ಬಾಲಾಕೋಟ್ ಏರ್ ಸ್ಟ್ರೈಕ್‍ನಲ್ಲಿ 170 ಉಗ್ರರು ಬಲಿ – ಮೃತದೇಹವನ್ನು ನದಿಗೆ ಎಸೆದಿದ್ದ ಪಾಕ್

Public TV
2 Min Read

ನವದೆಹಲಿ: ಬಾಲಾಕೋಟ್ ಜೈಶ್ ಉಗ್ರರ ಕ್ಯಾಂಪ್ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆದಿದ್ದು ಸತ್ಯ, ಈ ದಾಳಿಯಲ್ಲಿ 135-170 ಉಗ್ರರು ಬಲಿಯಾಗಿದ್ದಾರೆ. ಜೊತೆಗೆ 11 ಮಂದಿ ಬಾಂಬ್ ನಿಪುಣರು ಸಾವನ್ನಪ್ಪಿದ್ದಾರೆ ಎಂದು ಇಟಲಿಯ ಪತ್ರಕರ್ತೆ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಸ್ಫೋಟಕ ಮಾಹಿತಿಯನ್ನು ಬಹಿರಂಗ ಪಡಿಸಿದ್ದಾರೆ.

ಈ ಬಗ್ಗೆ ಮಾಧ್ಯಮಕ್ಕೆ ಸಂದರ್ಶನ ನೀಡಿದ ವರದಿಗಾರ್ತಿ ಫ್ರಾನ್ಸೆಸ್ಕಾ ಮರೀನೊ ಅಂದು ಅಲ್ಲಿ ಏನಾಯ್ತು? ಬಳಿಕ ಪಾಕಿಸ್ತಾನ ಸೇನೆ ಏನು ಮಾಡಿತ್ತು ಎನ್ನುವುದನ್ನು ತಿಳಿಸಿದ್ದಾರೆ. ಈ ಮೂಲಕ ಭಾರತ ನಡೆಸಿದ್ದ ಏರ್ ಸ್ಟ್ರೈಕ್‍ನಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ, ನಷ್ಟವಾಗಿಲ್ಲ ಎಂದು ಸಾರಿದ್ದ ಪಾಕ್ ಮುಖವಾಡ ಈಗ ಮತ್ತೊಮ್ಮೆ ಕಳಚಿದೆ.

ಭಾರತ ದಾಳಿ ನಡೆಸಿದ 2 ತಾಸು ಬಳಿಕ ಪಾಕ್ ಸೇನೆ ಆಗಮಿಸಿತ್ತು. ಈ ಘಟನೆಯನ್ನು ಮರೆಮಾಚಲು ಕುನ್ಹಾರ್ ನದಿಗೆ ಉಗ್ರರ ಮೃತದೇಹಗಳನ್ನು ಎಸೆಯಲಾಗಿತ್ತು ಎಂಬ ಸ್ಫೋಟಕ ಮಾಹಿತಿಯನ್ನು ಅವರು ತಿಳಿಸಿದ್ದಾರೆ.

ಫೆಬ್ರವರಿ 26ರ ಮುಂಜಾನೆ 3:30ಕ್ಕೆ ಭಾರತೀಯ ವಾಯುಸೇನೆ ಬಾಲಕೋಟ್‍ನ ಉಗ್ರರ ನೆಲೆಗಳ ಮೇಲೆ ಬಾಂಬ್ ದಾಳಿ ನಡೆಸಿತ್ತು. ಬೆಳಗ್ಗೆ 6 ಗಂಟೆ ಹೊತ್ತಿಗೆ ಘಟನಾ ಸ್ಥಳಕ್ಕೆ ಪಾಕ್ ಸೇನೆಯ ತುಕಡಿ ಭೇಟಿ ನೀಡಿತ್ತು. ಬಾಲಾಕೋಟ್‍ನಿಂದ 20 ಕಿ.ಮೀ. ದೂರದ ಶಿಂಕಿಯಾರಿ ಶಿಬಿರದಿಂದ ಪಾಕ್ ಸೇನೆ ಘಟನಾ ಸ್ಥಳಕ್ಕೆ ಭೇಟಿ ನೀಡಿತ್ತು. ಶಿಂಕಿಯಾರಿ, ಪಾಕಿಸ್ತಾನದ ಸೇನೆಯ ಬೇಸ್ ಕ್ಯಾಂಪ್ ಆಗಿದ್ದು, ಇಲ್ಲಿ ಜೂನಿಯರ್ ಅಧಿಕಾರಿಗಳಿಗೆ ತರಬೇತಿ ನೀಡಲಾಗುತ್ತದೆ. ಬಳಿಕ ಸೇನಾ ಶಿಬಿರಕ್ಕೆ ಗಾಯಗೊಂಡಿದ್ದ ಹರ್ಕತ್ ಉಲ್ ಮುಜಾಹಿದೀನ್ (ಎಚ್‍ಯುಎಂ – ಜೈಶ್ ಸಂಘಟನೆಯ ಶಾಖೆ) ಉಗ್ರನನ್ನು ರವಾನಿಸಲಾಗಿತ್ತು. ಅಲ್ಲಿ ಸೇನಾ ವೈದ್ಯರಿಂದ ಎಚ್‍ಯುಎಂ ಉಗ್ರರಿಗೆ ಚಿಕಿತ್ಸೆ ನೀಡಲಾಗಿದೆ ಎಂದು ಮರೀನೊ ಅವರು ವರದಿಯಲ್ಲಿ ಉಲ್ಲೆಖಿಸಿದ್ದಾರೆ.

ಏರ್ ಸ್ಟ್ರೈಕ್‍ನಿಂದ ಕನಿಷ್ಟ 135ರಿಂದ 170 ಜೈಶ್ ಉಗ್ರರು ಸಾವನ್ನಪ್ಪಿದ್ದಾರೆ. ಇದರಲ್ಲಿ 20 ಉಗ್ರರು ಚಿಕಿತ್ಸೆ ವೇಳೆ ಸಾವನ್ನಪ್ಪಿದ್ದರೆ, 45 ಮಂದಿಗೆ ಚಿಕಿತ್ಸೆ ಮುಂದುವರಿದಿದೆ. ಚೇತರಿಕೆ ಕಂಡಿರುವ ಉಗ್ರರನ್ನು ಎಚ್‍ಯುಎಂ ಶಿಬಿರದಿಂದ ಪಾಕ್ ಸೇನೆ ಹೊರ ಬಿಡುತ್ತಿಲ್ಲ. ಏರ್ ಸ್ಟ್ರೈಕ್‍ನಲ್ಲಿ ಸತ್ತವರ ಪೈಕಿ 11 ಜನ ಬಾಂಬ್ ತಯಾರಿಕ ನಿಪುಣರುರಾಗಿದ್ದು, ಇವರಲ್ಲಿ ಇಬ್ಬರು ಅಫ್ಘಾನಿಸ್ತಾನದವರಾಗಿದ್ದಾರೆ. ಅಲ್ಲದೆ ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸರ ಭೇಟಿಯನ್ನು ಸಹ ನಿಷೇಧಲಾಗಿದೆ. ಮಾಹಿತಿ ಹಾಗೂ ತನಿಖೆಗೆ ಪಾಕ್ ಸೇನೆ ನಿರ್ಬಂಧಿಸಿತ್ತು ಎಂದು ವರದಿಯಲ್ಲಿ ತಿಳಿಸಿದ್ದಾರೆ.

ದಾಳಿ ನಡೆದ ಮರುರಾತ್ರಿ ಕುನ್ಹಾರ್ ನದಿ ತಟದಲ್ಲಿ ಪಾಕ್ ಸೇನೆಯ ವಾಹನಗಳು ಓಡಾಡಿದ್ದವು. ಹಾಗೆಯೇ ಭಾರತದ ಮೇಲೆ ಪ್ರತೀಕಾರಕ್ಕಾಗಿ ಜೈಶ್ ಉಗ್ರ ಸಂಘಟನೆ ಕಾದು ಕುಳಿತಿದೆ ಎಂದು ಸ್ಥಳೀಯರು ತಿಳಿಸಿದ್ದಾಗಿ ಅವರು ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಮೃತ ಉಗ್ರರ ಕುಟುಂಬದ ಸದಸ್ಯರನ್ನು ಜೈಶ್ ಉಗ್ರರು ಭೇಟಿ ಮಾಡಿ ಮಾಹಿತಿ ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ಅವರಿಗೆ ಹಣಕಾಸಿನ ನೆರವು ನೀಡಿ ಈ ಮಾಹಿತಿಯನ್ನು ಬಹಿರಂಗ ಪಡಿಸದಂತೆ ಕೇಳಿಕೊಂಡಿದ್ದಾರೆ ಎಂದು ಮೂಲಗಳನ್ನು ಆಧಾರಿಸಿ ಫ್ರಾನ್ಸೆಸ್ಕಾ ಮರೀನೊ ವರದಿ ಮಾಡಿದ್ದಾರೆ.

https://www.youtube.com/watch?v=pQdLGFl7IEI

Share This Article
Leave a Comment

Leave a Reply

Your email address will not be published. Required fields are marked *