ಲಗೇಜ್‌ ವಿಚಾರಕ್ಕೆ ಗಲಾಟೆ; ಸ್ಪೈಸ್‌ಜೆಟ್‌ ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಸೇನಾಧಿಕಾರಿ

Public TV
1 Min Read

ಶ್ರೀನಗರ: ಇಲ್ಲಿನ ವಿಮಾನ ನಿಲ್ದಾಣದಲ್ಲಿ ಹಿರಿಯ ಸೇನಾ ಅಧಿಕಾರಿಯೊಬ್ಬರು ಸ್ಪೈಸ್‌ಜೆಟ್ ಕಂಪನಿಯ ನಾಲ್ವರು ಉದ್ಯೋಗಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವಿಮಾನಯಾನ ಸಂಸ್ಥೆ ಭಾನುವಾರ ತಿಳಿಸಿದೆ.

ಹೆಚ್ಚುವರಿ ಕ್ಯಾಬಿನ್ ಲಗೇಜ್ ವಿಚಾರಕ್ಕೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಸ್ಪೈಸ್‌ಜೆಟ್ ಸಿಬ್ಬಂದಿಗೆ ಬೆನ್ನುಮೂಳೆ ಮುರಿತ ಮತ್ತು ದವಡೆಗೆ ಗಂಭೀರ ಗಾಯ ಸೇರಿದಂತೆ ತೀವ್ರ ಗಾಯಗಳಾಗಿವೆ ಎಂದು ಸ್ಪೈಸ್‌ಜೆಟ್ ತಿಳಿಸಿದೆ.

ಗುಲ್ಮಾರ್ಗ್‌ನ ಹೈ ಆಲ್ಟಿಟ್ಯೂಡ್ ವಾರ್ಫೇರ್ ಸ್ಕೂಲ್ (HAWS) ನಲ್ಲಿ ನಿಯೋಜಿತರಾಗಿರುವ ಲೆಫ್ಟಿನೆಂಟ್ ಕರ್ನಲ್ ರಿತೇಶ್ ಕುಮಾರ್ ಸಿಂಗ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆದಾಗ್ಯೂ, ಈ ಪ್ರಕರಣದಲ್ಲಿ ಇಲ್ಲಿಯವರೆಗೆ ಯಾರನ್ನೂ ಬಂಧಿಸಲಾಗಿಲ್ಲ.

ಜು.26 ರಂದು ದೆಹಲಿಗೆ ಹೋಗುವ ವಿಮಾನದ ಚೆಕ್-ಇನ್ ಸಮಯದಲ್ಲಿ ಈ ಘಟನೆ ನಡೆದಿದೆ. ಪ್ರಯಾಣಿಕ ಲೆಫ್ಟಿನೆಂಟ್ ಕರ್ನಲ್ ಸಿಂಗ್ ಒಟ್ಟು 16 ಕೆಜಿ ತೂಕದ ಎರಡು ಕ್ಯಾಬಿನ್ ಬ್ಯಾಗ್‌ಗಳನ್ನು ತಂದಿದ್ದರು. ಇದು ವಿಮಾನಯಾನ ಸಂಸ್ಥೆಯ ಅನುಮತಿಸಲಾದ 7 ಕೆಜಿ ಮಿತಿಗಿಂತ ಎರಡು ಪಟ್ಟು ಹೆಚ್ಚು ಇತ್ತು. ಹೆಚ್ಚುವರಿ ಲಗೇಜ್‌ ಬಗ್ಗೆ ಸಿಬ್ಬಂದಿ ಮಾಹಿತಿ ನೀಡಿ, ಶುಲ್ಕ ಪಾವತಿಸುವಂತೆ ಹೇಳಿದ್ದಾರೆ. ಆದರೆ, ಸೇನಾಧಿಕಾರಿ ಹಣ ಪಾವತಿಸಲು ನಿರಾಕರಿಸಿದ್ದಾರೆ. ನಂತರ ಗಲಾಟೆಯಾಗಿ ಹಲ್ಲೆ ನಡೆದಿದೆ.

ಲೆಫ್ಟಿನೆಂಟ್‌ ಕರ್ನಲ್‌, ಉಕ್ಕಿನ ಸೈನ್‌ಬೋರ್ಡ್ ಸ್ಟ್ಯಾಂಡ್‌ನಿಂದ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸುತ್ತಿರುವ ವೀಡಿಯೋ ವೈರಲ್‌ ಆಗಿದೆ. ಹಣವನ್ನು ಪಾವತಿಸದೇ, ಬೋರ್ಡಿಂಗ್ ಪ್ರಕ್ರಿಯೆಯನ್ನು ಪೂರ್ಣಗೊಳಿಸದೆ ಏರೋಬ್ರಿಡ್ಜ್ ಅನ್ನು ಪ್ರವೇಶಿಸಿದ್ದಾರೆ. ಇದು ವಾಯುಯಾನ ಭದ್ರತಾ ಶಿಷ್ಟಾಚಾರಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಸ್ಪೈಸ್‌ಜೆಟ್‌ ತಿಳಿಸಿದೆ.

Share This Article