ದುಬೈ: ಕೊನೆಯವರೆಗೂ ಜಿದ್ದಾಜಿದ್ದಿಯಿಂದ ಕೂಡಿದ್ದ ಅಖಾಡದಲ್ಲಿ ಭಾರತ ಗೆದ್ದು ಬೀಗಿದೆ. ಅಭಿಷೇಕ್ ಶರ್ಮಾ (Abhishek Sharma), ಶುಭಮನ್ ಗಿಲ್ ಶತಕದ ಜೊತೆಯಾಟ, ಕೊನೆಯಲ್ಲಿ ತಿಲಕ್ ವರ್ಮಾ (Tilak Varma) ತಾಳ್ಮೆಯ ಬ್ಯಾಟಿಂಗ್ ನೆರವಿನಿಂದ ಟೀಂ ಇಂಡಿಯಾ ಪಾಕ್ ವಿರುದ್ಧ 6 ವಿಕೆಟ್‌ಗಳ ಗೆಲುವು ಸಾಧಿಸಿದೆ.
ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕ್ (Pakistan) 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿತ್ತು. ಗೆಲುವಿಗೆ 172 ರನ್‌ಗಳ ಗುರಿ ಪಡೆದ ಭಾರತ (Team India) 18.5 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿ ಜಯ ಸಾಧಿಸಿತು. ಇದನ್ನೂ ಓದಿ: ಕೆಲ ವಿಷಯಗಳು ಕ್ರೀಡಾ ಮನೋಭಾವಕ್ಕಿಂತಲೂ ದೊಡ್ಡದು – ಕೈಕುಲುಕದ್ದಕ್ಕೆ ಸೂರ್ಯ ಸ್ಪಷ್ಟನೆ
ಅಭಿ, ಗಿಲ್ ಶತಕದ ಜೊತೆಯಾಟಕ್ಕೆ ಪತರುಗುಟ್ಟಿದ ಪಾಕ್
ಆರಂಭಿಕರಾಗಿ ಕಣಕ್ಕಿಳಿದ ಅಭಿಷೇಕ್ ಶರ್ಮಾ ಹಾಗೂ ಶುಭಮನ್ ಗಿಲ್ ಜೊಡಿ ಮೊದಲ ಎಸೆತದಿಂದಲೇ ಸ್ಫೋಟಕ ಪ್ರದರ್ಶನಕ್ಕೆ ಮುಂದಾಯಿತು. ಕೇವಲ 8.4 ಓವರ್‌ಗಳಲ್ಲೇ 100 ರನ್ ಪೂರೈಸಿದ್ದ ಈ ಜೋಡಿ, ಮೊದಲ ವಿಕೆಟ್‌ಗೆ 9.5 ಓವರ್‌ಗಳಲ್ಲಿ 105 ರನ್‌ಗಳ ಜೊತೆಯಾಟ ನೀಡಿತ್ತು. ಈ ವೇಳೆ ಅಬ್ಬರಿಸುತ್ತಿದ್ದ ಗಿಲ್ 47 ರನ್ (28 ಎಸೆತ, 8 ಬೌಂಡರಿ) ಚಚ್ಚಿ ಫಹೀಮ್ ಅಶ್ರಫ್‌ಗೆ ವಿಕೆಟ್ ಒಪ್ಪಿಸಿದರು. ಈ ಬೆನ್ನಲ್ಲೇ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಹ್ಯಾರಿಸ್ ರೌಫ್ ಬೌಲಿಂಗ್‌ನಲ್ಲಿ ಕ್ಯಾಚ್ ನೀಡಿ ಶೂನ್ಯಕ್ಕೆ ಔಟಾದರು.
ಇವರಿಬ್ಬರ ವಿಕೆಟ್ ಬಳಿಕವೂ ಅಭಿಷೇಕ್ ಶರ್ಮಾ ತನ್ನ ಬ್ಯಾಟಿಂಗ್ ಆರ್ಭಟ ಮುಂದುವರಿಸಿದರು. ಪಾಕಿಸ್ತಾನದ ಟಾಪ್ ಬೌಲರ್‌ಗಳೇ ಪತರುಗುಟ್ಟುವಂತೆ ಮಾಡಿದರು. ಕ್ರೀಸ್‌ನಲ್ಲಿ ಅಬ್ಬರಿಸುತ್ತಿದ್ದ ಅಭಿ 13ನೇ ಓವರ್‌ನಲ್ಲಿ ಅಬ್ರಾರ್ ಅಹ್ಮದ್‌ಗೆ ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಸಿಡಿಸಲು ಯತ್ನಿಸಿ ಔಟಾದರು. ಸ್ಪೋಟಕ ಪ್ರದರ್ಶನ ನೀಡಿದ ಶರ್ಮಾ 39 ಎಸೆತಗಳಲ್ಲಿ 74 ರನ್ (5 ಸಿಕ್ಸರ್, 6 ಬೌಂಡರಿ) ಚಚ್ಚಿದರು.
ಬಳಿಕ ತಾಳ್ಮೆಯ ಬ್ಯಾಟಿಂಗ್ ಪ್ರದರ್ಶಿಸಿದ ತಿಲಕ್ ವರ್ಮಾ ಗೆಲುವಿನ ದಡ ಸೇರಿಸಿದರು. ತಿಲಕ್ ಅಯೇಯ 30 ರನ್ (19 ಎಸೆತ, 2 ಸಿಕ್ಸರ್, 2 ಬೌಂಡರಿ), ಸಂಜು ಸ್ಯಾಮ್ಸನ್ 13 ರನ್, ಗಳಿಸಿದ್ರೆ, ಹಾರ್ದಿಕ್ ಪಾಂಡ್ಯ ಅಜೇಯ 7 ರನ್ ಗಳಿಸಿದರು.
ಪಾಕಿಸ್ತಾನ ಪರ ಹ್ಯಾರಿಸ್ ರೌಫ್ 2 ವಿಕೆಟ್ ಕಿತ್ತರೆ, ಅಬ್ರಾರ್ ಅಹ್ಮದ್, ಫಹೀಮ್ ಅಶ್ರಫ್ ತಲಾ ಒಂದೊಂದು ವಿಕೆಟ್ ಕಿತ್ತರು. ಇದನ್ನೂ ಓದಿ: ಅಕ್ರಮ ಬೆಟ್ಟಿಂಗ್ ಆ್ಯಪ್ ಪ್ರಕರಣ – ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಸೇರಿ ಮೂವರಿಗೆ ಇಡಿ ಸಮನ್ಸ್
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಪಾಕ್ ಸಾಹಿಬ್‌ಜಾದಾ ಫರ್ಹಾನ್ ಅರ್ಧಶತಕದ ನೆರವಿನಿಂದ 171 ರನ್ ಗಳಿಸಿತ್ತು. ಆರಂಭಿಕನಾಗಿ ಕಣಕ್ಕಿಳಿದ ಫರ್ಹಾನ್ 45 ಎಸೆತಗಳಲ್ಲಿ 3 ಸಿಕ್ಸರ್, 5 ಬೌಂಡರಿ ಸಹಿತ 58 ರನ್ ಗಳಿಸಿ ಔಟಾದರು. ಇದರೊಂದಿಗೆ ಸೈಮ್ ಅಯೂಬ್ 21 ರನ್, ಫಖರ್ ಝಮಾನ್ 15 ರನ್, ಹುಸೇನ್ ಟಲಟ್ 10 ರನ್, ಮೊಹಮದ್ ನವಾಜ್ 21 ರನ್, ಸಲ್ಮಾನ್ ಅಘಾ 17 ರನ್ ಗಳಿಸಿದ್ರೆ ಕೊನೆಯಲ್ಲಿ ಫಹೀಮ್ ಅಶ್ರಫ್ ಸ್ಫೋಟಕ 20 ರನ್ ಚಚ್ಚಿದರು.
ಭಾರತ ಕಳಪೆ ಫೀಲ್ಡಿಂಗ್
8 ಓವರ್‌ಗಳಲ್ಲಿ ಅಭಿಷೇಕ್ ಶರ್ಮಾ 3, ಕುಲ್ದೀಪ್ ಯಾದವ್ 1, ಮಿಸ್‌ಫೀಲ್ಡ್ನಿಂದಾಗಿ 5 ಕ್ಯಾಚ್ ಕೈಚೆಲ್ಲಲಾಗಿತ್ತು. ಇದು ಸಾಲದು ಅಂತ 19ನೇ ಓವರ್‌ನ 5ನೇ ಎಸೆತದಲ್ಲಿ ಶುಭಮನ್ ಗಿಲ್ ಕೈಗೆ ಬಂದ ಈಸಿ ಕ್ಯಾಚನ್ನ ಕೈಚೆಲ್ಲಿದರು. ಇದು ಪಾಕ್‌ಗೆ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾಯಿತು.
ಟೀಂ ಇಂಡಿಯಾ ಪರ ಶಿವಂ ದುಬೆ 2 ವಿಕೆಟ್ ಕಿತ್ತರೆ, ಹಾರ್ದಿಕ್ ಪಾಂಡ್ಯ, ಕುಲ್‌ದೀಪ್ ಯಾದವ್ ತಲಾ ಒಂದೊಂದು ವಿಕೆಟ್ ಪಡೆದರು. ಇದನ್ನೂ ಓದಿ: ಫರ್ಹಾನ್ ಫಿಫ್ಟಿ – ಕೊನೇ 4 ಓವರ್‌ಗಳಲ್ಲಿ 50 ರನ್ ಬಿಟ್ಟುಕೊಟ್ಟ ಭಾರತ; ಗೆಲುವಿಗೆ 172 ರನ್‌ಗಳ ಗುರಿ