ದಿಸ್ಪುರ: ಅಸ್ಸಾಂ ಮಹಿಳೆಯೊಬ್ಬರು ತನ್ನ ಪುತ್ರಿ ಮತ್ತು ಆಕೆಯ ಸ್ನೇಹಿತರ ಜೊತೆ ಸೇರಿಕೊಂಡು ಪತಿಯನ್ನೇ ಕೊಲೆ ಮಾಡಿರುವ ಘಟನೆ ನಡೆದಿದೆ.
ಉತ್ತಮ್ ಗೊಗೊಯ್ ಕೊಲೆಯಾದ ವ್ಯಕ್ತಿ. ಆತನ ಪತ್ನಿ ಸೋನೋವಾಲ್ ಗೊಗೊಯ್ ಹತ್ಯೆ ಮಾಡಿದ ಪತ್ನಿ. ಆರೋಪಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಮಹಿಳೆಯ 9ನೇ ತರಗತಿ ಓದುತ್ತಿರುವ ಪುತ್ರಿ ಮತ್ತು ಆಕೆಯ ಸ್ನೇಹಿತರು ಕೂಡ ಆರೋಪಿಗಳಾಗಿದ್ದಾರೆ.
ಜು.25 ರಂದು ದಿಬ್ರುಗಢದ ಲಹೋನ್ ಗಾಂವ್‌ನಲ್ಲಿರುವ ಬೊರ್ಬರುವಾ ಪ್ರದೇಶದ ನಿವಾಸದಲ್ಲಿ ಉತ್ತಮ್ ಗೊಗೊಯ್ ಶವವಾಗಿ ಪತ್ತೆಯಾಗಿದ್ದರು. ತನ್ನ ಗಂಡ ಪಾರ್ಶ್ವವಾಯುವಿನಿಂದ ಮೃತಪಟ್ಟಿದ್ದಾರೆಂದು ಸೋನೋವಾಲ್ ನಂಬಿಸಲು ಯತ್ನಿಸಿದ್ದಳು. ಆದರೆ, ವಿಚಾರಣೆ ವೇಳೆ ಈಕೆಯ ನಿಜಬಣ್ಣ ಬಯಲಾಗಿದೆ.
ಉತ್ತಮ್ ಅವರ ಸಹೋದರ ಪ್ರತಿಕ್ರಿಯಿಸಿ, ನನ್ನ ಅಣ್ಣ ಪಾರ್ಶ್ವವಾಯುವಿನಿಂದ ಮೃತಪಟ್ಟಿದ್ದಾನೆಂದು ಆತನ ಪತ್ನಿ ಹಾಗೂ ಪುತ್ರಿ ನನಗೆ ಕರೆ ಮಾಡಿ ತಿಳಿಸಿದರು. ನಾನು ತಕ್ಷಣ ಮನೆಗೆ ದೌಡಾಯಿಸಿದೆ. ಆಗ ಮನೆಯಲ್ಲಿ ದರೋಡೆಯಾಗಿದೆ. ನಿಮ್ಮ ಅಣ್ಣನಿಗೆ ಪಾರ್ಶ್ವವಾಯು ಆಯಿತು ಎಂದು ಹೇಳಿದರು. ಆದರೆ, ಅಣ್ಣನ ಕಿವಿ ಕತ್ತರಿಸಿರುವುದು ಕಂಡುಬಂತು. ನನಗೆ ಅನುಮಾನ ಬಂದು ಪೊಲೀಸ್ ಠಾಣೆಗೆ ದೂರು ನೀಡಿದೆ ಎಂದು ತಿಳಿಸಿದ್ದಾರೆ.
ನಾವು ಪೊಲೀಸರನ್ನು ಸಂಪರ್ಕಿಸಿದೆವು. ಇಂದು ಅವರ ಪತ್ನಿ, ಮಗಳು ಮತ್ತು ಇತರ ಇಬ್ಬರನ್ನು ಕೊಲೆ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ನಮಗೆ ತಿಳಿದುಬಂದಿದೆ. ಈ ಇಬ್ಬರು ಹುಡುಗರು ನನ್ನ ಅತ್ತಿಗೆ ಮತ್ತು ಅವರ ಮಗಳೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆಂದು ವರದಿಯಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.