ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ (Delhi Excise Policy Case) ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal), ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ ಹಾಗೂ ತೆಲಂಗಾಣದ ಎಂಎಲ್‌ಸಿ ಕೆ. ಕವಿತಾ ಕಳಂಕಮುಕ್ತರಾಗಿದ್ದಾರೆ.
ಪ್ರಮುಖ ತೀರ್ಪಿನಲ್ಲಿ ರೌಸ್ ಅವೆನ್ಯೂ ಕೋರ್ಟ್ (Rouse Avenue Court), ಕೇಜ್ರಿವಾಲ್, ಮನೀಶ್ ಸಿಸೋಡಿಯಾ (Manish Sisodia), ಕೆ. ಕವಿತಾ ಸೇರಿ ಎಲ್ಲಾ 23 ಆರೋಪಿಗಳನ್ನ ದೆಹಲಿ ಅಬಕಾರಿ ನೀತಿ ಪ್ರಕರಣದಿಂದ ಖುಲಾಸೆಗೊಳಿಸಿದೆ. ಅಬಕಾರಿ ನೀತಿ ರಚನೆಯಲ್ಲಿ ಕ್ರಿಮಿನಲ್ ಪಿತೂರಿಯಾಗಲಿ ಅಥವಾ ತಪ್ಪು ಮಾಡಿರುವ ಬಗ್ಗೆ ಯಾವುದೇ ಪುರಾವೆಗಳಿಲ್ಲ ಎಂದು ವಿಶೇಷ ನ್ಯಾಯಾಧೀಶರ ಪೀಠ ಹೇಳಿದೆ.
ಕೋರ್ಟ್ ಹೇಳಿದ್ದೇನು?
ಜಿತೇಂದ್ರ ಸಿಂಗ್ ಸಿಸೋಡಿಯಾ ಮತ್ತು ಇತರರೊಂದಿಗೆ 18ನೇ ಆರೋಪಿ ಎಂದು ಹೆಸರಿಸಲಾದ ಕೇಜ್ರಿವಾಲ್ ಅವರನ್ನ ಖುಲಾಸೆಗೊಳಿಸಲಾಗಿದೆ. ಆರೋಪಗಳಿಗೆ ಯಾವುದೇ ಅರ್ಹತೆ ಇಲ್ಲ ಎಂದಿದೆ. ಅಬಕಾರಿ ನೀತಿಯಲ್ಲಿ ಯಾವುದೇ ಪಿತೂರಿಯಾಗಲಿ ಅಥವಾ ಕ್ರಿಮಿನಲ್ ಉದ್ದೇಶಗಳಾಗಲಿ ಇರಲಿಲ್ಲ ಎಂದು ವಿಶೇಷ ನ್ಯಾಯಾಧೀಶರ ಪೀಠ ಹೇಳಿದೆ. ಇದನ್ನೂ ಓದಿ: ದೆಹಲಿ ಅಬಕಾರಿ ನೀತಿ ಹಗರಣ ಕೇಸ್ – ದೇಶದಲ್ಲೇ ಮೊದಲ ಬಾರಿಗೆ `ಎಎಪಿ’ ಅನ್ನು ಆರೋಪಿ ಎಂದು ಹೆಸರಿಸಿದ ಇಡಿ!
ಯಾವುದೇ ಸಾಕ್ಷ್ಯಗಳಿಲ್ಲದಿದ್ದರೂ ನಾಯಕರ ವಿರುದ್ಧ ದೋಷಾರೋಪ ಹೊರಿಸಿದ್ದಕ್ಕಾಗಿ ಸಿಬಿಐ ಅನ್ನು ಕೋರ್ಟ್ ತೀವ್ರವಾಗಿ ಖಂಡಿಸಿದೆ. ಸಿಬಿಐ ಚಾರ್ಜ್‌ಶೀಟ್ ಅನೇಕ ದೋಷಗಳಿಂದ ಕೂಡಿದೆ. ಸಾಕ್ಷಿಗಳ ಹೇಳಿಕೆಗಳಿಂದ ಬೆಂಬಲಿತವಾಗಿಲ್ಲ. ಸಿಸೋಡಿಯಾ ಅವರ ವಿರುದ್ಧ ನಾಮಕಾವಸ್ಥೆಗೆ ಪ್ರಕರಣ ದಾಖಲಿಸಲಾಗಿದೆ. ಕೇಜ್ರಿವಾಲ್ ವಿರುದ್ಧ ಸಾಕ್ಷ್ಯಾಧಾರಗಳಿಲ್ಲದೇ ಆರೋಪ ಹೊರಿಸಲಾಗಿದೆ ಎಂದು ಕೋರ್ಟ್ ಸಿಬಿಐ ಅನ್ನು ತರಾಟೆಗೆ ತೆಗೆದುಕೊಂಡಿದೆ. ಬಳಿಕ 23 ಆರೋಪಿಳ ವಿರುದ್ಧದ ಆರೋಪಗಳನ್ನು ಖುಲಾಸೆಗೊಳಿಸಿದೆ.
ಇನ್ನೂ ಕೋರ್ಟ್ ತೀರ್ಪು ಹೊರ ಬೀಳುತ್ತಿದ್ದಂತೆಯೇ ಭಾವುಕರಾದ ಅರವಿಂದ್ ಕೇಜ್ರಿವಾಲ್ ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ: ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಕೆ.ಕವಿತಾ ಬಂಧನ – ಜಾಮೀನು ನೀಡಲು ದೆಹಲಿ ಕೋರ್ಟ್ ನಿರಾಕರಣೆ
ಇಡಿ ಚಾರ್ಜ್‌ಶೀಟ್‌ನಲ್ಲಿ ಏನಿತ್ತು?
ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ್ದ ಇಡಿ ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ 2024 ರಲ್ಲಿ ಚಾರ್ಜ್ ಶೀಟ್ ಸಲ್ಲಿಸಿತ್ತು. ಆಮ್ ಆದ್ಮಿ ಪಕ್ಷವನ್ನು ಆರೋಪಿ ಎಂದು ಹೆಸರಿಸಿತ್ತು.
ಮದ್ಯ ಮಾರಾಟಗಾರರರಿಗೆ ಅನುಕೂಲವಾಗಲಿ ಎಂಬ ದಿಸೆಯಲ್ಲಿ ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಸೇರಿ ಹಲವು ನಾಯಕರು ನೀತಿ ರೂಪಿಸಿದ್ದಾರೆ. ದಕ್ಷಿಣ ಭಾರತದ ಹಲವು ವ್ಯಕ್ತಿಗಳು ಇದರ ಲಾಭ ಪಡೆದಿದ್ದಾರೆ. ಲಾಭದ ಸ್ವಲ್ಪ ಮೊತ್ತವನ್ನು ಎಎಪಿಗೆ ನೀಡಲಾಗಿದೆ. ಆ ಮೊತ್ತವನ್ನು ಗೋವಾ ಚುನಾವಣೆಗೂ ಬಳಸಲಾಗಿದೆ. ಅಲ್ಲದೇ ಈ ಪ್ರಕರಣದ ಮಾತುಕತೆ ನಡೆಸಲು ಕೇಜ್ರಿವಾಲ್ ಅವರು ಸೆವೆನ್ ಸ್ಟಾರ್ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದರು ಎಂಬುದಕ್ಕೆ ನಮ್ಮ ಬಳಿ ಪೂರಕ ದಾಖಲೆಗಳಿವೆ. ಅವರು ತಂಗಿದ್ದ ಹೋಟೆಲ್ ಬಿಲ್ ಅನ್ನು ಪ್ರಕರಣದ ಆರೋಪಿಯೊಬ್ಬರು ಭಾಗಶಃ ಪಾವತಿಸಿದ್ದಾರೆ ಎಂಬುದಕ್ಕೂ ಪುರಾವೆಗಳಿವೆ ಎಂಬ ಮಾಹಿತಿಯನ್ನ ಚಾರ್ಜ್‌ಶೀಟ್‌ನಲ್ಲಿ ದಾಖಲಿಸಿತ್ತು.
ಅರವಿಂದ ಕೇಜ್ರಿವಾಲ್ ಅವರನ್ನ 2024ರ ಮಾರ್ಚ್ 21 ರಂದು ಈ ಪ್ರಕರಣದಲ್ಲಿ ಮೊದಲ ಬಾರಿಗೆ ಬಂಧಿಸಲಾಗಿತ್ತು.



