ಭದ್ರಾವತಿ ಬಿಜೆಪಿ ಕಾರ್ಯಕರ್ತನ ಕಾರು ಜಖಂ – ಮೂವರು ಆರೋಪಿಗಳು ಅರೆಸ್ಟ್

Public TV
1 Min Read

ಶಿವಮೊಗ್ಗ: ಭದ್ರಾವತಿಯ (Bhadravathi) ಬಿಜೆಪಿ (BJP) ಯುವ ಮೋರ್ಚಾ ಕಾರ್ಯಕರ್ತ ಗೋಕುಲ್ ಕೃಷ್ಣನ್ ಅವರ ಮೇಲೆ ಹಲ್ಲೆ ಹಾಗೂ ಕಾರು (Car) ಜಖಂಗೊಳಿಸಿದ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಪೊಲೀಸರು (Police) ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಗಣೇಶ್ (22), ಹರ್ಷ (23) ಮತ್ತು ನಂಜೇಗೌಡ (22) ಎಂದು ಗುರುತಿಸಲಾಗಿದೆ. ಆರೋಪಿಗಳು ವಿಶ್ವೇಶ್ವರ ನಗರದಲ್ಲಿ ಗೋಕುಲ್ ಕೃಷ್ಣನ್ ಅವರ ಕಾರನ್ನು ಜಖಂಗೊಳಿಸಿದ್ದರು. ಕಿಡಿಗೇಡಿಗಳ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ದೃಶ್ಯಾವಳಿಗಳನ್ನು ಪರಿಶೀಲಿಸಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಹಳಿ ತಪ್ಪಿದ ಗೂಡ್ಸ್ ರೈಲು – 11 ಎಕ್ಸ್‌ಪ್ರೆಸ್ ರೈಲುಗಳ ಮಾರ್ಗ ಬದಲಾವಣೆ

ಕಾರು ಜಖಂಗೊಳಿಸಿದ ಪ್ರಕರಣ ಮಾಸುವ ಮುನ್ನವೇ ಕಿಡಿಗೇಡಿಗಳು ಹೋಟೆಲ್‍ಗೆ ತೆರಳಿದ್ದ ಅವರ ಮೇಲೆ ದೊಣ್ಣೆಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಹಲ್ಲೆಗೊಳಗಾದ ಗೋಕುಲ್ ಕೃಷ್ಣನ್ ಅವರನ್ನು ಭದ್ರಾವತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ಶಾಸಕ ಚನ್ನಬಸಪ್ಪ ಸೇರಿದಂತೆ ಬಿಜೆಪಿ ಮುಖಂಡರು ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿ, ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಗೋಕುಲ್ ಕೃಷ್ಣನ್ ಭದ್ರಾವತಿಯಲ್ಲಿ ನಡೆಯುತ್ತಿರುವ ಇಸ್ಪೀಟ್, ಓಸಿ ದಂಧೆ ಸೇರಿದಂತೆ ಅಕ್ರಮ ದಂಧೆ ಕುರಿತು ಹಾಗೂ ಈ ದಂಧೆಯಲ್ಲಿ ಶಾಸಕ ಬಿ.ಕೆ.ಸಂಗಮೇಶ್ವರ ಕೈವಾಡ ಇದೆ ಎಂಬುದಾಗಿ ಫೇಸ್‍ಬುಕ್‍ನಲ್ಲಿ ಬರೆದುಕೊಂಡಿದ್ದರು. ಇದರಿಂದ ಕೆಲವು ಕಿಡಿಗೇಡಿಗಳು ಮನೆಯ ಮುಂದೆ ನಿಲ್ಲಿಸಿದ್ದ ಅವರ ಕಾರನ್ನು ಜಖಂಗೊಳಿಸಿದ್ದರು.

ಈ ಸಂಬಂಧ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ರಾಜ್ಯಾಧ್ಯಕ್ಷರ ತವರು ಜಿಲ್ಲೆಯಲ್ಲೇ ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ

Share This Article