತರದ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿರುವ ಸ್ಥಳೀಯ ಸ್ವಯಂಸೇವಕರು ನಡೆಸುತ್ತಿರುವ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ಪರಿಶೀಲಿಸಿದರು. ಇದನ್ನೂ ಓದಿ: ಮುಂಬೈನಲ್ಲಿ ಭಾರೀ ಮಳೆಯಿಂದ ಭೂಕುಸಿತ – ಇಬ್ಬರು ಸಾವು, ಇಂದು ರೆಡ್ ಅಲರ್ಟ್ ಘೋಷಣೆ
ಈವರೆಗೂ 46 ಶವಗಳನ್ನು ಗುರುತಿಸಲಾಗಿದೆ ಮತ್ತು ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ. 75 ಜನರು ಕಾಣೆಯಾಗಿದ್ದಾರೆ ಎಂದು ಅವರ ಕುಟುಂಬಗಳು ವರದಿ ಮಾಡಿವೆ. ಅಲ್ಲದೇ 84 ಮಂದಿಯನ್ನ ಸ್ಥಳಾಂತರಿಸಲಾಗಿದೆ. ಆದ್ರೆ ಸ್ಥಳೀಯರು ಮತ್ತು ಪ್ರತ್ಯಕ್ಷದರ್ಶಿಗಳು ನೂರಾರು ಜನರು ಹಠಾತ್ ಪ್ರವಾಹದಲ್ಲಿ ಕೊಚ್ಚಿಹೋಗಿ ಬೃಹತ್ ಬಂಡೆಗಳು, ದಿಮ್ಮಿಗಳು ಮತ್ತು ಭಗ್ನಾವಶೇಷಗಳ ಅಡಿಯಲ್ಲಿ ಹೂತುಹೋಗಿರಬಹುದು ಎಂದು ಹೇಳುತ್ತಿದ್ದಾರೆ.
ಮೃತರಲ್ಲಿ ಇಬ್ಬರು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ಸಿಬ್ಬಂದಿ ಮತ್ತು ಸ್ಥಳೀಯ ಪೊಲೀಸರ ವಿಶೇಷ ಪೊಲೀಸ್ ಅಧಿಕಾರಿ (SPO) ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಗಸ್ಟ್ 14 ರಂದು ಮಧ್ಯಾಹ್ನ 12:25 ರ ಸುಮಾರಿಗೆ ಮಚೈಲ್ ಮಾತಾ ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿರುವ ಕೊನೆಯ ಹಳ್ಳಿಯಾದ ಚಶೋತಿಯಲ್ಲಿ ಈ ದುರಂತ ಸಂಭವಿಸಿದೆ. ಇದನ್ನೂ ಓದಿ: ಉಕ್ರೇನ್ ಜೊತೆಗಿನ ಯುದ್ಧ ಕೊನೆಗೊಳಿಸದ ಹೊರತು ನಮ್ಮ ನಡ್ವೆ ಒಪ್ಪಂದವಿಲ್ಲ – ಪುಟಿನ್‌ಗೆ ಟ್ರಂಪ್ ಸ್ಟ್ರೈಟ್ ಹಿಟ್
ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಶುಕ್ರವಾರ ಸಂಜೆ ಕಿಶ್ತ್ವಾರ್ ತಲುಪಿದರು. ವಿಪತ್ತು ಪೀಡಿತ ಚಶೋತಿ ಗ್ರಾಮಕ್ಕೆ ಸಿಎಂ ಭೇಟಿ ನೀಡಿದರು. ಆ ಪ್ರದೇಶದಲ್ಲಿ ಉಂಟಾದ ಹಾನಿಯನ್ನು ಸಹ ಅವರು ಪರಿಶೀಲಿಸಿದರು. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಸಾಧ್ಯವಿರುವ ಎಲ್ಲ ಸಹಾಯದ ಭರವಸೆ ನೀಡಿದ್ದಾರೆ ಎಂದು ಅಬ್ದುಲ್ಲಾ ಹೇಳಿದರು.