ವಿಪಕ್ಷ ಸ್ಥಾನ ನಮಗೆ ಕೊಡಿ: ಸ್ಪೀಕರ್‌ಗೆ ಓವೈಸಿ ಮನವಿ

Public TV
1 Min Read

ಹೈದರಾಬಾದ್: ಕಾಂಗ್ರೆಸ್‍ಗಿಂತ ನಾವು ಹೆಚ್ಚು ಸ್ಥಾನಗಳನ್ನು ಹೊಂದಿದ್ದೇವೆ ನಮಗೆ ವಿರೋಧ ಪಕ್ಷದ ಸ್ಥಾನ ಕಲ್ಪಿಸಿಕೊಡಿ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ತೆಲಂಗಾಣ ವಿಧಾನಸಭಾ ಸ್ಪೀಕರ್‌ಗೆ ಮನವಿ ಸಲ್ಲಿಸಿದ್ದಾರೆ.

ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ರಾಜ್ಯದಲ್ಲಿ ಎಐಎಂಐಎಂ ಎರಡನೇ ಬೃಹತ್ ಪಕ್ಷವಾಗಿದೆ. ಕಾಂಗ್ರೆಸ್‍ಗಿಂತ ಹೆಚ್ಚು ಸ್ಥಾನಗಳನ್ನು ನಾವು ಹೊಂದಿದ್ದೇವೆ. ಹೀಗಾಗಿ ನಮಗೆ ವಿರೋಧ ಪಕ್ಷದ ಸ್ಥಾನ ನೀಡುವಂತೆ ಸ್ಪೀಕರ್ ಪೊಚರಾಮ್ ಶ್ರೀನಿವಾಸ್ ರೆಡ್ಡಿ ಅವರಿಗೆ ಮನವಿ ಸಲ್ಲಿಸಿದ್ದೇವೆ ಎಂದು ತಿಳಿಸಿದರು.

119 ಸಂಖ್ಯಾಬಲವಿರುವ ತೆಲಂಗಾಣ ವಿಧಾನಸಭೆಯಲ್ಲಿ ಟಿಆರ್‌ಎಸ್‌ 103, ಕಾಂಗ್ರೆಸ್ 6, ಎಐಎಂಐಎಂ 7, ಟಿಡಿಪಿ, ಬಿಜೆಪಿ ಹಾಗೂ ಪಕ್ಷೇತರ ತಲಾ 1 ಸ್ಥಾನ ಹೊಂದಿವೆ. ಹೀಗಾಗಿ ಟಿಆರ್‌ಎಸ್‌ಗೆ ನೀಡಿರುವ ಬೆಂಬಲವನ್ನು ಎಐಎಂಐಎಂ ಹಿಂಪಡೆದು, ವಿರೋಧ ಪಕ್ಷದ ಜವಾಬ್ದಾರಿ ಹೊರಲು ಮುಂದಾಗಿದೆ.

2018ರ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 19 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಈ ಪೈಕಿ ಶಾಸಕ ಉತ್ತಮ್ ಕುಮಾರ್ ರೆಡ್ಡಿ ಅವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸಂಸತ್‍ಗೆ ಆಯ್ಕೆಯಾಗಿದ್ದಾರೆ. ಹೀಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಕಾಂಗ್ರೆಸ್ 18 ಸ್ಥಾನಕ್ಕೆ ಕುಸಿದಿತ್ತು. ಬಳಿಕ 12 ಶಾಸಕರು ಕಾಂಗ್ರೆಸ್ ಬಿಟ್ಟು ಟಿಆರ್‍ಎಸ್ ಸೇರಿದ್ದಾರೆ. ಇದರಿಂದಾಗಿ ಕಾಂಗ್ರೆಸ್ ಬಲ 6ಕ್ಕೆ ಕುಸಿದಿದೆ. ಈ ಮೂಲಕ 91 ಸ್ಥಾನಗಳನ್ನು ಹೊಂದಿದ್ದ ಟಿಆರ್‌ಎಸ್‌ ಈಗ 103 ಸಂಖ್ಯಾಬಲಕ್ಕೆ ಏರಿಕೆ ಕಂಡಿದೆ.

ಒಟ್ಟು 2/3 ರಷ್ಟು ಶಾಸಕರು ಒಂದು ಪಕ್ಷವನ್ನು ತೊರೆದರೆ ಪಕ್ಷಾಂತರ ನಿಷೇಧ ಕಾಯ್ದೆಯ ಅಡಿ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಹೀಗಾಗಿ 12 ಮಂದಿ ಕೈ ಶಾಸಕರು ಕಾಂಗ್ರೆಸ್ ತೊರೆದರೂ ಅವರ ವಿರುದ್ಧ ಕ್ರಮ ಜರಗಿಸಲು ಕಾನೂನಿನಲ್ಲಿ ಅವಕಾಶವಿಲ್ಲ.

Share This Article
Leave a Comment

Leave a Reply

Your email address will not be published. Required fields are marked *