ಬಂಧಿತ ಖಲಿಸ್ತಾನಿ ಉಗ್ರ ಮಹಾಕುಂಭ ಮೇಳದಲ್ಲಿ ದುಷ್ಕೃತ್ಯಕ್ಕೆ ಸಂಚು ರೂಪಿಸಿದ್ದ

Public TV
2 Min Read

– ಕೃತ್ಯ ಎಸಗಿ ಪೋರ್ಚುಗಲ್‌ಗೆ ಪರಾರಿಯಾಗಲು ಪ್ಲ್ಯಾನ್‌
– ಗುಪ್ತಚರ ಇಲಾಖೆಯ ಖಚಿತ ಮಾಹಿತಿಯಿಂದ ಇಂದು ಅರೆಸ್ಟ್‌

ಲಕ್ನೋ: ಪಾಕಿಸ್ತಾನದ (Pakistan) ಗುಪ್ತಚರ ಸಂಸ್ಥೆ ಐಎಸ್‌ಐ (ISI) ಜೊತೆ ಸಂಪರ್ಕ ಹೊಂದಿದ್ದ ಖಲಿಸ್ತಾನಿ ಉಗ್ರ ಮಹಾಕುಂಭ ಮೇಳದಲ್ಲಿ (Maha Kumbh Mela) ದುಷ್ಕೃತ್ಯ ಎಸಗಲು ಸಂಚು ರೂಪಿಸಿದ್ದ ಸ್ಫೋಟಕ ವಿಚಾರ ಈಗ ಬೆಳಕಿಗೆ ಬಂದಿದೆ.

ಬಂಧನಕ್ಕೆ ಒಳಗಾಗಿರುವ ಉಗ್ರ ಮಸಿಹ್ ಕುಂಭ ಮೇಳದಲ್ಲಿ ಕೃತ್ಯ ಎಸಗಲು ಮುಂದಾಗಿದ್ದ. ಆದರೆ ತೀವ್ರ ಭದ್ರತಾ ತಪಾಸಣೆಯಿಂದಾಗಿ ಈತ ತನ್ನ ಯೋಜನೆಯನ್ನು ಕಾರ್ಯಗತಗೊಳಿಸಲು ಸಾಧ್ಯವಾಗಲಿಲ್ಲ ಎಂದು ಉತ್ತರ ಪ್ರದೇಶ (Uttar Pradesh) ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ.

 

ಪ್ರಯಾಗ್‌ರಾಜ್ ಜಿಲ್ಲೆಯಲ್ಲಿ ಮಹಾಕುಂಭದ ಸಮಯದಲ್ಲಿ ದಾಳಿ ನಡೆಸಿದ ನಂತರ ಪೋರ್ಚುಗಲ್‌ಗೆ ಪಲಾಯನ ಮಾಡುವ ಉದ್ದೇಶ ಹೊಂದಿದ್ದ. ಆದರೆ ಪೊಲೀಸರ ಜಾಗರೂಕತೆಯಿಂದಾಗಿ ಆತನ ಯೋಜನೆಗಳು ವಿಫವಾಗಿತ್ತು. ಮಹಾಕುಂಭದ ಸಿದ್ಧತೆಗಳ ಸಮಯದಲ್ಲಿ ಮಸಿಹ್ ಲಕ್ನೋ ಮತ್ತು ಕಾನ್ಪುರಕ್ಕೆ ಭೇಟಿ ನೀಡಿದ್ದ ಎಂದು ಹೇಳಿದರು.

ಮಹಾಕುಂಭ ಪ್ರಾರಂಭವಾಗುವ ಮೊದಲು ಶಾಂತಿಯನ್ನು ಭಂಗಗೊಳಿಸುವ ಪ್ರಯತ್ನಗಳ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು. ಈ ಮಾಹಿತಿಯ ಮೇರೆಗೆ ಬಬ್ಬರ್ ಖಾಲ್ಸಾ ಇಂಟರ್ನ್ಯಾಷನಲ್ ಮತ್ತು ಐಎಸ್‌ಐ ಜೊತೆ ಸಂಪರ್ಕ ಹೊಂದಿದ್ದ ಮಸಿಹ್‌ನನ್ನು ಇಂದು ಕೌಶಂಬಿಯಿಂದ ಬಂಧಿಸಲಾಯಿತು ಎಂದು ತಿಳಿಸಿದರು. ಇದನ್ನೂ ಓದಿ: ಪಾಕಿಸ್ತಾನದ ಐಎಸ್‌ಐ ಜೊತೆ ಸಂಪರ್ಕ ಹೊಂದಿದ್ದ ಖಲಿಸ್ತಾನಿ ಉಗ್ರ ಯುಪಿಯಲ್ಲಿ ಅರೆಸ್ಟ್

ಭಯೋತ್ಪಾದಕ ಮಸಿಹ್ ಪಾಕಿಸ್ತಾನದ ಐಎಸ್‌ಐ ಜೊತೆ ನಿರಂತರ ಸಂಪರ್ಕದಲ್ಲಿದ್ದ. ಗಡಿಯಾಚೆಗಿನ ಹ್ಯಾಂಡ್ಲರ್‌ಗಳಿಂದ ಡ್ರೋನ್‌ಗಳ ಮೂಲಕ ಮದ್ದುಗುಂಡುಗಳು ಮತ್ತು ಶಸ್ತ್ರಾಸ್ತ್ರಗಳನ್ನು ಪಡೆಯುತ್ತಿದ್ದ. ಮಾಹಿತಿಯ ಪ್ರಕಾರ ಮಸಿಹ್‌ ಬಬ್ಬರ್ ಖಾಲ್ಸಾ ಇಂಟರ್ನ್ಯಾಷನಲ್ (ಬಿಕೆಐ) ನ ಜರ್ಮನಿ ಮೂಲದ ಮಾಡ್ಯೂಲ್‌ನ ಮುಖ್ಯಸ್ಥ ಸ್ವರ್ಣ್ ಸಿಂಗ್ ಅಲಿಯಾಸ್ ಜೀವನ್ ಫೌಜಿಗಾಗಿ ಕೆಲಸ ಮಾಡುತ್ತಿದ್ದ.

ಬಂಧನಕ್ಕೆ ಒಳಗಾದ ಉಗ್ರನಿಂದ 3 ಸಕ್ರಿಯ ಹ್ಯಾಂಡ್ ಗ್ರೆನೇಡ್‌ಗಳು, 2 ಸಕ್ರಿಯ ಡಿಟೋನೇಟರ್‌ಗಳು, 13 ಕಾರ್ಟ್ರಿಡ್ಜ್‌ಗಳು ಮತ್ತು 1 ವಿದೇಶಿ ನಿರ್ಮಿತ ಪಿಸ್ತೂಲ್ ಸೇರಿದಂತೆ ಅಕ್ರಮ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ.

ಉತ್ತರ ಪ್ರದೇಶ ಎಸ್‌ಟಿಎಫ್ ಮತ್ತು ಪಂಜಾಬ್ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಗುರುವಾರ ಮುಂಜಾನೆ ಕೌಶಂಬಿ (Kaushambi) ಜಿಲ್ಲೆಯಲ್ಲಿ ಉಗ್ರನನ್ನು ಬಂಧಿಸಿದ್ದರು.

Share This Article