ಸುಂದರ, ಸ್ವಸ್ಥ ಬೆಂಗಳೂರು ನಿರ್ಮಾಣಕ್ಕೆ ನಮ್ಮ ಆದ್ಯತೆ: ಡಾ. ಅಶ್ವತ್ಥನಾರಾಯಣ್

Public TV
2 Min Read

ಬೆಂಗಳೂರು: ಸುಂದರ ಮತ್ತು ಸ್ವಸ್ಥ ನಗರಕ್ಕಾಗಿ ನೂತನ ಪಾರ್ಕಿಂಗ್ ನೀತಿ, ಹಳೆ ವಾಹನಗಳ ಸ್ಕ್ರ್ಯಾಪ್ ಯಾರ್ಡ್, ಎಲ್ಲ ರಸ್ತೆಗಳಲ್ಲೂ ಕಡ್ಡಾಯ ಬೀದಿ ದೀಪ ಮತ್ತು ಉತ್ತಮ ಪಾದಚಾರಿ ರಸ್ತೆ ನಿರ್ಮಾಣ ಮಾಡವುದು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಬೆಂಗಳೂರು ಅಭಿವೃದ್ಧಿ ಕುರಿತ ಬಜೆಟ್ ಪೂರ್ವ ಸಭೆಯಲ್ಲಿ ಚರ್ಚಿಸಲಾಯಿತು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು 2020-21ನೇ ಸಾಲಿನ ಬಜೆಟ್ ಸಿದ್ಧಪಡಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದು, ಅದಕ್ಕೆ ಪೂರಕವಾಗಿ ಬೆಂಗಳೂರು ನಗರದ ಅಭಿವೃದ್ಧಿ ಸಂಬಂಧ ಬಜೆಟ್ ಪ್ರಸ್ತಾವನೆಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಬೇಕಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತಾವನೆಗಳನ್ನು ಸಿದ್ಧಪಡಿಸುವುದರ ಜತೆಗೆ ನಗರದಲ್ಲಿ ಆದಾಯ ಸಂಗ್ರಹಣೆ ಹೆಚ್ಚಿಸಲು ಕೈಗೊಳ್ಳಬಹುದಾದ ಕುರಿತಂತೆ ಸಭೆಯಲ್ಲಿ ಚರ್ಚಿಸಲಾಗಿದೆ.

ಬೆಂಗಳೂರು ನಗರದ ಪ್ರಮುಖ ರಸ್ತೆಗಳ ಅಭಿವೃದ್ಧಿ ಮತ್ತು ನಿರ್ಮಾಣ, ಬೃಹತ್ ನೀರುಗಾಲುವೆ ಅಭಿವೃದ್ಧಿ/ನವೀಕರಣ, ಸಂಚಾರ ವ್ಯವಸ್ಥೆ ಸುಧಾರಣೆ, ಸಮಗ್ರ ಟ್ರಾಫಿಕ್ ನಿರ್ವಹಣೆಗೆ ಏಕೀಕೃತ ನಿಯಂತ್ರಣ ಕೇಂದ್ರ, ಘನ ತ್ಯಾಜ್ಯ ನಿರ್ವಹಣೆ, ಕೆರೆಗಳ ಅಭಿವೃದ್ಧಿ ಮತ್ತು ಸಂರಕ್ಷಣೆಗೆ ಪೂರಕ ಯೋಜನೆಗಳಿಗೆ ಅನುದಾನ ಕೋರಲು ಸಭೆಯಲ್ಲಿ ನಿರ್ಧರಿಸಲಾಗಿದೆ.

ಬಹು ಹಂತದ ಕಾರ್ ಪಾರ್ಕಿಂಗ್ ಮತ್ತು ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆಯನ್ನೊಳಗೊಂಡ ಪಾರ್ಕಿಂಗ್ ನೀತಿ ಜಾರಿ ಹಾಗೂ ಹಳೆಯ ವಾಹನಗಳ ಸ್ಕ್ರ್ಯಾಪ್ ಯಾರ್ಡ್ ನಿರ್ಮಿಸುವ ಯೋಜನೆ ಬಗ್ಗೆ ಚರ್ಚೆಯಾಗಿದೆ. ನಗರದ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಶಿಸ್ತು ಬದ್ಧ ಕ್ರಮ ಕೈಗೊಳ್ಳಲು ಬಜೆಟ್‍ನಲ್ಲಿ ಅನುದಾನ ಕೇಳಲಾಗುವುದು ಎಂದು ಡಾ. ಅಶ್ವತ್ಥನಾರಾಯಣ್ ತಿಳಿಸಿದ್ದಾರೆ.

ಮುಂದಿನ 3 ವರ್ಷಗಳಲ್ಲಿ 1200 ಕಿ.ಮೀ. ಪಾದಚಾರಿ ರಸ್ತೆ ಅಭಿವೃದ್ಧಿ ಪಡಿಸಲಾಗುವುದು. ಪಾದಚಾರಿ ರಸ್ತೆಯ ಒತ್ತುವರಿಯನ್ನು ಕಿಂಚಿತ್ತೂ ಸಹಿಸಿಕೊಳ್ಳುವುದಿಲ್ಲ. ಅದೇ ರೀತಿ ಬೀದಿ ದೀಪಗಳನ್ನು ಕಡ್ಡಾಯವಾಗಿ ಅಳವಡಿಸಿ ಅದರ ಸೂಕ್ತ ನಿರ್ವಹಣೆಗೆ ಕ್ರಮ ಕೈಗೊಳ್ಳಲಾಗುವುದು. ರಸ್ತೆ ಬದಿಯ ಮರಗಳನ್ನು ಅಂದವಾಗಿ ಕತ್ತರಿಸಿ ನಗರ ಸುಂದರೀಕರಣಕ್ಕೆ ಆದ್ಯತೆ ನಿಡಲಾಗುವುದು. ಇದಲ್ಲದೇ ನಗರ 9 ಕಡೆಗಳಲ್ಲಿ ವಿದ್ಯುತ್ ಚಿತಾಗಾರ ವ್ಯವಸ್ಥೆ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಆದಾಯ ಹೆಚ್ಚಳಕ್ಕೆ ಕ್ರಮ
1. ಮುಂಬೈ ಮಾದರಿಯಲ್ಲಿ ನಗರದಲ್ಲೂ 24*7 ಶಾಪಿಂಗ್ ನಡೆಸಲು ಅವಕಾಶ ಕಲ್ಪಿಸುವ ಬಗ್ಗೆ ಚಿಂತನೆ ನಡೆದಿದ್ದು, ವಸತಿಯೇತರ ಪ್ರದೇಶಗಳಲ್ಲಿ ಮತ್ತು ಮದ್ಯ ಪೂರೈಕೆ ಮಾಡದ ಮಳಿಗೆಗಳಲ್ಲಿ ಮಾತ್ರ 24*7 ವಹಿವಾಟು ನಡೆಸಲು ಅವಕಾಶ
2. ಕೇಂದ್ರ ಸರ್ಕಾರ ಅನುಮೂದಿಸಿರುವ ಶಾಪ್ಸ್ ಅಂಡ್ ಎಸ್ಟಾಬ್ಲಿಷ್‍ಮೆಂಟ್ ಕಾಯ್ದೆ ಅನುಷ್ಠಾನದ ಮೂಲಕ ಬೆಂಗಳೂರು ಮಹಾನಗರ ಪಾಲಿಕೆಯ ಆದಾಯ ಹೆಚ್ಚಳಕ್ಕೆ ಕ್ರಮ.
3. ಸಾರಿಗೆ ಆಧಾರಿತ ಅಭಿವೃದ್ಧಿ ನೀತಿ (ಟಿಓಡಿ)ಯನ್ನು ಬಿಎಂಆರ್‌ಸಿಎಲ್ ಜಾಲ ಹಾಗೂ ಬಿಎಂಟಿಸಿ ನಿಲ್ದಾಣಗಳ ಬಳಿ ಅನುಷ್ಠಾನಗೊಳಿಸುವ ಮೂಲಕ ಮೂಲಸೌಕರ್ಯ ಯೋಜನೆಗಳಿಗೆ ಬಂಡವಾಳ ಆಕರ್ಷಣೆ.

ಪ್ರಮುಖ ಪ್ರಸ್ತಾವನೆಗಳು
*ಬೆಂಗಳೂರು ಟ್ರಾನ್ಸಿಟ್ ಚಾಲೆಂಜ್ ಫಂಡ್ ಪ್ರಸ್ತಾವನೆಗೆ 50 ಕೋಟಿ ರೂ. ಬೇಡಿಕೆ
*ಬೆಂಗಳೂರಿನಲ್ಲಿ ಗಾಳಿ ಗುಣಮಟ್ಟ ನಿಗಾ ಕೇಂದ್ರಗಳ ಸಂಖ್ಯೆ ದ್ವಿಗುಣಗೊಳಿಸಲು 52.5 ಕೋಟಿ ರೂ. ಬೇಡಿಕೆ
*ಬಿಬಿಎಂಪಿ ವ್ಯಾಪ್ತಿಯ ಉದ್ಯಾನವನಗಳನ್ನು ಅರಣ್ಯೀಕರಣ ಮಾಡಿ, ನಗರದ ಸೌಂದರ್ಯ ಹೆಚ್ಚಿಸುವ ಜತೆಗೆ ವಾಯು ಮಾಲಿನ್ಯ ನಿಯಂತ್ರಿಸಲು ಸಾಧ್ಯ. ಅದಕ್ಕಾಗಿ 300 ಕೋಟಿ ರೂ. ಅನುದಾನಕ್ಕೆ ಮನವಿ
*ಪಾಲಿಕೆ ವ್ಯಾಪ್ತಿಯಲ್ಲಿ ಕ್ರೀಡಾ ಮೂಲಭೂತ ಸೌಕರ್ಯಕ್ಕೆ 250 ಕೋಟಿ ರೂ. ಅನುದಾನಕ್ಕೆ ಮನವಿ

ಬೆಂಗಳೂರು ನಗರದ ಅಭಿವೃದ್ಧಿಗೆ ಕೈಗೊಳ್ಳಬಹುದಾದ ಯೋಜನೆಗಳ ಕುರಿತು ಉಪಮುಖ್ಯಮಂತ್ರಿ ಡಾ. ಸಿ ಎನ್ ಅಶ್ವತ್ಥನಾರಾಯಣ್ ಅವರ ನೇತೃತ್ವದಲ್ಲಿ ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಶಾಸಕರಾದ ಎಸ್.ಟಿ. ಸೋಮಶೇಖರ್, ಭೈರತಿ ಬಸವರಾಜು, ಎಸ್.ಆರ್.ವಿಶ್ವನಾಥ್, ಗೋಪಾಲಯ್ಯ, ಕೃಷ್ಣಪ್ಪ, ರಘು ಸೇರಿದಂತೆ ನಗರದ ಬಿಜೆಪಿ ಶಾಸಕರು ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *