ಮೋದಿ ಹತ್ಯೆ ಸಂಚಿನ ಹಿಂದಿತ್ತು ಬೆಂಗ್ಳೂರು ಲಿಂಕ್- ವರವರರಾವ್ ಡೈರಿಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ!

Public TV
2 Min Read

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಹತ್ಯೆಯ ಸಂಚಿಗೆ ಬೆಂಗಳೂರಿನ ಲಿಂಕ್ ಇತ್ತು ಎಂಬ ಸ್ಫೋಟಕ ಮಾಹಿತಿಯೊಂದು ಬಹಿರಂಗಗೊಂಡಿದೆ. ಹೈದರಾಬಾದಿನ ಕವಿ ವರವರರಾವ್ ಡೈರಿಯಲ್ಲಿ ಸ್ಫೋಟಕ ಮಾಹಿತಿ ಲಭ್ಯವಾಗಿದ್ದು, ಡೈರಿಯಲ್ಲಿ ಬೆಂಗಳೂರಿನ ಇಂಚಿಂಚು ಮಾಹಿತಿಗಳಿತ್ತು ಎಂದು ಹೇಳಲಾಗುತ್ತಿದೆ. ಡೈರಿಯಲ್ಲಿ ಬೆಂಗಳೂರಿನ ಮಾಹಿತಿ ಜೊತೆಗೆ ಕೆಲವು ಪ್ರಗತಿಪರರ ಪರಿಚಯದ ಬಗೆಗಿನ ವಿಷಯಗಳಿತ್ತು ಎಂದು ಹೇಳಲಾಗುತ್ತಿದೆ.

ಕವಿ ವರವರರಾವ್ ಬೆಂಗಳೂರಿನ 30ಕ್ಕೂ ಹೆಚ್ಚು ಪ್ರಗತಿಪರರೊಂದಿಗೆ ಸಂಪರ್ಕ ಹೊಂದಿದ್ದರೆಂದು ಹೇಳಲಾಗುತ್ತಿದ್ದು, ಈ ಸಂಬಂಧ ಈಗಾಗಲೇ ಇಬ್ಬರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ವರವರರಾವ್ ಬಳಿ ಪತ್ತೆಯಾಗಿದ್ದ 200ಕ್ಕೂ ಹೆಚ್ಚು ಪುಟಗಳುಳ್ಳ ಡೈರಿಯಲ್ಲಿ ಸಾಕಷ್ಟು ಮಾಹಿತಿಗಳು ಉಲ್ಲೇಖವಾಗಿದ್ದು, ಅಧಿಕಾರಿಗಳು ಡೈರಿಯನ್ನೇ ಆಧಾರವನ್ನಾಗಿರಿಸಿ ತನಿಖೆಯನ್ನು ಕೈಗೊಂಡಿದ್ದಾರೆ.

2017ರಲ್ಲಿ ನಡೆದ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಪ್ರತಿಕಾರವಾಗಿ ಮೋದಿ ಹತ್ಯೆಗೆ ಸಂಚು ರೂಪಿಸಲಾಗಿತ್ತಂತೆ. ಈ ಸಂಬಂಧ ವರವರ ರಾವ್ ಪದೇ ಪದೇ ಬೆಂಗಳೂರಿಗೆ ಬಂದಿರುವ ಮಾಹಿತಿಗಳು ಡೈರಿಯಲ್ಲಿ ಉಲ್ಲೇಖವಾಗಿದೆ. ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಪ್ರಧಾನಿ ಪ್ರಚಾರಕ್ಕಾಗಿ ಆಗಮಿಸಿದ್ದ 20 ಸಮಾವೇಶಗಳ ಭದ್ರತಾ ಮಾಹಿತಿಯನ್ನು ತಮ್ಮ ಬೆಂಬಲಿಗರಿಂದ ವರವರ ರಾವ್ ಪಡೆದುಕೊಂಡಿದ್ದರು. ಗೌರಿ ಹತ್ಯೆಯನ್ನು ಬಲಪಂಥಿಯರೇ ಮಾಡಿದ್ದು, ಅವರ ವಿರುದ್ಧ ಸೇಡು ತೀರಿಸಿಕೊಳ್ಳುವ ಸಲುವಾಗಿ ಬೆಂಗಳೂರಿನಲ್ಲಿಯೇ ತಮ್ಮ ಶಕ್ತಿ ಪ್ರದರ್ಶನ ತೋರಿಸಬೇಕೆಂದು ಎಂಬ ಮಾಹಿತಿಯನ್ನು ವರವರ ರಾವ್ ತಮ್ಮ ಬೆಂಬಲಿಗರಿಗೆ ರವಾನಿಸುತ್ತಿದ್ದರು ಎನ್ನಲಾಗುತ್ತಿದೆ.

ಮಾಜಿ ಪ್ರಧಾನಿ ರಾಜೀವ್‍ಗಾಂಧಿ ಅವರ ಹತ್ಯೆ ಮಾದರಿಯಲ್ಲೇ ಪ್ರಧಾನಿ ಮೋದಿ ಹತ್ಯೆಗೆ ನಕ್ಸಲರು ವ್ಯವಸ್ಥಿತ ಸಂಚು ರೂಪಿಸಿದ್ದರು. ನಿಷೇಧಿತ ನಕ್ಸಲ್ ಗುಂಪುಗಳ ಜೊತೆ ನಿಕಟ ಸಂಪರ್ಕದ ಖಚಿತ ಸಾಕ್ಷ್ಯಾಧಾರ ಲಭಿಸಿದ ಮೇಲೆಯೇ ವಿಚಾರವಾದಿಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಕೇಸ್‍ನಲ್ಲಿ ಹಾರ್ಡ್ ಡ್ರೈವ್ ಮುಖ್ಯವಾದದ್ದಾಗಿದೆ. ಅಲ್ಲದೆ, ಬಂಧಿತ ವಿಚಾರವಾದಿಗಳು ಹಾಗೂ ಸಿಪಿಎಂ ಕಾಮ್ರೇಡ್ಸ್‍ಗಳ ಮಧ್ಯೆ ‘ಮೋದಿ ರಾಜ್’ ಅಂತ್ಯದ ಬಗ್ಗೆ ಪತ್ರ ವ್ಯವಹಾರ ಸೇರಿದಂತೆ ಹಲವು ವಿಷಯಗಳು ವಿನಿಮಯ ಆಗಿವೆ ಅಂತ ಮಹಾರಾಷ್ಟ್ರ ಎಡಿಜಿ ಪರಂವೀರ್ ಸಿಂಗ್ ಹೇಳಿದ್ದಾರೆ.

ಈ ಮೂಲಕ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಶಾಂತಿಗೆ ಧಕ್ಕೆ ತರಲು ಪ್ಲಾನ್ ಮಾಡಿದ್ದರು. ಈ ಎಲ್ಲಾ ಸಾಕ್ಷ್ಯಾಧಾರಗಳನ್ನು ಆಧರಿಸಿಯೇ ದೇಶದ 7 ಕಡೆ ನಾವು ದಾಳಿ ನಡೆಸಿದ್ದೇವೆ. 7 ಕಡೆ ಐವರನ್ನು ಬಂಧಿಸಿದ್ದೇವೆ. ಬಂಧಿತರನ್ನು ಸುಪ್ರೀಂಕೋರ್ಟ್ ಗೃಹ ಬಂಧನದಲ್ಲಿರಿಸಿದೆ ಅಂತ ಮಹಾರಾಷ್ಟ್ರ ಪೊಲೀಸರು ಹೇಳಿದ್ದಾರೆ. ತೆಲುಗು ಕವಿ ವರವರ ರಾವ್, ವಕೀಲೆ ಸುಧಾ ಭಾರದ್ವಾಜ್, ಸಾಮಾಜಿಕ ಕಾರ್ಯಕರ್ತರಾದ ಅರುಣ್ ಫರೇರಾ, ಗೊನ್ಸಾಲ್ವೇಸ್ ಅವರನ್ನು ಪುಣೆ ಪೊಲೀಸರು ಮೂರು ದಿನಗಳ ಹಿಂದೆ ಅರೆಸ್ಟ್ ಮಾಡಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *