ಅಳುವ ಮೂಲಕ ಡಿಕೆಶಿ ಅನುಕಂಪ ಗಿಟ್ಟಿಸುವ ಕೆಲಸ ಮಾಡ್ತಿದ್ದಾರೆ- ಅಶ್ವಥ್ ನಾರಾಯಣ

Public TV
2 Min Read

ಬೆಂಗಳೂರು: ಭಾವನಾತ್ಮಕವಾಗಿ ಅಳುವ ಮೂಲಕ ಅನುಕಂಪ ಗಿಟ್ಟಿಸುವ ಕೆಲಸವನ್ನು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಮಾಡುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ ಹರಿಹಾಯ್ದಿದ್ದಾರೆ.

ಸದಾಶಿವನಗರದಲ್ಲಿರುವ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಮನೆಗೆ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ರಾಜಕೀಯ ಮಾಡುವುದನ್ನು ಬಿಡಬೇಕು. ಯಾವುದೇ ಪಕ್ಷವನ್ನು ದೂಷಿಸುವ ಕೆಲಸ ಮಾಡಬಾರದು. ಅವರು ನಡೆದುಕೊಂಡು ಬಂದಿರುವ ರೀತಿ, ಕಾನೂನು ಉಲ್ಲಂಘನೆ, ಭ್ರಷ್ಟಾಚಾರದಲ್ಲಿ ಪಾಲ್ಗೊಂಡಿರುವುದು ಇಡೀ ಸಮಾಜಕ್ಕೆ ಗೊತ್ತಿದೆ. ಕಾನೂನಿನ ರೀತಿ ಏನಾಗಬೇಕೋ ಅದು ಆಗುತ್ತದೆ ಎಂದು ತಿರುಗೇಟು ನೀಡಿದರು.

ಕಾನೂನಿನ ಚೌಕಟ್ಟಿನಲ್ಲಿ ಅವರು ಮಾಡಿರುವ ಕೆಲಸ ಒಳ್ಳೆಯದೋ ಅಥವಾ ಕೆಟ್ಟದ್ದೋ ಎಂದು ಪರಿಶೀಲಿಸಬೇಕು. ಅದನ್ನು ಇಡಿ ಅಧಿಕಾರಿಗಳು ಮಾಡುತ್ತಿದ್ದಾರೆ. ಅವರು ಮಾಡಿರುವ ಕರ್ಮಗಳಿಗೆ ಎಲ್ಲವೂ ಕಾಂಪ್ರಮೈಸ್ ಆದಲ್ಲಿ ಜನ ಎಲ್ಲಿಗೆ ಹೋಗಬೇಕು. ರಾಜಕಾರಣಿಗಳನ್ನು ಮಾತ್ರ ಟಾರ್ಗೆಟ್ ಮಾಡುತ್ತಿದ್ದಾರೆ, ಉದ್ಯಮಿಗಳ ವಿರುದ್ಧ ತನಿಖೆ ಮಾಡುತ್ತಿಲ್ಲ ಎಂಬ ಆರೋಪದ ಕುರಿತು ಉತ್ತರಿಸಿದ ಅವರು, ಹಾಗಾದರೆ ನೀವು ರಾಜಕೀಯ ಯಾಕೆ ಮಾಡುತ್ತೀರಾ, ನೀವು ವ್ಯಾಪಾರಿಗಳಾಗಿರಿ ಎಂದು ತಿರುಗೇಟು ನೀಡಿದರು.

ಈಗ ಅತ್ತು ಕರೆದು ಮಾಡಿದರೆ, ಏನೂ ಪ್ರಯೋಜನವಿಲ್ಲ. ಕಾನೂನಿನ ಅಡಿಯಲ್ಲಿ ಏನಾಗಬೇಕೋ ಅದು ಆಗುತ್ತಿದೆ. ಯಾರೇ ಉಪ್ಪು ತಿಂದವರು ನೀರು ಕುಡಿಯಲೇಬೇಕು, ಕುಡೀತಾ ಇದ್ದಾರೆ. ಕಳ್ಳಂಗೆ ಪಿಳ್ಳೆ ನೆಪ ಅನ್ನೋ ಹಾಗೆ ಮಾತಾಡುತ್ತಿದ್ದಾರೆ. ಇವರ ಭ್ರಷ್ಟಾಚಾರ, ಇಡೀ ಸಮಾಜಕ್ಕೆ ಗೊತ್ತಿದೆ. ಅದನ್ನು ನನ್ನ ಬಾಯಲ್ಲಿ ಯಾಕೆ ಹೇಳಿಸುತ್ತೀರಾ ಎಂದು ಡಿ.ಕೆ.ಶಿವಕುಮಾರ್ ವಿರುದ್ಧ ಹರಿಹಾಯ್ದಿದ್ದಾರೆ.

ಮೂರನೇ ದಿನವಾದ ಇಂದು ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗುವ ಮುನ್ನ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರು ಕಣ್ಣೀರು ಹಾಕಿದ್ದರು. ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನು ಕಣ್ಣಲ್ಲಿ ನೀರು ಹಾಕುತ್ತಿರೋದು ನಮ್ಮ ತಂದೆಗೆ ಪೂಜೆ ಮಾಡುವ ಅವಕಾಶವನ್ನು ನನ್ನ ಬಿಜೆಪಿ ಸ್ನೇಹಿತರು ಅಧಿಕಾರದ ಮುಖಾಂತರ ಕೊಟ್ಟಿಲ್ಲ. ನನಗೆ ದುಃಖ ಯಾಕೆ ಆಗುತ್ತಿದೆ ಎಂದರೆ ಇವತ್ತು ತಂದೆ ಹಾಗೂ ಹಿರಿಯರಿಗೆ ನಾನು, ನನ್ನ ತಮ್ಮ ಪೂಜೆ ಮಾಡಬೇಕಿತ್ತು. ಆದರೆ ಅವರಿಗೆ ಎಡೆ ಇಡಲು ಕೂಡ ಇವರು ನನಗೆ ಕೊಟ್ಟಿಲ್ಲ. ಪರವಾಗಿಲ್ಲ, ಇಡಿ ಕಚೇರಿಯಲ್ಲೇ ಎಲ್ಲರನ್ನೂ ಸ್ಮರಿಸಿಕೊಳ್ಳುತ್ತೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪಾರ್ಥಿಸುತ್ತೇನೆ ಎಂದು ಡಿಕೆಶಿ ಕಣ್ಣೀರಿಟ್ಟಿದ್ದರು.

ಉಪ್ಪು ತಿಂದವರು ನೀರು ಕುಡಿಬೇಕು ಎಂದು ನನ್ನ ಸ್ನೇಹಿತರು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೋಸ್ಕರ, ನಮ್ಮ ನಾಯಕರಿಗೋಸ್ಕರ, ನನ್ನನ್ನು ನಂಬಿದ ಜನಕ್ಕೋಸ್ಕರ ಹೋರಾಟ ಮಾಡಿಕೊಂಡು ನಾನು ಬಂದಿದ್ದೇನೆ. ಇಂದು ನಮ್ಮ ಅನೇಕ ಸ್ನೇಹಿತರು, ಕಾರ್ಯಕರ್ತರು, ನಾಯಕರು ಪಕ್ಷ ಬೆಳೆಸಿರುವುದರಿಂದ ಇಲ್ಲಿಯವರೆಗೆ ಬಂದಿದ್ದೇನೆ. ಇದನ್ನೆಲ್ಲಾ ಎದುರಿಸುವಂತಹ ಶಕ್ತಿ ದೇವರು ನನಗೆ ಕೊಟ್ಟಿದ್ದಾನೆ. ನಾನು ಯಾರಿಗೂ ಮೋಸ ಮಾಡಿಲ್ಲ, ಕಳ್ಳತನ ಮಾಡಿಲ್ಲ, ಜಮೀನನ್ನು ಒತ್ತುವರಿ ಮಾಡಿಕೊಂಡಿಲ್ಲ, ಲಂಚದ ಆರೋಪವಿಲ್ಲ, ಅಧಿಕಾರ, ಸರ್ಕಾರದ ಹಣ ದುರುಪಯೋಗ ಮಾಡಿಕೊಂಡಿಲ್ಲ. ನೇರವಾಗಿ ನುಡಿದಂತೆ ನಡೆದಿದ್ದೇನೆ ಎಂದು ಕಿಡಿ ಕಾರಿದ್ದರು.

Share This Article
Leave a Comment

Leave a Reply

Your email address will not be published. Required fields are marked *