ಬಿಜೆಪಿಗೆ ಭರ್ಜರಿ ಜಯ, ಹೂಡಿಕೆದಾರರ ಸಂಪತ್ತು ಒಂದೇ ದಿನ 6 ಲಕ್ಷ ಕೋಟಿ ಹೆಚ್ಚಳ – ದಾಖಲೆ ಬರೆದ ಸೆನ್ಸೆಕ್ಸ್‌

Public TV
2 Min Read

ಮುಂಬೈ: ಮೂರು ರಾಜ್ಯಗಳಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿದ ಬೆನ್ನಲ್ಲೇ ಬಾಂಬೆ ಷೇರು ಮಾರುಕಟ್ಟೆ(BSE) ಸಂವೇದಿ ಸೂಚಂಕ್ಯ ಸೆನ್ಸೆಕ್ಸ್‌ (Sensex) ಸಾರ್ವಕಾಲಿಕ ಎತ್ತರಕ್ಕೆ ಜಿಗಿದು ದಾಖಲೆ ಬರೆದಿದೆ.

ಹೂಡಿಕೆದಾರರು ಭಾರೀ ಪ್ರಮಾಣದಲ್ಲಿ ಹೂಡಿಕೆ ಮಾಡಿದ ಪರಿಣಾಮ ಸೆನ್ಸೆಕ್ಸ್‌ ಮತ್ತು ರಾಷ್ಟ್ರೀಯ ಷೇರು ಮಾರುಕಟ್ಟೆ (NSE) ಸೂಚಂಕ್ಯ ನಿಫ್ಟಿ (Nifty)ಭರ್ಜರಿ ಏರಿಕೆ ಕಂಡಿದೆ. ಹೂಡಿಕೆದಾರರ ಸಂಪತ್ತು ಒಂದೇ ದಿನ 6 ಲಕ್ಷ ಕೋಟಿ ರೂ. ಹೆಚ್ಚಳವಾಗಿದೆ.

ಶುಕ್ರವಾರ 67,481.19 ಅಂಕಗಳಿಗೆ ಸೆನ್ಸೆಕ್ಸ್‌ ಕೊನೆಯಾಗಿತ್ತು. ಇಂದು ಒಂದೇ ದಿನ 1,383.93 ಅಂಕ ಏರಿಕೆಯಾಗಿ ಅಂತಿಮವಾಗಿ 68,865.12 ಅಂಕಗಳಿಗೆ ದಿನದ ವಹಿವಾಟು ಮುಗಿಸಿತು. ಒಂದು ಹಂತದಲ್ಲಿ ಸೆನ್ಸೆಕ್ಸ್‌ 68,918 ಅಂಕಗಳಿಗೆ ಏರಿತ್ತು.  ಇದನ್ನೂ ಓದಿ: ದಯವಿಟ್ಟು ಸೋಲಿನ ಹತಾಶೆ ಹೊರಹಾಕಬೇಡಿ – ಸಂಸತ್‌ ಅಧಿವೇಶನಕ್ಕೂ ಮುನ್ನ ವಿಪಕ್ಷಗಳಿಗೆ ಮೋದಿ ಸಲಹೆ

ನಿಫ್ಟಿ ಶುಕ್ರವಾರ 20,267.90 ಅಂಕಗಳಿಗೆ ಕೊನೆಯಾಗಿತ್ತು. ಇಂದು 418.90 ಅಂಕ ಏರಿಕೆಯಾಗಿ 20,686.80 ಅಂಕಗಳಿಗೆ ದಿನದ ವಹಿವಾಟು ಮುಗಿಸಿತು. ಒಂದು ಹಂತದಲ್ಲಿ ನಿಫ್ಟಿ 20,702 ಅಂಕಗಳಿಗೆ ಏರಿಕೆಯಾಗಿತ್ತು.

ಯಾವುದು ಎಷ್ಟು ಏರಿಕೆ?
ಐಷರ್‌ ಮೋಟಾರ್ಸ್‌ (299.16 ರೂ.), ಅದಾನಿ ಎಂಟರ್‌ಪ್ರೈಸ್‌ (2,531.20 ರೂ.), ಅದಾನಿ ಪೋರ್ಟ್ಸ್‌ ಎಸ್‌ಇಝಡ್‌ (878.65 ರೂ.) ಬಿಪಿಸಿಎಲ್‌ (461.50) ಐಸಿಐಸಿಐ ಬ್ಯಾಂಕ್‌ (991.20), ಎಸ್‌ಬಿಐ (594.70), ಕೋಟಕ್‌ ಬ್ಯಾಕ್‌ (1,818.55) ಷೇರುಗಳ ಬೆಲೆ ಏರಿಕೆ ಕಂಡಿವೆ.

ಏರಿಕೆಗೆ ಕಾರಣ ಏನು?
ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢದಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿದ್ದು ಹೂಡಿಕೆದಾರರಿಗೆ ಉತ್ಸಾಹ ಹೆಚ್ಚಿಸಿದೆ. ಈ ಪರಿಣಾಮ ಷೇರು ಮಾರುಕಟ್ಟೆಯಲ್ಲಿ ಭಾರೀ ಪ್ರಮಾಣದಲ್ಲಿ ಹಣವನ್ನು ಹೂಡಿಕೆ ಮಾಡಿದ್ದಾರೆ.

ಜುಲೈ- ಸೆಪ್ಟೆಂಬರ್ ಅವಧಿಯ ಎರಡನೇ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕತೆ(Indian Economy) ನಿರೀಕ್ಷೆಗೂ ಮೀರಿ ವೃದ್ಧಿಯಾಗಿದೆ. ಈ ಅವಧಿಯಲ್ಲಿ ಹಲವು ಸಂಸ್ಥೆಗಳು ಜಿಡಿಪಿ (GDP) 6.8% ರಷ್ಟು ಪ್ರಗತಿ ಸಾಧಿಸಬಹುದು ಎಂದು ಅಂದಾಜು ಮಾಡಿತ್ತು. ಆರ್‌ಬಿಐ (RBI) 6.5% ಅಭಿವೃದ್ಧಿ ಸಾಧಿಸಬಹುದು ಎಂದು ನಿರೀಕ್ಷೆ ಮಾಡಿತ್ತು. ಆದರೆ ಈ ನಿರೀಕ್ಷೆಗೂ ಮೀರಿ ಜಿಡಿಪಿ 7.6% ರಷ್ಟು ಪ್ರಗತಿ ಸಾಧಿಸಿದೆ.

ಜಿಎಸ್‌ಟಿ ಸಂಗ್ರಹವು ನವೆಂಬರ್‌ನಲ್ಲಿ 15 ಪ್ರತಿಶತದಷ್ಟು ಹೆಚ್ಚಾಗಿದ್ದು ಸುಮಾರು 1.68 ಲಕ್ಷ ಕೋಟಿ ರೂಪಾಯಿ ಸಂಗ್ರಹವಾಗಿದೆ. ಕಳೆದ ವರ್ಷ ಈ ಅವಧಿಯಲ್ಲಿ ಸರಕು ಮತ್ತು ಸೇವಾ ತೆರಿಗೆ (GST) ಸಂಗ್ರಹ 1.45 ಲಕ್ಷ ಕೋಟಿ ರೂಪಾಯಿ ಆಗಿದ್ದು, ನವೆಂಬರ್ 2023ರಲ್ಲಿ ಒಟ್ಟು ಜಿಎಸ್‌ಟಿ ಸಂಗ್ರಹವು 1,67,929 ಕೋಟಿ ರೂಪಾಯಿಗಳಷ್ಟಿದೆ ಎಂದು ಹಣಕಾಸು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿತ್ತು.

 

Share This Article