ಕರ್ನಾಟಕದಲ್ಲೂ ಬಿಜೆಪಿಗೆ ಮತ್ತೆ ಅಧಿಕಾರ: ಅರುಣ್ ಸಿಂಗ್

Public TV
2 Min Read

ಬೆಂಗಳೂರು: ಉತ್ತರ ಪ್ರದೇಶ, ಉತ್ತರಾಖಂಡ, ಮಣಿಪುರ ಮತ್ತು ಗೋವಾ ರಾಜ್ಯಗಳಲ್ಲಿ ಬಿಜೆಪಿ ಎರಡನೇ ಬಾರಿ ಅಧಿಕಾರಕ್ಕೆ ಬಂದಿದೆ. ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದರು.

ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಪಕ್ಷವು ನಾಲ್ಕು ರಾಜ್ಯಗಳಲ್ಲಿ ಅಧಿಕಾರ ಪಡೆದಿದೆ. ಇದರಿಂದ ಕರ್ನಾಟಕದ ಕಾರ್ಯಕರ್ತರಲ್ಲೂ ಸಹ ಉತ್ಸಾಹ ಹೆಚ್ಚಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿಯೂ ಕೂಡಾ ಬಿಜೆಪಿ ಅಧಿಕಾರ ಪಡೆಯುವುದು ಖಚಿತ ಎಂದರು. ಇದನ್ನೂ ಓದಿ: ಗಂಡಸ್ತನ ಎಂದು ವಿವಾದ ಹುಟ್ಟಿಹಾಕುವುದು ಗಂಡಸ್ತನ ಅಲ್ಲ: ರೇಣುಕಾಚಾರ್ಯ

ಶೋಷಿತರು, ಬಡವರು, ಹಿಂದುಳಿದ ವರ್ಗದವರು ಮತ್ತು ರೈತರ ಕಡೆ ನಮ್ಮ ಪ್ರಧಾನಿ ವಿಶೇಷ ಗಮನ ಹರಿಸುತ್ತಾರೆ. ಉತ್ತರ ಪ್ರದೇಶ ಸೇರಿ ಈ ನಾಲ್ಕು ರಾಜ್ಯಗಳಲ್ಲೂ ಮುಖ್ಯಮಂತ್ರಿಗಳು ಅತ್ಯುತ್ತಮವಾಗಿ ಕೆಲಸ ಮಾಡಿದ್ದಾರೆ. ಇದರಿಂದಾಗಿ ಈ ಗೆಲುವು ನಮ್ಮದಾಗಿದೆ ಎಂದು ತಿಳಿಸಿದರು.

ಉತ್ತರ ಪ್ರದೇಶದಲ್ಲಿ ಪ್ರಿಯಾಂಕ ಗಾಂಧಿ ಪ್ರಚಾರ ಮಾಡಿದ ಪ್ರದೇಶಗಳಲ್ಲಿ ಕಾಂಗ್ರೆಸ್ ಪಕ್ಷವು ಠೇವಣಿ ಕಳೆದುಕೊಂಡು ಹೀನಾಯ ಸೋಲು ಕಂಡಿದೆ ಎಂದ ಅವರು, ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಒಡೆದ ಮನೆಯಾಗಿದೆ. ರಾಜ್ಯದಲ್ಲಿ ಜನಪರ ಮತ್ತು ಜನಪ್ರಿಯ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರು ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಬಿ.ಎಸ್.ಯಡಿಯೂರಪ್ಪ ಅವರ ನಾಯಕತ್ವವೂ ಇದೆ. ಆದ್ದರಿಂದ ಇಲ್ಲಿ ಬಿಜೆಪಿ ಬಹುಮತದೊಂದಿಗೆ ಅಧಿಕಾರ ಪಡೆಯಲಿದೆ. 150 ಸ್ಥಾನ ನಮಗೆ ಸಿಗಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ಆನ್‌ಲೈನ್‌ನಲ್ಲಿ ಆಯ್ಕೆ ನೀಡಿ – ಹಲಾಲ್ ವಿರುದ್ಧ ಕತ್ತಿಗೆ ಸಂಬರಗಿ ಪತ್ರ

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ. ಪಕ್ಷದ ಮುಖಂಡತ್ವದಲ್ಲೂ ಬದಲಾವಣೆ ಇಲ್ಲ ಎಂದು ಪ್ರಶ್ನೆಗೆ ಉತ್ತರಿಸಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರ ಮಾಡಿದ ಜನಪರ ಕೆಲಸಗಳನ್ನು ಮತದಾರರಿಗೆ ತಿಳಿಸಲಾಗುವುದು. ಅಭಿವೃದ್ಧಿ ಆಧಾರದಲ್ಲಿ ಚುನಾವಣೆ ಎದುರಿಸಿ ಗೆದ್ದು ಬರಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಸುಳ್ಳು ಆರೋಪಗಳನ್ನು ಹೊರಿಸುತ್ತಿದೆ ಎಂದು ಅವರು ಇನ್ನೊಂದು ಪ್ರಶ್ನೆಗೆ ಉತ್ತರ ನೀಡಿದರು. ಸಚಿವ ಸಂಪುಟ ವಿಸ್ತರಣೆ ಮತ್ತು ಸೇರ್ಪಡೆ ಆಗುವವರ ಕುರಿತು ಮುಖ್ಯಮಂತ್ರಿ ನಿರ್ಧರಿಸಲಿದ್ದಾರೆ ಎಂದರು. ರಾಹುಲ್ ಗಾಂಧಿ ಅವರ ಕರ್ನಾಟಕ ಭೇಟಿ ಮತ್ತು ಪ್ರಚಾರ ಸಾಧ್ಯತೆ ಬಗ್ಗೆ ಪತ್ರಕರ್ತರು ಗಮನ ಸೆಳೆದರು. ಐದು ರಾಜ್ಯಗಳಲ್ಲಿ ಕಾಂಗ್ರೆಸ್ ಸೋಲಿನ ನಂತರವೂ ರಾಹುಲ್ ಅವರಿಗೆ ಇಲ್ಲಿ ಪ್ರಚಾರ ಮಾಡುವ ತಾಕತ್ತಿದೆಯೇ ಎಂದು ಅವರು ನಗುತ್ತಲೇ ಪ್ರಶ್ನಿಸಿದರು.

Share This Article
Leave a Comment

Leave a Reply

Your email address will not be published. Required fields are marked *