ಏಪ್ರಿಲ್ 8 ರಿಂದ 18ರವರೆಗೆ ರಾಷ್ಟ್ರೀಯ ಸಂಜೀವಿನಿ ಸರಸ್ ಮೇಳ: ಅಶ್ವಥ್ ನಾರಾಯಣ

Public TV
2 Min Read

ಬೆಂಗಳೂರು: ಮಹಿಳೆಯರ ಆರ್ಥಿಕ ಸಬಲೀಕರಣದ ಆಶಯವನ್ನುಳ್ಳ ರಾಷ್ಟ್ರೀಯ ಸಂಜೀವಿನಿ ಸರಸ್ ಮೇಳವು ಏ.8ರಿಂದ 18ರವರೆಗೆ ಇಲ್ಲಿನ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆಯಲಿದೆ. ಮೇಳವನ್ನು ಇದೇ 8ರಂದು ಸಂಜೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ ಎಂದು ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.

ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇಳದಲ್ಲಿ ಮಹಿಳಾ ಸ್ವಸಹಾಯ ಸಂಘಗಳು ತಯಾರಿಸಿದ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಇರಲಿದ್ದು, 300ಕ್ಕೂ ಹೆಚ್ಚು ಮಳಿಗೆಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದರು.

ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ, ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯಗಳ ಸಂಯುಕ್ತ ಆಶ್ರಯದಲ್ಲಿ ಸಂಜೀವಿನಿ ಸರಸ್ ಮೇಳ ನಡೆಯುತ್ತಿದ್ದು, ಇದರಲ್ಲಿ ಅಖಿಲ ಭಾರತ ಮಟ್ಟದ ಉತ್ಪನ್ನಗಳು ಗ್ರಾಹಕರಿಗೆ ಸಿಗಲಿವೆ. ರಾಷ್ಟ್ರೀಯ ಗ್ರಾಮೀಣ ಮತ್ತು ನಗರ ಜೀವನೋಪಾಯ ಅಭಿಯಾನದಡಿ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು. ಇದೇ ಸಂದರ್ಭದಲ್ಲಿ ಅವರು ಮೇಳದ ಲಾಂಛನವನ್ನು ಅನಾವರಣಗೊಳಿಸಿದರು. ಇದನ್ನೂ ಓದಿ: ನಮಗೆ ಮಾನವೀಯತೆಯಲ್ಲಿ ನಂಬಿಕೆ ಇದ್ದರೆ, ಬಿಜೆಪಿ ಮನುವಾದದಲ್ಲಿ ನಂಬಿಕೆ ಇಟ್ಟಿದೆ: ಸಿದ್ದರಾಮಯ್ಯ

ಈ ಮೇಳದಲ್ಲಿ ಕೈಮಗ್ಗದ ಉತ್ಪನ್ನಗಳು, ಕರಕುಶಲ ವಸ್ತುಗಳು, ಬುಡಕಟ್ಟು ಮತ್ತು ಸಾವಯವ ಉತ್ಪನ್ನಗಳು, ಅಲಂಕಾರಿಕ ವಸ್ತುಗಳು, ಮಣ್ಣಿನಿಂದ ತಯಾರಿಸಿದ ಪಾತ್ರೆಗಳು, ಮರದಿಂದ ಮಾಡಿದ ವಸ್ತುಗಳು, ಬಿದಿರು ಮತ್ತು ಸೆಣಬಿನ ವಸ್ತುಗಳು, ಸಾಂಬಾರ ಪದಾರ್ಥಗಳು, ಸಾಂಪ್ರದಾಯಿಕ ವಸ್ತ್ರಗಳು, ಕಲಾಕೃತಿಗಳು, ವರ್ಣಚಿತ್ರಗಳು, ಟೆರ್ರಾಕೋಟ ಮತ್ತು ಪಾರಂಪರಿಕ ಉತ್ಪನ್ನಗಳು ಹಾಗೂ ಸಂಸ್ಕರಿತ ಆಹಾರ ಪದಾರ್ಥಗಳು ಮುಂತಾದವು ಸಿಗಲಿವೆ ಎಂದು ಅವರು ಮಾಹಿತಿ ನೀಡಿದರು.

ಸ್ವಸಹಾಯ ಸಂಘಗಳ ಮಹಿಳಾ ಸದಸ್ಯರು ಇಲ್ಲಿ ತಮ್ಮ ಕೌಶಲಗಳನ್ನು ಪ್ರದರ್ಶಿಸುವ ಜತೆಗೆ ಗ್ರಾಹಕರೊಂದಿಗೆ ನೇರ ಸಂವಾದ ಮಾಡಬಹುದು. ಅಲ್ಲದೆ, ಉದ್ಯಮಶೀಲತೆಯನ್ನು ಉತ್ತೇಜಿಸುವ ಗುರಿಯೊಂದಿಗೆ ತರಬೇತಿ, ಕಾರ್ಯಾಗಾರ, ವಿಚಾರ ಸಂಕಿರಣ, ಕಾರ್ಪೋರೇಟ್ ಪ್ರಮುಖರ ಮಾತುಕತೆ ಸಿಎಸ್‍ಆರ್ ದುಂಡು ಮೇಜಿನ ಸಭೆಗಳು ಮತ್ತು ನವೋದ್ಯಮ ಹಾಗೂ ಎನ್.ಜಿ.ಒ ಅಧಿವೇಶನಗಳನ್ನು ಕೂಡ ಏರ್ಪಡಿಸಲಾಗಿದೆ ಎಂದು ನುಡಿದರು. ಇದನ್ನೂ ಓದಿ: ಶಿವಮೊಗ್ಗದ ಜನತೆ ಸಂತೃಪ್ತಿಯಿಂದ ಇರುವುದು ಡಿಕೆಶಿಗೆ ಬೇಕಿಲ್ಲ: ಕೆ.ಎಸ್.ಈಶ್ವರಪ್ಪ

ಉದ್ಯಮಶೀಲ ಮಹಿಳೆಯರಿಗೆ ಸರ್ಕಾರದ ನಾನಾ ಇಲಾಖೆಗಳು ಮತ್ತು ಬ್ಯಾಂಕ್‍ಗಳು ವಿವಿಧ ಸಾಲ ಸೌಲಭ್ಯ ಹಾಗೂ ಸೇವಾ ಉಪಕ್ರಮಗಳನ್ನು ಹೊಂದಿವೆ. ಮೇಳದಲ್ಲಿ ಈ ಬಗ್ಗೆಯೂ ಮಾಹಿತಿ ಒದಗಿಸುವ ಏರ್ಪಾಡನ್ನು ಕೂಡ ಮಾಡಲಾಗಿದೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *