ಬೆಂಗಳೂರು: ಆಶಾ ಕಾರ್ಯಕರ್ತೆಯರಿಗೆ (ASHA workers) 10 ಸಾವಿರ ರೂ. ಗೌರವ ಧನ ನೀಡುವ ಆದೇಶವನ್ನು ತಕ್ಷಣ ಜಾರಿಗೊಳಿಸಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಇಂದಿನಿಂದ ರಾಜ್ಯವ್ಯಾಪಿ ಹೋರಾಟ ಆರಂಭಿಸಿದೆ.
ರಾಜ್ಯದ ಎಲ್ಲಾ 31 ಜಿಲ್ಲೆಗಳಲ್ಲಿಯೂ ಆಶಾ ಕಾರ್ಯಕರ್ತೆಯರು ʻಮುಖ್ಯಮಂತ್ರಿಗಳೇ, ನಿಮ್ಮ ಮಾತು ಉಳಿಸಿರಿʼ ಎಂಬ ಘೋಷಣೆಯೊಂದಿಗೆ ಇಂದಿನಿಂದ ರಾಜ್ಯವ್ಯಾಪಿ ಹೋರಾಟ ಶುರು ಮಾಡಿದ್ದಾರೆ. ಆಗಸ್ಟ್ 14ರ ವರೆಗೂ ಹೋರಾಟ ಮುಂದುವರಿಯಲಿದೆ. ಮಳೆ, ಚಳಿಯನ್ನೂ ಲೆಕ್ಕಿಸದೇ, ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಆಶಾ ಕಾರ್ಯಕರ್ತೆಯರು ಪಾಲ್ಗೊಂಡು ಬೇಡಿಕೆ ಈಡೇರಿಸುವಂತೆ ಪಟ್ಟು ಹಿಡಿದಿದ್ದಾರೆ.
ಈ ವರ್ಷದ ಮೊದಲಿನಲ್ಲಿ ಮುಖ್ಯಮಂತ್ರಿಗಳು ಅವರ ಬೇಡಿಕೆಗಳನ್ನು ಒಪ್ಪಿಕೊಂಡು, 2025ರ ಏಪ್ರಿಲ್‌ನಿಂದಲೇ 10,000 ರೂ. ಗೌರವಧನ ನೀಡುವುದಾಗಿ ಘೋಷಿಸಿದ್ದರು. ಆದ್ರೆ, ಇದುವರೆಗೆ ಸರ್ಕಾರ ಘೋಷಣೆಯನ್ನ ಜಾರಿಗೊಳಿಸದ ಹಿನ್ನೆಲೆ ಆಶಾ ಕಾರ್ಯಕರ್ತೆಯರು ಹೋರಾಟಕ್ಕಿಳಿದಿದ್ದಾರೆ. ಈ ನಡುವೆ ಕಾರ್ಯಕ್ರಮ ನಿರ್ದೇಶಕ ಪ್ರಭುಗೌಡ ಅವರು ಎನ್‌ಎಚ್‌ಎಮ್ ಪರವಾಗಿ ಆಶಾ ಕಾರ್ಯಕರ್ತೆಯರ ಬೇಡಿಕೆ ಪತ್ರವನ್ನು ಸ್ವೀಕರಿಸಿ, ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರದಲ್ಲೇ ಉತ್ತರ ನೀಡುವುದಾಗಿ ತಿಳಿಸಿದ್ದಾರೆ.
ಮೈಸೂರು, ಗದಗ, ದಾವಣಗೆರೆ, ಚಿತ್ರದುರ್ಗ, ಕಾರವಾರ ಮತ್ತು ವಿಜಯಪುರ ಮುಂತಾದ ಮಳೆಯಾದ ಪ್ರದೇಶಗಳಲ್ಲಿಯೂ ಆಶಾ ಕಾರ್ಯಕರ್ತೆಯರು ಧರಣಿ ಮುಂದುವರಿಸಿದ್ದಾರೆ.
ಆಶಾ ಕಾರ್ಯಕರ್ತೆಯರ ಬೇಡಿಕೆಗಳೇನು?
* 2025ರ ಏಪ್ರಿಲ್‌ನಿಂದ ರಾಜ್ಯ ಸರ್ಕಾರದ ಗೌರವಧನ ಹಾಗೂ ಕೇಂದ್ರ ಸರ್ಕಾರದ ಪ್ರೋತ್ಸಾಹಧನವನ್ನು ಒಳಗೊಂಡಂತೆ 10,000 ರೂ. ನೀಡಬೇಕು.
* ಪ್ರಸಕ್ತ ವರ್ಷದ ಬಜೆಟ್‌ನಲ್ಲಿ ಇತರ ಯೋಜನಾ ಕಾರ್ಮಿಕರಿಗೆ ನೀಡಿದಂತೆ, ಆಶಾ ಕಾರ್ಯಕರ್ತೆಯರಿಗೂ 1,000 ರೂ. ಹೆಚ್ಚಳ ನೀಡಬೇಕು.
* ‘ರೇಷನಲೈಸೇಶನ್’ ಎಂಬ ಹೆಸರಿನಲ್ಲಿ ಯಾರನ್ನೂ ಕೆಲಸದಿಂದ ತೆಗೆದು ಹಾಕಬಾರದು.
* ಕಾರ್ಯಕ್ಷಮತೆ ಆಧಾರಿತ ಮೌಲ್ಯಮಾಪನ ನೀತಿಯನ್ನು ಹಿಂತೆಗೆದುಕೊಳ್ಳಬೇಕು.
* ಆಶಾ ಫೆಸಿಲಿಟೇಟರ್ ವ್ಯವಸ್ಥೆಯನ್ನು ಮುಂದುವರಿಸಿ, ಅವರಿಗೆ ಸೂಕ್ತ ವೇತನ ನೀಡಬೇಕು.
* ನಗರ/ಪಟ್ಟಣಗಳ ಆಶಾ ಕಾರ್ಯಕರ್ತೆಯರ ಗೌರವಧನವನ್ನು ಜೀವನಾವಶ್ಯಕ ವೆಚ್ಚಕ್ಕೆ ಅನುಗುಣವಾಗಿ 2,000 ರೂ. ಹೆಚ್ಚಿಸಬೇಕು.
* ನಿವೃತ್ತರಾದ ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ಪಶ್ಚಿಮ ಬಂಗಾಳ ಮಾದರಿಯಲ್ಲಿ ಒಮ್ಮೆ ನಿವೃತ್ತಿ ಭತ್ಯೆ ನೀಡಬೇಕು.
* 2025ರ ಜೂನ್–ಜುಲೈನಲ್ಲಿ ಕೇಂದ್ರ ಸರ್ಕಾರ ನೀಡಿದ ಹೆಚ್ಚುವರಿ ಮೊತ್ತವನ್ನು ರಾಜ್ಯದಲ್ಲಿ ಜಾರಿಗೆ ತರಬೇಕು.