ಜೆಇಇ, ನೀಟ್, ಸಿಇಟಿಗೆ ನೆರವು ನೀಡುವ ಗೆಟ್ ಸೆಟ್ ಗೋ ಕಾರ್ಯಕ್ರಮಕ್ಕೆ ಚಾಲನೆ

Public TV
2 Min Read

ಬೆಂಗಳೂರು: ಜೆಇಇ, ನೀಟ್ ಮತ್ತು ಸಿಇಟಿಯಂತಹ ಕಠಿಣ ಪ್ರವೇಶ ಪರೀಕ್ಷೆಗಳನ್ನು ತೆಗೆದುಕೊಳ್ಳಲಿರುವ ಎಂಜಿನಿಯರಿಂಗ್ ಹಾಗೂ ವೈದ್ಯಕೀಯ ಆಸಕ್ತ ವಿದ್ಯಾರ್ಥಿಗಳಿಗೆ ಉಚಿತ ನೆರವು ನೀಡುವ ಮೂರನೇ ವರ್ಷದ ಗೆಟ್-ಸೆಟ್-ಗೋ (GetCETgo) ಆನ್ ಲೈನ್ ತರಬೇತಿ ಕಾರ್ಯಕ್ರಮಕ್ಕೆ ಉನ್ನತ ಶಿಕ್ಷಣ ಸಚಿವ ಡಾ. ಸಿಎನ್ ಅಶ್ವತ್ಥನಾರಾಯಣ ಬುಧವಾರ ಚಾಲನೆ ನೀಡಿದರು.

ವಿಕಾಸಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಾಲತಾಣ (www.getcetgo.in) ಅನಾವರಣಗೊಳಿಸಿ ಮಾತನಾಡಿದ ಅಶ್ವತ್ಥನಾರಾಯಣ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಗಳು ಡಿಜಿಲರ್ನ್ ಎಜುಟೆಕ್ ಸಂಸ್ಥೆಯ ಜತೆಗೂಡಿ ರೂಪಿಸಿರುವ ಈ ವಿದ್ಯಾರ್ಥಿ ಸ್ನೇಹಿ ಉಪಕ್ರಮದ ಲಾಭ ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರಥಮ ಪಿಯುಸಿಯಿಂದಲೇ ಸಿಗುವಂತೆ ಮಾಡಲಾಗುವುದು. ಈ ಸಂಬಂಧ ಕಂಪನಿಯೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದರು.

ಜಾಲತಾಣದ ಜತೆಗೆ ಆ್ಯಪ್ ಮೂಲಕವೂ ಈ ಪ್ರಯೋಜನ ಪಡೆಯಬಹುದಾಗಿದ್ದು, ಇದನ್ನು ಗೂಗಲ್ ಪ್ಲೇಸ್ಟೋರ್‌ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು ಅಲ್ಲದೆ, ಯೂಟ್ಯೂಬ್ ಮೂಲಕವೂ ಇದರ ವಿಡಿಯೋಗಳನ್ನು ವೀಕ್ಷಿಸಬಹುದು. ಇದು ಪರಿಣಾಮಕಾರಿ ಕಲಿಕೆಯನ್ನು ಸುಲಭಗೊಳಿಸಿದ್ದು, ಕಳೆದ ಎರಡು ವರ್ಷಗಳಲ್ಲಿ ಈ ವೇದಿಕೆ 3.50 ಲಕ್ಷಕ್ಕೂ ಹೆಚ್ಚು ಲಾಗ್‌ಇನ್ ಕಂಡಿದೆ ಎಂದು ತಿಳಿಸಿದರು. ಇದನ್ನೂ ಓದಿ: ವೇದಿಕೆಯಲ್ಲೇ ಕೊಳ್ಳೇಗಾಲ ಟಿಕೆಟ್ ಫೈನಲ್ ಮಾಡಿದ ಬಿಎಸ್‌ವೈ- ಯಾರು ಅಭ್ಯರ್ಥಿ?

ಗೆಟ್ ಸೆಟ್ ಗೋ ಜಾಲತಾಣದಲ್ಲಿ ವಿದ್ಯಾರ್ಥಿಗಳು ತಮ್ಮ ಹೆಸರನ್ನು ಒಮ್ಮೆ ನೋಂದಾಯಿಸಿಕೊಂಡರೆ ಓದಿನ ಪುನರ್ಮನನಕ್ಕೆ ಅನುಕೂಲವಾಗುವ ವೀಡಿಯೋಗಳು, ಸಾರರೂಪದ ಪಿಪಿಟಿಗಳು, ಅಭ್ಯಾಸ ಪ್ರಶ್ನೆಗಳು, ಅಧ್ಯಾಯವಾರು ಪರೀಕ್ಷೆಗಳು, ಅಣಕು ಪರೀಕ್ಷೆಗಳು ಎಲ್ಲವೂ ಉಚಿತವಾಗಿ ಸಿಗುತ್ತವೆ. ಜತೆಗೆ ವಿದ್ಯಾರ್ಥಿಗಳು ಇಲ್ಲಿ ಪರೀಕ್ಷೆಯನ್ನು ಎದುರಿಸಿ, ತಮ್ಮ ಅಂಕ ಮತ್ತು ಸ್ಥಾನಗಳನ್ನು ತಿಳಿದುಕೊಳ್ಳಬಹುದು ಎಂದು ಹೇಳಿದರು.

ಎರಡು ವರ್ಷಗಳ ಹಿಂದೆ ಕೊರೊನಾ ಕಾಣಿಸಿಕೊಂಡಾಗ ಈ ಉಪಕ್ರಮವನ್ನು ಆರಂಭಿಸಲಾಯಿತು. ಈಗ ಭೌತಿಕ ತರಗತಿಗಳು ನಡೆಯುತ್ತಿದ್ದರೂ ಈ ನೆರವನ್ನು ವಿಸ್ತರಿಸಲಾಗುತ್ತಿದ್ದು, ಆನ್‌ಲೈನ್ ಕಲಿಕೆ ವರದಾನವಾಗಿದೆ. ಇದರಿಂದಾಗಿ ರಾಜ್ಯದ ಹೆಚ್ಚಿನ ವಿದ್ಯಾರ್ಥಿಗಳು ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಅಧ್ಯಯನಕ್ಕೆ ಪ್ರತಿಷ್ಠಿತ ಸಂಸ್ಥೆಗಳಿಗೆ ಪ್ರವೇಶ ಪಡೆಯುವುದು ಸಾಧ್ಯವಾಗಿದೆ. ಎರಡು ವರ್ಷಗಳಲ್ಲಿ 3.6 ಲಕ್ಷ ವಿದ್ಯಾರ್ಥಿಗಳು ಈ ವೀಡಿಯೋಗಳನ್ನು ವೀಕ್ಷಿಸಿದ್ದಾರೆ ಎಂದು ಅಶ್ವತ್ಥನಾರಾಯಣ ತಿಳಿಸಿದರು. ಇದನ್ನೂ ಓದಿ: ಅಭಿಷೇಕ್ ಅವರ ಅಪ್ಪನ ಮಗ, ಚುನಾವಣೆ ಸ್ಪರ್ಧೆ ಬಗ್ಗೆ ಅವನೇ ನಿರ್ಧರಿಸುತ್ತಾನೆ: ಸುಮಲತಾ

ಕಾರ್ಯಕ್ರಮದಲ್ಲಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ ಪ್ರದೀಪ್, ತಾಂತ್ರಿಕ ಶಿಕ್ಷಣ ಇಲಾಖೆಯ ನಿರ್ದೇಶಕ ಎನ್ ರವಿಚಂದ್ರನ್ ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *