ದುಬೈ: 2025ರ ಟಿ20 ಏಷ್ಯಾಕಪ್ (T20 Asia Cup) ಟೂರ್ನಿಯಲ್ಲಿ ಹ್ಯಾಂಡ್ ಶೇಕ್ ವಿವಾದ ತಣ್ಣಗಾಗುವ ಮುನ್ನವೇ ಭಾರತ – ಪಾಕಿಸ್ತಾನ (Ind vs Pak) ತಂಡಗಳು ಮತ್ತೊಮ್ಮೆ ಮುಖಾಮುಖಿಯಾಗಲು ಸಜ್ಜಾಗಿವೆ.
ಟೂರ್ನಿಯ ಲೀಗ್ ಸುತ್ತಿನಲ್ಲಿ ಅಗ್ರಸ್ಥಾನದಲ್ಲಿರುವ ಟೀಂ ಇಂಡಿಯಾ (Team India) ಹಾಗೂ 2ನೇ ಸ್ಥಾನದಲ್ಲಿರುವ ಪಾಕಿಸ್ತಾನ ತಂಡಗಳು ಭಾನುವಾರ (ಸೆ.21) ಮತ್ತೊಮ್ಮೆ ಮುಖಾಮುಖಿಯಾಗಲಿವೆ. ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ರಾತ್ರಿ 8 ಗಂಟೆಗೆ ಪಂದ್ಯ ನಡೆಯಲಿದೆ. ಇದನ್ನೂ ಓದಿ: ಕೆಲ ವಿಷಯಗಳು ಕ್ರೀಡಾ ಮನೋಭಾವಕ್ಕಿಂತಲೂ ದೊಡ್ಡದು – ಕೈಕುಲುಕದ್ದಕ್ಕೆ ಸೂರ್ಯ ಸ್ಪಷ್ಟನೆ
ಈಗಾಗಲೇ ಲೀಗ್ ಸುತ್ತಿನಲ್ಲಿ ತನ್ನ ಮೂರು ಪಂದ್ಯಗಳನ್ನಾಡಿರುವ ಪಾಕ್ 2 ರಲ್ಲಿ ಗೆದ್ದು 4 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದ್ದರೆ, ಭಾರತ ಎರಡೂ ಪಂದ್ಯಗಳಲ್ಲಿ ಗೆದ್ದು ಅಗ್ರಸ್ಥಾನದಲ್ಲಿದೆ. ಸೆ.19ರಂದು ಒಮನ್ ವಿರುದ್ಧ ತನ್ನ ಕೊನೆಯ ಲೀಗ್ ಪಂದ್ಯವನ್ನಾಡಲಿದ್ದು, ಭಾನುವಾರ ಸೂಪರ್ ಫೋರ್ ಮೊದಲ ಪಂದ್ಯದಲ್ಲಿ ಪಾಕ್ ವಿರುದ್ಧ ಮುಖಾಮುಖಿಯಾಗಲಿದೆ.
ಕಳೆದ ಭಾನುವಾರ ಪಾಕ್ ವಿರುದ್ಧ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿತ್ತು. ಆದ್ರೆ ಈ ಪಂದ್ಯದ ಟಾಸ್ ವೇಳೆ ಹಾಗೂ ಪಂದ್ಯದ ಗೆದ್ದ ಬಳಿಕ ಭಾರತೀಯ ಆಟಗಾರರು ಹ್ಯಾಂಡ್ ಶೇಕ್ ಮಾಡೋದನ್ನ ಬಿಟ್ಟಿದ್ದರು. ಸದ್ಯ ಹ್ಯಾಂಡ್ ಶೇಕ್ ವಿವಾದ ತೀವ್ರತೆ ಕಡಿಮೆಯಾಗುವ ಮುನ್ನವೇ ಭಾರತ-ಪಾಕ್ ಸೂಪರ್ ಫೋರ್‌ನಲ್ಲಿ ಮತ್ತೊಮ್ಮೆ ಮುಖಾಮುಖಿಯಾಗುತ್ತಿರುವುದು ಭಾರೀ ಥ್ರಿಲ್ಲಿಂಗ್ ಆಗಿಸಿದೆ. ಇದನ್ನೂ ಓದಿ: ಭಾರತ-ಪಾಕ್ ಕದನ ಯಾವಾಗಲೂ ಏಕೆ ರಣಕಣ? – ಆಕ್ರಮಣಕಾರಿ ಆಟಕ್ಕೆ ಟೀಂ ಇಂಡಿಯಾ ರೆಡಿ!
ಆಪರೇಷನ್ ಸಿಂಧೂರ ಬಳಿಕ ಮೊದಲ ಟೂರ್ನಿ
ಕಳೆದ ಏಪ್ರಿಲ್ 22ರಂದು ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿ ಹಾಗೂ ಆಪರೇಷನ್ ಸಿಂಧೂರ ಪ್ರತೀಕಾರದ ಬಳಿಕ ಭಾರತ ಪಾಕ್ ಮುಖಾಮುಖಿಯಾಗಿರುವ ಮೊದಲ ಟೂರ್ನಿ ಇದಾಗಿದೆ. ಲೀಗ್ ಸುತ್ತಿನಲ್ಲಿ ಮೊದಲಬಾರಿಗೆ ಮುಖಾಮುಖಿಯಾದಾಗ ಪಂದ್ಯ ರದ್ದುಗೊಳಿಸಬೇಕು, ಶತ್ರು ರಾಷ್ಟ್ರದ ವಿರುದ್ಧ ಭಾರತ ಆಡದಂತೆ ನಿಷೇಧಿಸಬೇಕು ಎಂಬ ಕೂಗು ಕೇಳಿಬಂದಿತ್ತು. ಸೋಷಿಯಲ್ ಮೀಡಿಯಾದಲ್ಲೂ ಬಾಯ್ಕಾಟ್ ಅಭಿಮಾನ ಸದ್ದು ಮಾಡಿತ್ತು. ಇದೆಲ್ಲದರ ಹೊರತಾಗಿಯೂ ಪಂದ್ಯವಾಡಿದ್ದ ಭಾರತ, ಮೈದಾನದಲ್ಲೇ ಪಾಕ್ ಆಟಗಾರರ ಮಾತ ಕಳೆದಿತ್ತು. ಸೆ.21ರ ಭಾನುವಾರ ಮತ್ತೊಮ್ಮೆ ಟೂರ್ನಿಯಲ್ಲಿ ಮುಖಾಮುಖಿಯಾಗಲಿದ್ದು, ತೀವ್ರತೆ ಹೇಗಿರಲಿದೆ ಎಂಬುದನ್ನು ಕಾದುನೋಡಬೇಕಿದೆ. ಇದನ್ನೂ ಓದಿ: India vs Pakistan: ಟಾಸ್ ಬಳಿಕ ಪಾಕ್ ನಾಯಕನಿಗೆ ಹ್ಯಾಂಡ್‌ಶೇಕ್ ಮಾಡದ ಸೂರ್ಯಕುಮಾರ್ ಯಾದವ್
ಪಹಲ್ಗಾಮ್ ನರಮೇಧ-ಸಿಂಧೂರ ಪ್ರತೀಕಾರ
ಕಾಶ್ಮೀರದ ಪಹಲ್ಗಾಮ್‌ನ ಬೈಸರನ್ ಕಣಿವೆ ಪ್ರದೇಶದಲ್ಲಿ ಕಾಲ ಕಳೆಯುತ್ತಿದ್ದ ಪ್ರವಾಸಿಗರ ಮೇಲೆ ಏ.22ರಂದು ಸೈನಿಕರ ಸೋಗಿನಲ್ಲಿ ಬಂದ ಉಗ್ರರು ಅಮಾಯಕರನ್ನ ಗುಂಡಿಟ್ಟು ಕೊಂದಿದ್ದರು. ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳಬೇಕೆಂದೇ ಪಣ ತೊಟ್ಟಿದ್ದ ಭಾರತ ʻಆಪರೇಷನ್ ಸಿಂಧೂರʼ ಹೆಸರಿನಡಿ ಪಾಕ್ ಮತ್ತು ಪಾಕ್ ಆಕ್ರಮಿತ ಪ್ರದೇಶದಲ್ಲಿದ್ದ ಉಗ್ರರ 9 ಅಡಗುತಾಣಗಳನ್ನ ಧ್ವಂಸ ಮಾಡಿತು. ಆದ್ರೂ ಮತ್ತೆ ಕಿತಾಪತಿ ಮಾಡಿದ್ದ ಪಾಕ್ ಭಾರತದ 15 ನಗರಗಳ ಮೇಲೆ ದಾಳಿ ನಡೆಸಲು ಹೊಂಚುಹಾಕಿತ್ತು. ಇದನ್ನರಿತ ಭಾರತ, ಪಾಕ್ ದಾಳಿಯನ್ನ ವಿಫಲಗೊಳಿಸಿದ್ದಲ್ಲದೇ ಲಾಹೋರ್‌ನಲ್ಲಿನ ರೆಡಾರ್ ಕೇಂದ್ರವನ್ನೇ ಛಿದ್ರ ಛಿದ್ರ ಮಾಡಿತು. ಪಾಕ್ ಜೊತೆಗಿನ ಈ ಸಂಘರ್ಷ ಇಡೀ ದೇಶವೇ ಭಯೋತ್ಪಾದನೆ ವಿರುದ್ಧ ಒಗ್ಗೂಡುವಂತೆ ಮಾಡಿತು. ಈ ಬೆಳವಣಿಗೆಯ ನಂತರ ಶತ್ರು ರಾಷ್ಟ್ರಗಳೊಂದಿಗಿನ ಎಲ್ಲ ಚಟುವಟಿಕೆಗಳಿಗೆ ಬ್ರೇಕ್ ಹಾಕಲಾಯಿತು. ಆದ್ದರಿಂದಲೇ ಇನ್ನೆಂದಿಗೂ ಭಾರತ – ಪಾಕಿಸ್ತಾನ ನಡುವೆ ಪಂದ್ಯವನ್ನಾಡಬಾರದು ಎಂಬ ಒತ್ತಾಯ ಭಾರತೀಯರದ್ದಾಗಿದೆ.