ನಾವು ಗುಂಡು ಹಾರಿಸುವುದನ್ನು ನೋಡಿ ಅಸಾದುದ್ದೀನ್ ಓವೈಸಿ ಕಾರೊಳಗೆ ಅವಿತರು:‌ ದಾಳಿಕೋರರ ಹೇಳಿಕೆ

Public TV
1 Min Read

ಲಕ್ನೋ: ಲೋಕಸಭೆ ಸಂಸದ ಮತ್ತು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ ಅವರ ಕಾರಿನ ಮೇಲೆ ಗುಂಡು ಹಾರಿಸಿದ ಆರೋಪ ಹೊತ್ತಿರುವ ಇಬ್ಬರು ವ್ಯಕ್ತಿಗಳು ಹೆಚ್ಚಿನ ಜನಸಂದಣಿಯಿಂದಾಗಿ ದಾಳಿಯನ್ನು ಮೂರು ಬಾರಿ ಸ್ಥಗಿತಗೊಳಿಸಿದ್ದರು ಎಂದು ಉತ್ತರ ಪ್ರದೇಶ ಪೊಲೀಸರು ತಮ್ಮ ಹೇಳಿಕೆಯನ್ನು ದಾಖಲಿಸಿದ್ದಾರೆ.

ಗುರುವಾರ ಮೀರತ್‌ನಿಂದ ದೆಹಲಿಗೆ ಆಗಮಿಸುತ್ತಿದ್ದ ಸಂಸದರ ಕಾರಿನ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿನ್‌ ಶರ್ಮ ಮತ್ತು ಶುಭಾಂ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಓವೈಸಿಗೆ ಝಡ್ ಮಾದರಿಯ ಭದ್ರತೆ ನೀಡಿದ ಕೇಂದ್ರ ಸರ್ಕಾರ

ಎಫ್‌ಐಆರ್‌ ಪ್ರಕಾರ, ಆರೋಪಿಯು ಆರಂಭದಲ್ಲಿ ಪೊಲೀಸರಿಗೆ ತೃಪ್ತಿಕರ ಉತ್ತರವನ್ನು ನೀಡಲಿಲ್ಲ. ಆದರೆ ಘಟನೆಯು ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದಾಗ, ಸಚಿನ್‌ ಕ್ಷಮೆಯಾಚಿಸಿದ್ದಾನೆ. ನಂತರ ಏನಾಯಿತು ಎಂಬುದನ್ನು ವಿವರಿಸಿದ್ದಾನೆ.

ನಾನು ದೊಡ್ಡ ರಾಜಕಾರಣಿಯಾಗಬೇಕೆಂದು ಬಯಸಿದ್ದೆ. ನಾನು ನಿಜವಾದ ದೇಶಭಕ್ತ. ಓವೈಸಿಯವರ ಭಾಷಣಗಳು ದೇಶಕ್ಕೆ ಹಾನಿಕಾರಕವೆಂದು ನಾನು ಕಂಡುಕೊಂಡಿದ್ದೇನೆ. ಅವರ ಮೇಲೆ ನಾನು ದ್ವೇಷ ಬೆಳೆಸಿಕೊಂಡೆ ಎಂದು ಸಚಿನ್‌ ತಿಳಿಸಿರುವುದಾಗಿ ಪೊಲೀಸರು ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ನಾನು ಸಾವಿಗೆ ಹೆದರಲ್ಲ – Z ಶ್ರೇಣಿಯ ಭದ್ರತೆ ತಿರಸ್ಕರಿಸಿದ ಓವೈಸಿ

ಅವರನ್ನು ಕೊಲ್ಲುವ ಉದ್ದೇಶದಿಂದ ಗೆಳೆಯ ಶುಭಂನನ್ನು ಸಂಪರ್ಕಿಸಿದ್ದೆ. ನಂತರ ಇಬ್ಬರೂ ಒಟ್ಟಿಗೆ ಸೇರಿ ಓವೈಸಿ ಅವರನ್ನು ಕೊಲ್ಲಲು ಯೋಜನೆ ರೂಪಿಸಿದ್ದೆವು. ಅವರು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾಗ, ಜನಸಂದಣಿಯಲ್ಲಿ ಗುಂಡು ಹಾರಿಸುವುದು ಸರಿಯಲ್ಲ ಎಂದು ಮೂರು ಬಾರಿ ದಾಳಿ ಮಾಡುವುದನ್ನು ಸ್ಥಗಿತಗೊಳಿಸಿದ್ದೆವು.

ಗುರುವಾರ ಅವರು ಕಾರಿನಲ್ಲಿ ತೆರಳುತ್ತಿದ್ದಾಗ ಗುಂಡಿನ ದಾಳಿ ನಡೆಸಲು ಮುಂದಾದೆವು. ಈ ವೇಳೆ ಓವೈಸಿ ನಮ್ಮನ್ನು ನೋಡಿ, ದಾಳಿಯಿಂದ ತಪ್ಪಿಸಿಕೊಳ್ಳಲು ತಲೆ ಬಗ್ಗಿಸಿದರು. ಈ ವೇಳೆ ಕಾರಿನ ಕೆಳಭಾಗಕ್ಕೆ ಗುರಿಯಿಟ್ಟು ಗುಂಡು ಹಾರಿಸಿದ್ದೆವು. ಓವೈಸಿ ಹೇಗೆ ಬದುಕುಳಿದರು ಎಂಬುದು ನಮಗೆ ತಿಳಿದಿಲ್ಲ ಎಂದು ಇಬ್ಬರೂ ವಿಚಾರಣೆ ವೇಳೆ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *