ದೇವರಾಯನದುರ್ಗ ಅರಣ್ಯ ಪ್ರದೇಶದಲ್ಲಿ ಅತಿ ಅಪರೂಪದ ಪಕ್ಷಿ ಪತ್ತೆ

Public TV
1 Min Read

ತುಮಕೂರು: ಜಿಲ್ಲೆಯ ದೇವರಾಯನದುರ್ಗ ಅರಣ್ಯ ಪ್ರದೇಶದಲ್ಲಿ ಅತಿ ಅಪರೂಪದ ‘ಏಷ್ಯನ್ ಪ್ಯಾರಡೈಸ್ ಫ್ಲೈ ಕ್ಯಾಚರ್’ ಪಕ್ಷಿ ಪತ್ತೆಯಾಗಿದ್ದು, ಅಚ್ಚರಿ ಮೂಡಿಸಿದೆ.

ಏಷ್ಯನ್ ಪ್ಯಾರಡೈಸ್ ಫ್ಲೈ ಕ್ಯಾಚರ್ ಇದು ತನ್ನ ಉದ್ದನೆಯ ಬಾಲದಿಂದಲೇ ಗಮನ ಸೆಳೆಯುವ ಸುಂದರ ಹಕ್ಕಿ Asian Paradise Flycatcher (ಬಾಲದಂಡೆ). ಇದು ಏಷ್ಯಾಖಂಡದ ಪಕ್ಷಿ. ಇದಕ್ಕೆ ಇಂಗ್ಲಿಷ್‍ನಲ್ಲಿ ಏಷ್ಯನ್ ಪ್ಯಾರಡೈಸ್ ಫ್ಲೈಕ್ಯಾಚರ್ ಎಂದು, ಸಂಸ್ಕೃತದಲ್ಲಿ ಅರ್ಜುನಕ ಎಂದು ಕರೆಯುತ್ತಾರೆ. ಉದ್ದನೆಯ ಬಾಲವೇ ಈ ಹಕ್ಕಿಯ ಪ್ರಮುಖ ಆಕರ್ಷಣೆ. ಹೀಗಾಗಿಯೇ ಇವುಗಳಿಗೆ ಬಾಲದಂಡೆ ಎನ್ನುತ್ತಾರೆ.

ಗಂಡು ಹಕ್ಕಿ ಹೆಣ್ಣಿಗಿಂತ ಬಹಳ ಸುಂದರ. ಗಂಡು ಹಕ್ಕಿಯ ಬಾಲವು ಸುಮಾರು 24 ರಿಂದ 40 ಸೆ.ಮೀ ನಷ್ಟು ಉದ್ದವಾಗಿರುತ್ತದೆ. ಆದರೆ ಹೆಣ್ಣು ಹಕ್ಕಿ ಸರ್ವೇ ಸಾಧಾರಣವಾದ ಚಿಕ್ಕ ಬಾಲ ಹೊಂದಿರುತ್ತದೆ. ಹಾರಾಡುವಾಗ ಉದ್ದನೆಯ ಬಿಳಿಗರಿಗಳು ಗಾಳಿಪಟದ ಬಾಲಂಗೋಚಿಯಂತೆ ಕಾಣುತ್ತವೆ. ಇದರ ಬಾಲ ಉದ್ದವಿದ್ದರೂ ದೇಹ ಗುಬ್ಬಿಯಷ್ಟೇ ಚಿಕ್ಕದಿರುತ್ತದೆ. ಇವುಗಳ ದೇಹ ಕೇವಲ 18ರಿಂದ 21 ಸೆ.ಮೀ ನಷ್ಟು ಉದ್ದವಿರುತ್ತದೆ. ಗಂಡು ಹಕ್ಕಿಯ ಬಾಲ ಹೆಚ್ಚು ಉದ್ದವಿದ್ದಷ್ಟೂ ಹೆಣ್ಣಿಗೆ ಇಷ್ಟ. ಗಂಡಿನ ಉದ್ದನೆಯ ಬಾಲವನ್ನು ನೋಡಿಯೇ ಹೆಣ್ಣು ಹಕ್ಕಿ ಮೋಹಗೊಳ್ಳುತ್ತದೆ.

ಬಾಲದಂಡೆ ಹಕ್ಕಿಗಳಲ್ಲಿ ಪ್ರಮುಖವಾಗಿ 2 ಜಾತಿಗಳಿವೆ. ಒಂದು ಕಡು ನೀಲಿ ತಲೆಯ ನಸುಗೆಂಪು ಬಣ್ಣದ ಹಕ್ಕಿ. ಇನ್ನೊಂದು ಕಪ್ಪು ತಲೆಯ ಸಂಪೂರ್ಣ ಬಿಳಿ ಮೈ ಹೊಂದಿರುವ ಹಕ್ಕಿ. ಬಾಲದಂಡೆಯಲ್ಲಿನ ನೀಲಿ ಬಣ್ಣದ ಇನ್ನೊಂದು ಪ್ರಭೇದ ಫಿಲಿಫೈನ್ಸ್ ನಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಭಾರತದಲ್ಲಿ ಈ ಹಕ್ಕಿ ‘ರಾಜ ಹಕ್ಕಿ’ ಎಂದು ಕರೆಸಿಕೊಂಡಿದೆ. ಬಾಲದಂಡೆಗಳಲ್ಲಿ ನಸುಗೆಂಪು ಬಣ್ಣದ ಹಕ್ಕಿ ವಲಸೆ ಹೋಗುವುದಿಲ್ಲ. ಆದರೆ ಬಿಳಿ ಬಣ್ಣದ ಪಕ್ಷಿ ಚಳಿಗಾಲದ ಪ್ರಾರಂಭದಲ್ಲಿ ಶ್ರೀಲಂಕಾದಿಂದ ಭಾರತಕ್ಕೆ ವಲಸೆ ಬರುತ್ತದೆ. ಮಳೆಗಾಲ ಆರಂಭವಾಗುತ್ತಿದ್ದಂತೆ ಹಿಂದಿರುಗುತ್ತವೆ.

Share This Article
Leave a Comment

Leave a Reply

Your email address will not be published. Required fields are marked *