ದೋಸ್ತಿ ಶಾಸಕರ ಗೈರಿನಲ್ಲಿ ಸದನ ಆರಂಭ

Public TV
2 Min Read

ಬೆಂಗಳೂರು: ರಾಜ್ಯಪಾಲರು ನೀಡಿದ ಡೆಡ್‍ಲೈನ್ ಪಾಲಿಸದ ಸರ್ಕಾರ ಈಗ ಸ್ಪೀಕರ್ ನೀಡಿದ ಆದೇಶಕ್ಕೂ ಕ್ಯಾರೇ ಅಂದಿಲ್ಲ. ಬೆಳಗ್ಗೆ 10 ಗಂಟೆಗೆ ಕಲಾಪ ಆರಂಭಿಸುತ್ತೇನೆ ಎಂದು ಸ್ಪೀಕರ್ ರಮೇಶ್ ಕುಮಾರ್ ತಿಳಿಸಿದ್ದರೂ ದೋಸ್ತಿ ಶಾಸಕರು ಸರಿಯಾದ ಸಮಯಕ್ಕೆ ಹಾಜರಾಗದೇ ಸದನಕ್ಕೆ ಅಗೌರವ ತೋರಿಸಿದ್ದಾರೆ.

ಸ್ಪೀಕರ್ ನಿಗದಿಯಂತೆ ಬೆಳಗ್ಗೆ 10 ಗಂಟೆಗೆ ಸದನ ಆರಂಭಿಸಿದಾಗ ಬಿಜೆಪಿ ಶಾಸಕರು ಹಾಜರಾಗಿದ್ದರೆ ದೋಸ್ತಿ ಪಕ್ಷದ 6 ಮಂದಿ ಶಾಸಕರು ಮಾತ್ರ ಹಾಜರಾಗಿದ್ದರು. ಗೈರಾಗಿದ್ದನ್ನು ನೋಡಿ ಸ್ಪೀಕರ್ ಆಡಳಿತ ಪಕ್ಷದವರು ಈ ರೀತಿಯ ವರ್ತನೆ ತೋರುವುದು ಸರಿಯಲ್ಲ ಎಂದು ಕುಟುಕಿದರು.

10 ಗಂಟೆಯ ವೇಳೆಗೆ ಜೆಡಿಎಸ್, ಕಾಂಗ್ರೆಸ್ ಬಸ್ಸುಗಳು ರೆಸಾರ್ಟ್, ಹೋಟೆಲಿನಿಂದಲೇ ಹೊರಡಿರಲಿಲ್ಲ. ದೋಸ್ತಿ ನಾಯಕರು ಕಲಾಪಕ್ಕೆ ಹಾಜರಾಗದ ಕಾರಣ ಇದೂವರೆಗಿನ ಕಲಾಪದಲ್ಲಿ ಮೌನಕ್ಕೆ ಶರಣಾಗಿದ್ದ ಬಿಜೆಪಿ ನಾಯಕ ಈಶ್ವರಪ್ಪ ಗರಂ ಆಗಿ ಮಾತನಾಡಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಈ ವೇಳೆ ಸ್ಪೀಕರ್ ರಮೇಶ್ ಕುಮಾರ್ ರೂಲಿಂಗ್ ಪಾರ್ಟಿಯವರೆ ಹೀಗೆ ಮಾಡಿದ್ರೆ ಹೇಗೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೆ ನಿಮ್ಮವರಿಗೆ ಬರೋಕೆ ಹೇಳಿ ಎಂದು ಪ್ರಿಯಾಂಕ ಖರ್ಗೆಗೆ ಸೂಚಿಸಿದರು. ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ನೀವು ಈಗ ಸದನದಲ್ಲಿ ಬೆತ್ತಲಾಗಿದ್ದಿರಾ? ಸಿಎಂ ಎಲ್ಲಿ? ನಿಮಗೆ ಬಹುಮತ ಸಾಬೀತು ಮಾಡೋಕು ಆಗಲ್ಲ. ಕನಿಷ್ಟ ಸದನಕ್ಕಾದರೂ ಗೌರವ ನೀಡಿ ಎಂದು ಹೇಳಿ ಮೈತ್ರಿ ನಾಯಕರ ವಿರುದ್ಧ ಕಿಡಿಕಾರಿದರು.

ಆಗ ಸ್ಪೀಕರ್ ನಾನು ನಾನು 10.01ಕ್ಕೆ ಕುರ್ಚಿಯಲ್ಲಿ ಕುಳಿತಿದ್ದೇನೆ ಎಂದಾಗ ಪ್ರಿಯಾಂಕ್ ಖರ್ಗೆ ಕಲಾಪವನ್ನು 15 ನಿಮಿಷ ಮುಂದೆ ಹಾಕಿ ಎಂದು ಕೇಳಿಕೊಂಡರು. ಇದಕ್ಕೆ ಬಿಜೆಪಿ ಶಾಸಕರು ವಿರೋಧ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಮಾತನಾಡಿ, ನಿನ್ನೆ ರಾತ್ರಿ ತಡವಾಗಿ ಹೋಗಿದ್ದಾರೆ. ಪ್ರತಿ ಬಾರಿಯೂ 11 ಗಂಟೆಗೆ ಸದನ ಆರಂಭಗೊಳ್ಳುತಿತ್ತು. ಹೀಗಾಗಿ ಇಂದೂ 11 ಗಂಟೆಗೆ ಆರಂಭವಾಗಬಹುದು ಎಂದು ತಿಳಿದು ಗೈರಾಗಿದ್ದಾರೆ. ಎಲ್ಲ ಶಾಸಕರು ಈಗ ಹೊರಟಿದ್ದಾರೆ. ಕೆಲವೇ ನಿಮಿಷಗಳಲ್ಲಿ ಸದನಕ್ಕೆ ಹಾಜರಾಗಲಿದ್ದಾರೆ ಎಂದು ವಿತ್ತಂಡವಾದವನ್ನು ಮುಂದಿಟ್ಟರು.

ಶುಕ್ರವಾರ ಕಲಾಪದಲ್ಲಿ ಸಿಎಂ ಮತ್ತು ಸಿದ್ದರಾಮಯ ಸೋಮವಾರ ವಿಶ್ವಾಸ ಮತಯಾಚನೆ ಮಾಡುವುದಾಗಿ ಹೇಳಿ ಈಗ ವಚನಭ್ರಷ್ಟರಾಗಿದ್ದಕ್ಕೆ ಈಗಾಗಲೇ ಭಾರೀ ಟೀಕೆ ವ್ಯಕ್ತವಾಗುತ್ತಿದೆ. ಈಗ ಸರಿಯಾದ ಸಮಯಕ್ಕೆ ಕಲಾಪಕ್ಕೆ ಬಾರದೇ ಗೈರಾಗುವ ಮೂಲಕ ದೋಸ್ತಿಗಳ ನಡೆ ಮತ್ತೆ ಟೀಕೆಗೆ ಗುರಿಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *