ಹಳ್ಳ ಹಿಡಿದ ಸುವರ್ಣ ಆರೋಗ್ಯ ಕರ್ನಾಟಕ ಸ್ಕೀಂ: ಪಬ್ಲಿಕ್ ಸ್ಟಿಂಗ್‍ನಲ್ಲಿ ಬಯಲಾಯ್ತು ಆಸ್ಪತ್ರೆಗಳ ಬಂಡವಾಳ!- ವಿಡಿಯೋ ನೋಡಿ

Public TV
5 Min Read

ಪವಿತ್ರ ಕಡ್ತಲ
ಬೆಂಗಳೂರು: ಇತ್ತೀಚೆಗೆ ಸಮ್ಮಿಶ್ರ ಸರ್ಕಾರ ಬಡವರಿಗಾಗಿಯೇ ಜಾರಿಗೊಳಿಸಿದ್ದ ಸುವರ್ಣ ಆರೋಗ್ಯ ಕರ್ನಾಟಕ ಯೋಜನೆಯು ಹಳ್ಳ ಹಿಡಿದಿದ್ದು, ಬಡವರಿಗೆ ನೀಡಬೇಕಾಗಿದ್ದ ಉಚಿತ ಸೇವೆಗಳು ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಹೇಳ ಹೆಸರಿಲ್ಲದೇ ಕಣ್ಮರೆಯಾಗಿದೆ.

ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಜಾರಿಗೆ ತಂದಿದ್ದ ಸುವರ್ಣ ಆರೋಗ್ಯ ಕರ್ನಾಟಕ ಯೋಜನೆಯು ಹೇಗೆ ಜನರ ಆರೋಗ್ಯವನ್ನು ಕಸಿದುಕೊಂಡಿದೆ ಎನ್ನುವುದು ಪಬ್ಲಿಕ್ ಟಿವಿಯ ರಹಸ್ಯ ಕಾರ್ಯಾಚರಣೆಯಲ್ಲಿ ಬಯಲಾಗಿದೆ.

ಹೌದು, ಕಾಯಿಲೆಗಳು ಬಡತನ ಸಿರಿತನ ನೋಡದೇ ಎಲ್ಲರಿಗೂ ಬರುತ್ತವೆ. ಈ ಹಿಂದೆ ಕರ್ನಾಟಕದಲ್ಲಿ ಬಡಜನರಿಗೆ ಖಾಸಗಿ ಆಸ್ಪತ್ರೆಯಲ್ಲಿಯೂ ಉಚಿತವಾಗಿ ವೈದ್ಯಕೀಯ ಸೌಲಭ್ಯ ಪಡೆಯುವುದಕ್ಕೆ ಏಳು ಯೋಜನೆಗಳು ಜಾರಿಯಲ್ಲಿತ್ತು. ಆದರೆ ನೂತನವಾಗಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರವು ನಾಲ್ಕು ತಿಂಗಳ ಹಿಂದೆ ಎಲ್ಲವನ್ನು ವಿಲೀನ ಮಾಡಿ ಸುವರ್ಣ ಆರೋಗ್ಯ ಕರ್ನಾಟಕ ಎಂಬ ಯೋಜನೆಯನ್ನು ಜಾರಿತಂದಿತ್ತು.

ಈ ಯೋಜನೆಯಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರೆಯದೇ ಇದ್ದಾಗ, ಖಾಸಗಿ ಆಸ್ಪತ್ರೆಗೆ ಹೋಗಬಹುದಾಗಿತ್ತು. ಅಲ್ಲದೇ ತುರ್ತು ಪರಿಸ್ಥಿತಿಯಲ್ಲಿ ಖಾಸಗಿ ಆಸ್ಪತ್ರೆಗೆ ನೇರವಾಗಿ ಹೋಗಬಹುದೆಂದು ನಿಯಾಮಳಿಯನ್ನು ಸಿದ್ದಪಡಿಸಿತ್ತು. ಬಿಪಿಎಲ್ ಕಾರ್ಡ್ ಬಳಕೆದಾರರಿಗೆ ಸಂಪೂರ್ಣ ಉಚಿತ ಹಾಗೂ ಎಪಿಎಲ್ ಕಾರ್ಡುದಾರರು ಆಸ್ಪತ್ರೆಯ ಶುಲ್ಕದ 30%ರಷ್ಟು ಮಾತ್ರ ಪಾವತಿಸಬೇಕು ಎಂದು ಯೋಜನೆ ತಿಳಿಸಿತ್ತು.

ಇಂತಹ ಯೋಜನೆಗಳನ್ನು ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರ ಭಾಷಣಗಳಲ್ಲಿ ಕೇಳಲು ಚಂದವೆನಿಸುತ್ತಿದೆ. ಆದರೆ ಈ ಯೋಜನೆಯ ಕುರಿತು ಪಬ್ಲಿಕ್ ಟಿವಿ ರಹಸ್ಯ ಕಾರ್ಯಾಚರಣೆ ನಡೆಸಿದಾಗ ಇದರ ಅಸಲಿ ಮುಖ ಹೊರಬಿದ್ದಿದೆ. ಸಮ್ಮಿಶ್ರ ಸರ್ಕಾರವು ಜನರಿಗೆ ಕೊಟ್ಟ ಹಸಿ ಹಸಿ ಭರವಸೆಯು ಕಾರ್ಯಾಚರಣೆಯಲ್ಲಿ ಹುಸಿಯಾಗಿದೆ. ಇಂತಹ ಆರೋಗ್ಯ ಯೋಜನೆಗಳನ್ನು ನಂಬಿಕೊಂಡು ಆಸ್ಪತ್ರೆಗಳಿಗೆ ಬಡವರು ಹೋದರೆ ಅವರಿಗೆ ಕಷ್ಟ ಗ್ಯಾರಂಟಿ.

ಪಬ್ಲಿಕ್ ಟಿವಿ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಆಸ್ಪತ್ರೆಗಳು ಯೋಜನೆಯ ಬಗ್ಗೆ ಏನು ಹೇಳಿದವು ಎಂಬುದನ್ನು ನೋಡಿ:

ಸ್ಟಿಂಗ್ ಆಪರೇಷನ್ – 1
ಸ್ಥಳ : ಪ್ರಸಿದ್ಧ ಖಾಸಗಿ ಆಸ್ಪತ್ರೆ, ಹೆಬ್ಬಾಳ.

ಪ್ರತಿನಿಧಿ : ಸುವರ್ಣ ಆರೋಗ್ಯ ಕರ್ನಾಟಕ ಸ್ಕಿಂ ಇದ್ಯಾ?
ಆಸ್ಪತ್ರೆಯವರು: ಕಾರ್ಡ್ ಇದ್ಯಾ?
ಪ್ರತಿನಿಧಿ : ಇಲ್ಲಿ ಅಪ್ಲೈ ಆಗುತ್ತಾ?
ಆಸ್ಪತ್ರೆಯವರು: ನಮ್ಮಲ್ಲಿ ಅಪ್ಲೈ ಆಗಲ್ಲ, ಈಗ ಯಾವ ಸರ್ಕಾರಿ ಸ್ಕೀಂ ಇಲ್ಲ. ಕಾರ್ಡ್ ಇದ್ರೆ 20 ಪರ್ಸೆಂಟ್ ಡಿಸ್ಕೌಂಟ್ ಸಿಗುತ್ತೆ ಅಷ್ಟೇ.
ಪ್ರತಿನಿಧಿ : ಎಮರ್‌ಜೆನ್ಸಿನಲ್ಲಿ ಫ್ರೀಯಾಗಿ ಸಿಗುತ್ತಲ್ಲ, ಆರೋಗ್ಯ ಕರ್ನಾಟಕ ಸ್ಕಿಂ!
ಆಸ್ಪತ್ರೆಯವರು: ಆ ಥರ ಯಾವುದು ಇಲ್ಲ. ರಾಷ್ಟ್ರೀಯ ಸುರಕ್ಷಾ ಭೀಮಾ ಯೋಜನೆ, ಯಶಸ್ವಿನಿ ಕಾರ್ಡ್ ಇರುತ್ತಲ್ಲ ಆ ಕಾರ್ಡ್ ಇರಬೇಕು, ಆದ್ರೇ ಆ ಸ್ಕೀಂ ನಮ್ಮಲ್ಲಿ ಇಲ್ಲ. ಒನ್ಲಿ 20 ಪರ್ಸೆಂಟ್ ಅಷ್ಟೇ ಡಿಸ್ಕೌಂಟ್ ಸಿಗೋದು.
ಪ್ರತಿನಿಧಿ : ಓ….. ಫುಲ್ ಫ್ರೀ ಇರಲ್ವಾ?
ಆಸ್ಪತ್ರೆಯವರು: ಅಷ್ಟೆಲ್ಲಾ ಇಲ್ಲ, ನಮ್ಮಲ್ಲಿ ಯಾವ ಸರ್ಕಾರಿ ಸ್ಕಿಂ ಇಲ್ಲ, ನಾವು ಸರ್ಕಾರದ ಜೊತೆ ಎಂಒಯು(ಸರ್ಕಾರದ ಜೊತೆ ಒಡಂಬಡಿಕೆ) ಸಹಿ ಹಾಕಿಲ್ಲ, ಸಹಿ ಹಾಕಿದ ಆಸ್ಪತ್ರೆಯಲ್ಲಿ ಮಾತ್ರ ನಿಮ್ಗೆ ಈ ಬೆನಿಫಿಟ್ ಸಿಗುತ್ತೆ.

ಸ್ಟಿಂಗ್ ಆಪರೇಷನ್ – 2
ಸ್ಥಳ – ಖಾಸಗಿ ಆಸ್ಪತ್ರೆ, ಸಂಪಿಗೆ ರಸ್ತೆ, ಮಲ್ಲೇಶ್ವರಂ.

ಪ್ರತಿನಿಧಿ : ಸುವರ್ಣ ಆರೋಗ್ಯ ಕರ್ನಾಟಕ ಇದ್ಯಾ?
ಆಸ್ಪತ್ರೆಯವರು: ಹಾ….ಯಾವುದು?
ಪ್ರತಿನಿಧಿ : ಸುವರ್ಣ ಆರೋಗ್ಯ ಕರ್ನಾಟಕ, ಗೌವರ್ನಮೆಂಟ್ ಹೆಲ್ತ್ ಸ್ಕೀಂ?
ಆಸ್ಪತ್ರೆಯವರು: ಇಲ್ಲಿ ಯಾವುದೇ ಸರ್ಕಾರಿ ಸ್ಕೀಂ ಇಲ್ಲ. ಆರೋಗ್ಯ ಕರ್ನಾಟಕ ಇಲ್ಲ. ಅನೌನ್ಸ್ ಆಗಿಲ್ಲ ನಮ್ಮಲ್ಲಿ ಇನ್ನು.
ಪ್ರತಿನಿಧಿ : ಎಮರ್‌ಜೆನ್ಸಿಗೂ ಸಿಗಲ್ವಾ?
ಆಸ್ಪತ್ರೆಯವರು: ಇಲ್ಲ.

ಸ್ಟಿಂಗ್ ಆಪರೇಷನ್ – 3
ಸ್ಥಳ: ಖಾಸಗಿ ಆಸ್ಪತ್ರೆ, ಮಲ್ಲೇಶ್ವರಂ.

ಪ್ರತಿನಿಧಿ : ಮೇಡಂ ಆರೋಗ್ಯ ಕರ್ನಾಟಕ ಸ್ಕೀಂ ಇದ್ಯಯಲ್ಲ ಇಲ್ಲಿ?
ಸಿಬ್ಬಂದಿ : ಇಲ್ಲ. ಸರ್ಕಾರಿ ಸ್ಕೀಂ ಯಾವುದೂ ಇಲ್ಲ.
ಪ್ರತಿನಿಧಿ : ಎಮರ್‌ಜೆನ್ಸಿನಲ್ಲೂ ಸರ್ಕಾರಿ ಹೆಲ್ತ್ ಸ್ಕೀಂ ಅಪ್ಲಿಕೇಬಲ್ ಆಗಲ್ವಾ?
ಸಿಬ್ಬಂದಿ : ಇಲ್ಲಿ ಹೆಲ್ತ್ ಸ್ಕೀಂ ಇಲ್ವೇ ಇಲ್ಲ.

ಸಾಕಷ್ಟು ಬ್ರಾಂಚ್ ಹೊಂದಿರುವ ಈ ಖಾಸಗಿ ಆಸ್ಪತ್ರೆಗಳ ಜೊತೆ ಸರ್ಕಾರ ಆರೋಗ್ಯ ಕರ್ನಾಟಕ ಸೇವೆ ನೀಡೋದಕ್ಕೆ ಇನ್ನು ಒಪ್ಪಂದಕ್ಕೆ ಮುಂದಾಗಿಲ್ಲ, ಅಥವಾ ಮನವೊಲಿಸುವ ಕೆಲಸವನ್ನು ಮಾಡಿಲ್ಲ. ಇನ್ನು ಆರೋಗ್ಯ ಕರ್ನಾಟಕದ ವೆಬ್‍ಸೈಟ್‍ನಲ್ಲಿ ಸೇವೆ ಲಭ್ಯವಿರುವ ಮಾರ್ಗೋಸಾ ರಸ್ತೆಯ ಖಾಸಗಿ ಆಸ್ಪತ್ರೆಯಲ್ಲಿ ವಿಚಾರಿಸಿದರೆ ಅಲ್ಲಿನ ಸಿಬ್ಬಂದಿ ನೀಡಿದ ಉತ್ತರ ನಮ್ಮನ್ನೆ ದಂಗಾಗಿಸಿತ್ತು.

ಸ್ಟಿಂಗ್ ಆಪರೇಷನ್ – 4
ಸ್ಥಳ : ಖಾಸಗಿ ಆಸ್ಪತ್ರೆ, ಮಾರ್ಗೋಸಾ ರಸ್ತೆ, ಮಲ್ಲೇಶ್ವರಂ

ಪ್ರತಿನಿಧಿ : ಆರೋಗ್ಯ ಕರ್ನಾಟಕ ಸ್ಕೀಂ ಇದ್ಯಾ ಇಲ್ಲಿ?
ಸಿಬ್ಬಂದಿ : ಇಲ್ಲ…ಇಲ್ಲಿ.
ಪ್ರತಿನಿಧಿ : ಆದ್ರೇ ಲಿಸ್ಟ್ ನಲ್ಲಿ ತೋರಿಸ್ತಾ ಇದೆ ನಿಮ್ಮ ಆಸ್ಪತ್ರೆ.
ಸಿಬ್ಬಂದಿ : ಹಾ…ಇದೆ, ಆದ್ರೆ ಸದ್ಯಕ್ಕೆ ಸಿಗ್ತಿಲ್ಲ, ಹೊಸದು ಆರೋಗ್ಯ ಕರ್ನಾಟಕ ಅಲ್ವಾ? ಅದು ಪೋರ್ಟಲ್‍ನಲ್ಲಿ ಏನೋ ಪ್ರಾಬ್ಲಂ ಆಗ್ತಿದೆ. ಅದಕ್ಕೆ ಈ ಸ್ಕೀಂ ನಿಲ್ಲಿಸಿದ್ವಿ. ಯಾವುದು ತಗೋತಾ ಇಲ್ಲ, ಇಲ್ಲಿ ಪ್ರೈವೇಟ್ ಇನ್ಶೂರೆನ್ಸ್ ಇದೆ ನೋಡಿ ನಮ್ಮದೇ.
ಪ್ರತಿನಿಧಿ : ಅದು ನಿಮ್ಮ ಆಸ್ಪತ್ರೆದು ಅಲ್ವಾ
ಸಿಬ್ಬಂದಿ : ಹಾ ಹೌದು, ಆರೋಗ್ಯ ಕರ್ನಾಟಕ ಪ್ರಾಬ್ಲಂ ಆಗಿದೆ ತಗೋತಾ ಇಲ್ಲ
ಪ್ರತಿನಿಧಿ : ಯಾವಾಗ ಆಗಬಹುದು?
ಸಿಬ್ಬಂದಿ : ಗೊತ್ತಿಲ್ಲ ಜೂನ್‍ನಿಂದಲೇ ಪ್ರಾಬ್ಲಂ ಆಗಿದೆ.


ಸ್ಟಿಂಗ್ ಆಪರೇಷನ್ – 5
ಸ್ಥಳ : ಆರೋಗ್ಯ ಕರ್ನಾಟಕ ಕಾರ್ಡ್ ವಿತರಣಾ ಕೇಂದ್ರ, ಸಂಪಿಗೆ ರೋಡ್, ಮಲ್ಲೇಶ್ವರಂ

ಪ್ರತಿನಿಧಿ : ಆರೋಗ್ಯ ಕರ್ನಾಟಕ ಕಾರ್ಡ್ ಇಷ್ಯೂ ಇಲ್ಲೇ ಅಲ್ವಾ ಮಾಡೋದು?
ಸಿಬ್ಬಂದಿ : ಹಾ ಹೌದು, ಆದ್ರೇ ಈಗ ಕ್ಲೋಸ್ ಆಗಿದೆ.
ಪ್ರತಿನಿಧಿ : ಕ್ಲೋಸ್ ಆಗಿದ್ಯಾ? ಅಷ್ಟು ಬೇಗ?
ಸಿಬ್ಬಂದಿ : ಮುಗಿದಿದೆ, ಬೆಳಗ್ಗೆ ಬನ್ನಿ ಟೋಕನ್ ಇಷ್ಯೂ ಮಾಡ್ತಾರೆ. ನೂರು ಜನ್ರಿಗೆ ಅಷ್ಟೇ ಮಾಡಿಕೊಡೋದು.
ಪ್ರತಿನಿಧಿ : ಆಗಿದ್ಯಾ ಈಗ ನೂರು ಕಾರ್ಡ್.
ಸಿಬ್ಬಂದಿ : ಹಾ ಆಗಿದೆ, ಬೇರೆ ದಿನ ಇನ್ನೂರು ಮಾಡ್ತೀವಿ, ಇವತ್ತು ನೂರು ಕಾರ್ಡ್ ಅಷ್ಟೇ ನಾಳೆ ಬನ್ನಿ

ಸೆಂಟರ್ ತೆರೆದು ಎರಡು ಗಂಟೆ ಕೂಡ ಆಗಿಲ್ಲ, ಆಗಲೇ ನೂರು ಕಾರ್ಡ್ ವಿತರಿಸಿದ್ದೇವೆ ಎಂದು ಬಂಡಲ್ ಬಿಟ್ಟ ಅಲ್ಲಿನ ಸಿಬ್ಬಂದಿ ಕಿವಿಗೆ ಇಯರ್ ಫೋನ್ ಸಿಗಿಸಿಕೊಂಡು ಸಾಂಗ್ ಕೇಳೋದ್ರಲ್ಲಿ ಬ್ಯೂಸಿಯಾಗಿದ್ದ. ನಮ್ಮ ಮುಂದಿನ ಮಾತನ್ನು ಕೇಳುವಷ್ಟು ತಾಳ್ಮೆ ಆತನಿಗೆ ಇರಲಿಲ್ಲ.

ನೋಡಿ ಇದು ಆರೋಗ್ಯ ಕರ್ನಾಟಕದ ಅಸಲಿ ಹಣೆಬರಹ. ರಾಜ್ಯದ ಜನರಿಗೆ ಕೇಂದ್ರದ ಆಯುಷ್ಮಾನ್ ಭಾರತವನ್ನು ರಾಜ್ಯ ಸರ್ಕಾರ ತಪ್ಪಿಸಿದೆ. ಇತ್ತ ಆರೋಗ್ಯ ಕರ್ನಾಟಕವೂ ರಾಜ್ಯದ ಜನರ ಪಾಲಿಗೆ ದಕ್ಕುತ್ತಿಲ್ಲ. ವಿಧಾನಸೌಧದಲ್ಲಿ ಕೂತು ಎಲ್ಲ ಸರಿಯಿದೆ ಅಂತಾ ಬಡಾಯಿ ಕೊಚ್ಚಿಕೊಳ್ಳುವ ಆರೋಗ್ಯ ಸಚಿವರು ಕೂಡಲೇ ಫೀಲ್ಡಿಗಿಳಿದು ಪರಿಶೀಲನೆಗೆ ಬರಬೇಕು. ಆಗಲೇ ನಿಮಗೆ ಅಸಲಿ ಸತ್ಯ ಗೊತ್ತಾಗುತ್ತೆ. ಇಲ್ಲದೇ ಹೋದರೆ ಬಡವರ ಆರೋಗ್ಯ ಭಾಗ್ಯ ಕಸಿದುಕೊಳ್ಳುವ ಶಾಪ ನಿಮಗೆ ತಟ್ಟುತ್ತದೆ. ದಯವಿಟ್ಟು ಆರೋಗ್ಯ ವಿಚಾರದಲ್ಲಿ ಚೆಲ್ಲಾಟವಾಡಬೇಡಿ ಇದು ಪಬ್ಲಿಕ್ ಟಿವಿ ಕಳಕಳಿ. ಇದನ್ನೂ ಓದಿ: ಆಯುಷ್ಮಾನ್ ಭಾರತ್ ಯೋಜನೆ ಸದ್ಯಕ್ಕೆ ಕರ್ನಾಟಕಕ್ಕೆ ಒಳಪಡಲ್ಲ!

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

https://www.youtube.com/watch?v=H6_XYSZLZu8

Share This Article
Leave a Comment

Leave a Reply

Your email address will not be published. Required fields are marked *