ಎಲೆಕ್ಟ್ರಾನಿಕ್‌ ವಲಯದಲ್ಲಿ 36 ಸಾವಿರ ಕೋಟಿ ರೂ.ಗೂ ಹೆಚ್ಚು ಹೂಡಿಕೆ : ಅಶ್ವತ್ಥನಾರಾಯಣ

Public TV
3 Min Read

ಬೆಂಗಳೂರು: ಇನ್ನೂ ಕೆಲವೇ ದಿನಗಳಲ್ಲಿ ವಿವಿಧ ಕಂಪನಿಗಳು ರಾಜ್ಯದ ಎಲೆಕ್ಟ್ರಾನಿಕ್‌ ವಲಯದಲ್ಲಿ 36,804 ಕೋಟಿ ರೂ.ಗಳಷ್ಟು ಭಾರೀ ಬಂಡವಾಳ ಹೂಡಿಕೆ ಮಾಡಲು ಆಸಕ್ತಿ ತೋರಿದ್ದು, ತಮ್ಮ ಉತ್ಪಾದನಾ ಘಟಕಗಳನ್ನು ಕರ್ನಾಟಕದ (Karnataka) ಬೇರೆ ಬೇರೆ ಭಾಗಗಳಲ್ಲಿ ಆರಂಭಿಸಲಿವೆ ಎಂದು ಐಟಿ ಮತ್ತು ಬಿಟಿ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ (Ashwath Narayan) ಹೇಳಿದರು.

25ನೇ ವರ್ಷದ ಬೆಂಗಳೂರು ತಂತ್ರಜ್ಞಾನ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ ಅವರು, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಬೆಂಗಳೂರಿನ ಸಾಧನೆ ಅಭೂತಪೂರ್ವವಾಗಿದ್ದು, ಇಡೀ ದೇಶ ಮತ್ತು ಜಗತ್ತು ಕರ್ನಾಟಕದ ರಾಜಧಾನಿಯತ್ತ ನೋಡುತ್ತಿವೆ. ಐಟಿ ಮತ್ತು ಬಿಟಿ ವಲಯದಲ್ಲಿ ಈಗ ನಡೆಯುತ್ತಿರುವ 135 ಶತಕೋಟಿ ಡಾಲರ್‌ ಮೌಲ್ಯದ ರಫ್ತು ವಹಿವಾಟನ್ನು 2025ರ ಹೊತ್ತಿಗೆ 300 ಶತಕೋಟಿ ಡಾಲರ್‌ಗಳ ವಹಿವಾಟಾಗಿ ಬೆಳೆಸುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ತಿಳಿಸಿದರು.

ರಾಜ್ಯವು ಸೆಮಿಕಂಡಕ್ಟರ್, ಚಿಪ್‌, ವಿನ್ಯಾಸ ಇತ್ಯಾದಿ ಕ್ಷೇತ್ರಗಳ ತೊಟ್ಟಿಲಾಗುತ್ತಿದೆ. ಸೆಮಿಕಂಡಕ್ಟರ್‌ ಕ್ಷೇತ್ರದಲ್ಲಿ ಈಗಾಗಲೇ 22,900 ಕೋಟಿ ರೂ. ಮೊತ್ತದ ಹೂಡಿಕೆಗೆ ಒಡಂಬಡಿಕೆ ಆಗಿದೆ. ಐಎಸ್‌ಎಂಸಿ ಅನಲಾಗ್‌ ಫ್ಯಾಬ್‌ ಕಂಪನಿಯ ಈ ಪ್ರಸ್ತಾವನೆಗೆ ಈಗಾಗಲೇ ಒಪ್ಪಿಗೆ ಕೊಡಲಾಗಿದೆ. ಇದರ ಫ್ಯಾಬ್‌ ಸ್ಥಾವರವು ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರಲಿದೆ. ಇದರ ಜತೆಗೆ ಟೆಕ್ರೆನ್‌, ಎಕ್ಸೈಡ್, ಹಿಟಾಚಿ, ಬಾಶ್‌ ಕಂಪನಿಗಳ ಹೂಡಿಕೆ ಪ್ರಸ್ತಾವನೆಗಳಿಗೂ ಅನುಮೋದನೆ ನೀಡಲಾಗಿದೆ ಎಂದು ವಿವರಿಸಿದರು.

ತಂತ್ರಜ್ಞಾನಾಧಾರಿತ ಉದ್ಯಮಗಳ ಸಮರ್ಥ ಬೆಳವಣಿಗೆಗೆ ಭವಿಷ್ಯದಲ್ಲಿ ಇಡಬೇಕಾದ ಹೆಜ್ಜೆಗಳ ಬಗ್ಗೆ ರಾಜ್ಯ ಸರ್ಕಾರಕ್ಕೆ ಸ್ಪಷ್ಟತೆ ಇದೆ. ಡಿಜಿಟಲ್‌ ಇಂಡಿಯಾದ ಸಾಕಾರವು 140 ಕೋಟಿ ಭಾರತೀಯರಿಗೆ ಶಕ್ತಿ ತುಂಬಲಿದೆ ಎನ್ನುವ ಪ್ರಧಾನಿ ನರೇಂದ್ರ ಮೋದಿಯವರ ಗುರಿ ವಸ್ತುನಿಷ್ಠವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಗುಣಮಟ್ಟದ ಶಿಕ್ಷಣ ಮತ್ತು ಕೌಶಲ್ಯ ತರಬೇತಿಗೆ ಆದ್ಯತೆ ಕೊಡಲಾಗಿದ್ದು, ಉದ್ಯಮಗಳಿಗೆ ಬೇಕಾದ ನುರಿತ ಮಾನವ ಸಂಪನ್ಮೂಲವನ್ನು ನಿರಂತರವಾಗಿ ಪೂರೈಸುವ ದಕ್ಷ ವ್ಯವಸ್ಥೆಯನ್ನು ಸೃಷ್ಟಿಸಲಾಗುತ್ತಿದೆ ಎಂದರು.

ದೇಶದ ಮೊದಲನೆಯ ಮತ್ತು ನೂರನೆಯ ಯೂನಿಕಾರ್ನ್ ನವೋದ್ಯಮಗಳು ಬೆಂಗಳೂರು ನಗರದ ಕಂಪನಿಗಳಾಗಿವೆ. ದೇಶದ ಒಟ್ಟು ಸ್ಟಾರ್ಟಪ್‌ ವಲಯದ ಮೌಲ್ಯದಲ್ಲಿ ರಾಜ್ಯವು ಶೇಕಡ 55ರಷ್ಟು ಹೊಂದಿದೆ. ಯಾವುದೇ ಗಡಿಗಳ ಹಂಗಿಲ್ಲದ ಸೀಮಾತೀತ ಜಗತ್ತೇ ಭವಿಷ್ಯದ ಹಾದಿಯಾಗಿದ್ದು, ರಾಜ್ಯವು ಈ ವಾಸ್ತವಕ್ಕೆ ತನ್ನನ್ನು ತಾನು ತೆರೆದುಕೊಂಡು ಅರ್ಥಪೂರ್ಣ ನೀತಿಗಳನ್ನು ತಂದಿದೆ ಎಂದು ಪ್ರತಿಪಾದಿಸಿದರು.

ರಾಜ್ಯದಲ್ಲಿ ಮೂಲಸೌಲಭ್ಯ ಸುಧಾರಣೆ ಮತ್ತು ಸಂಚಾರ ವ್ಯವಸ್ಥೆಗಳ ಸಮಗ್ರ ಅಭಿವೃದ್ಧಿಗೆ ಸರ್ಕಾರವು ಪ್ರಾಶಸ್ತ್ಯ ನೀಡಿದೆ. ಉದ್ಯಮಿಗಳ ದನಿಗೆ ಕ್ಷಿಪ್ರವಾಗಿ ಸ್ಪಂದಿಸುತ್ತಿದ್ದು, ಬೆಂಗಳೂರಿನಿಂದ ಆಚೆಗೂ ಉದ್ಯಮಗಳು ನೆಲೆಯೂರುವಂತೆ ಮಾಡಲಾಗುತ್ತಿದೆ. ಈ ಮೂಲಕ ಉದ್ಯಮಗಳ ಬೆಳವಣಿಗೆಯಲ್ಲಿ ಸಮತೋಲನ ಮತ್ತು ಸುಸ್ಥಿರತೆಗಳನ್ನು ಸಾಧಿಸಲಾಗುತ್ತಿದೆ. ಒಟ್ಟಿನಲ್ಲಿ ಕೈಗಾರಿಕಾ ಬೆಳವಣಿಗೆಗೆ ಏನು ಮಾಡಬೇಕು ಎನ್ನುವ ಸ್ಪಷ್ಟತೆ ಸರ್ಕಾರಕ್ಕಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಪ್ರತಾಪ್ ಸಿಂಹ ಸಂಸದನಾಗಿರಲು ನಾಲಾಯಕ್: ಸಲೀಂ ಅಹ್ಮದ್

ರಾಜ್ಯವು ಎಲೆಕ್ಟ್ರಾನಿಕ್ಸ್, ಐಟಿ, ಬಿಟಿ, ಸ್ಟಾರ್ಟಪ್, ಇಎಸ್‌ಡಿಎಂ ವಲಯಗಳಲ್ಲಿ ಅತ್ಯುತ್ತಮ ಕಾರ್ಯ ಪರಿಸರವನ್ನು ಹೊಂದಿದೆ. ಬೆಂಗಳೂರು ನಗರವು ತಂತ್ರಜ್ಞಾನ ಕ್ಷೇತ್ರದಲ್ಲಿ ಉಜ್ವಲ ಅವಕಾಶಗಳ ತಾಣವಾಗಿದೆ. ರಾಜ್ಯದಲ್ಲಿ 22 ಸಾವಿರಕ್ಕೂ ಹೆಚ್ಚು ನವೋದ್ಯಮಗಳಿದ್ದು, ಇವುಗಳಲ್ಲಿ ಹೆಚ್ಚಿನವು ಡೀಪ್‌ಟೆಕ್‌ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ ಕ್ಷೇತ್ರಗಳ ಮೇಲೆ ಗಮನ ಕೇಂದ್ರೀಕರಿಸಿವೆ. ಈ ಮೂಲಕ ಕರ್ನಾಟಕದ ಡಿಜಿಟಲ್ ಆರ್ಥಿಕತೆಗೆ ಇವು ಸಿಂಹಪಾಲನ್ನು ಕೊಡುಗೆಯಾಗಿ ನೀಡಲಿವೆ ಎಂದರು. ಇದನ್ನೂ ಓದಿ: ಕನ್ನಡದಲ್ಲಿ ಮಾತಾಡಿ, ಬೆಂಗಳೂರು ಹೊಗಳಿದ ಪ್ರಧಾನಿ ಮೋದಿ

ತಲಾ 10 ಶತಕೋಟಿ ಡಾಲರ್‌ ಮೌಲ್ಯದ ನಾಲ್ಕು ಡೆಕಾಕಾರ್ನ್ ದರ್ಜೆಯ (10 ಶತಕೋಟಿ ಡಾಲರ್‌ ಮೌಲ್ಯ) ಕಂಪನಿಗಳು ಭಾರತದಲ್ಲಿದೆ. ಇವುಗಳ ಪೈಕಿ ಫ್ಲಿಪ್‌ಕಾರ್ಟ್, ಬೈಜೂಸ್‌ ಮತ್ತು ಸ್ವಿಗ್ಗಿ ಬೆಂಗಳೂರಿನವೇ ಆಗಿವೆ. ಇದಲ್ಲದೆ, ಸದ್ಯದಲ್ಲೇ ರಾಜ್ಯದ ಇನ್ನೂ 20 ನವೋದ್ಯಮಗಳು ಸದ್ಯದಲ್ಲೇ ಯೂನಿಕಾರ್ನ್ (100 ಕೋಟಿ ಡಾಲರ್‌ ಮೌಲ್ಯ) ಸ್ಥಾನಮಾನಕ್ಕೆ ಏರಲಿವೆ ಎಂದು ಹೇಳಿದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *