ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದರೆ ಸರ್ಕಾರಿ ಉದ್ಯೋಗ ಇಲ್ಲ

Public TV
2 Min Read

– 2017ರಲ್ಲಿ ಅಸ್ಸಾಂ ವಿಧಾನಸಭೆಯಲ್ಲಿ ಮಸೂದೆ ಪಾಸ್
– ಅಸ್ಸಾಂ ಸರ್ಕಾರದ ಕ್ಯಾಬಿನೆಟ್‍ನಿಂದ ಮಹತ್ವದ ನಿರ್ಧಾರ

ಗುವಾಹಟಿ: ಎರಡಕ್ಕಿಂತ ಹೆಚ್ಚಿನ ಮಕ್ಕಳನ್ನು ಹೊಂದಿದ್ದ ಪೋಷಕರಿಗೆ ಸರ್ಕಾರಿ ಉದ್ಯೋಗ ನೀಡದಿರಲು ಅಸ್ಸಾಂ ಸರ್ಕಾರ ಮಹತ್ವದÀ ನಿರ್ಧಾರ ಕೈಗೊಂಡಿದೆ.

ಸೋಮವಾರ ಅಸ್ಸಾಂ ಸರ್ಕಾರ ಕ್ಯಾಬಿನೆಟ್‍ನಲ್ಲಿ ಈ ತೀರ್ಮಾನವನ್ನು ಕೈಗೊಂಡಿದೆ. 2021 ಜನವರಿಯಿಂದ ಈ ನೀತಿ ಜಾರಿಯಾಗಲಿದ್ದು ಜನ ಸಂಖ್ಯೆ ನಿಯಂತ್ರಿಸಲು ಸಣ್ಣ ಕುಟುಂಬಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸರ್ಕಾರ ಹೇಳಿದೆ.

2017ರ ಸೆಪ್ಟೆಂಬರ್ ನಲ್ಲಿ ವಿಧಾನಸಭೆ “ಜನಸಂಖ್ಯೆ ಮತ್ತು ಅಸ್ಸಾಂನ ಮಹಿಳಾ ಸಬಲೀಕರಣ ನೀತಿ” ಮಸೂದೆಯನ್ನು ಪಾಸ್ ಮಾಡಿತ್ತು. ಈ ಮಸೂದೆಯಲ್ಲಿ ಸರ್ಕಾರಿ ಉದ್ಯೋಗ ಪಡೆಯುವ ಅರ್ಹ ಅಭ್ಯರ್ಥಿಗಳು ಗರಿಷ್ಟ 2 ಮಕ್ಕಳನ್ನು ಹೊಂದಿರಬಹುದು ಮತ್ತು ಈಗಾಗಲೇ ಸರ್ಕಾರಿ ಉದ್ಯೋಗದಲ್ಲಿರುವ ಸಿಬ್ಬಂದಿ ಸೇವಾ ನಿವೃತ್ತಿಯವರೆಗೆ ಎರಡು ಮಕ್ಕಳ ನೀತಿಯನ್ನು ಕಡ್ಡಾಯವಾಗಿ ಅನುಸರಿಸಬೇಕೆಂಬ ಅಂಶವನ್ನು ಸೇರಿಸಲಾಗಿತ್ತು.

ಅಸ್ಸಾಂ ಸರ್ಕಾರದ ಆರೋಗ್ಯ ಸಚಿವ ಹಿಮಂತ ಬಿಸ್ವಾ ಶರ್ಮಾ ಈ ಹಿಂದೆ ಪ್ರತಿಕ್ರಿಯಿಸಿ, ಸರ್ಕಾರ ನಿಗದಿ ಪಡಿಸಿರುವ ವಯೋಮಿತಿಯಲ್ಲೇ ಅರ್ಜಿ ಸಲ್ಲಿಸಿದ್ದರೂ ಕೂಡ ಮದುವೆಯಾಗಿ, ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದರೆ ಆ ಅಭ್ಯರ್ಥಿಗಳ ಅರ್ಜಿಗಳನ್ನು ಅನರ್ಹ ಪಟ್ಟಿಗೆ ಸೇರಿಸಲಾಗುತ್ತದೆ ಎಂದು ತಿಳಿಸಿದ್ದರು.

ಭಾರತದಲ್ಲಿ ಎರಡು ಮಕ್ಕಳು ಸಾಕು ಎಂಬ ನೀತಿ ಇದ್ದರೂ ಈ ನಿಯಮವನ್ನು ಕೆಲವೇ ಮಂದಿ ಪಾಲಿಸುತ್ತಿದ್ದಾರೆ. ಮದುವೆ ವಯೋಮಿತಿ ಗಂಡಿಗೆ 21 ಹೆಣ್ಣಿಗೆ 18 ವರ್ಷಗಳಾಗಿದ್ದು, ಅದಕ್ಕಿಂತ ಕಡಿಮೆ ವಯಸ್ಸಿನಲ್ಲಿ ಮದುವೆ ಮಾಡಿದರೆ ಶಿಕ್ಷೆಯಾಗುತ್ತದೆ. ಹೀಗಾಗಿ ಈ ನೀತಿಯನ್ನು ಜಾರಿಗೆ ತರಲಾಗುತ್ತಿದೆ ಎಂದು ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು.

ಉದ್ಯೋಗ ಯೋಜನೆ ಅಡಿಯಲ್ಲಿ ಸರಕಾರದ ಪ್ರಯೋಜನ ಪಡೆಯುವ ಫಲಾನುಭವಿಗಳು ಸೇರಿದಂತೆ ಅಸ್ಸಾಂ ರಾಜ್ಯ ಚುನಾವಣಾ ಆಯೋಗ ಅಡಿಯಲ್ಲಿ ಬರುವ ಪಂಚಾಯತ್, ಪುರಸಭೆ ಮತ್ತು ಸ್ವಾಯತ್ತ ಕೌನ್ಸಿಲ್‍ಗೆ ನಡೆಯುವ ಚುನಾವಣಾ ಅಭ್ಯರ್ಥಿಗಳಿಗೂ ಎರಡು ಮಕ್ಕಳ ಜನಸಂಖ್ಯೆಯ ನೀತಿ ಅನ್ವಯವಾಗುತ್ತದೆ.

2011ರ ಜನಗಣತಿಯಂತೆ ಅಸ್ಸಾಂನ ಜನಸಂಖ್ಯೆ 3 ಕೋಟಿಗೆ ಏರಿಕೆಯಾಗಿದೆ. ಏರಿಕೆ ಪೈಕಿ ಮುಸ್ಲಿಂ ಸಮುದಾಯದಲ್ಲಿ ಭಾರೀ ಏರಿಕೆ ಕಂಡು ಬಂದಿತ್ತು. 2011ರಲ್ಲಿ ಮುಸ್ಲಿಂ ಸಮುದಾಯದ ಜನಸಂಖ್ಯೆ ಶೇ.34.2ಕ್ಕೆ ಏರಿಕೆಯಾಗಿತ್ತು. 10 ವರ್ಷದಲ್ಲಿ ಶೇ.3.30 ರಷ್ಟು ಏರಿಕೆ ಕಂಡು ಬಂದಿತ್ತು.

Share This Article
Leave a Comment

Leave a Reply

Your email address will not be published. Required fields are marked *