ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ – ಇಂಟರ್‌ನೆಟ್ ಸ್ಥಗಿತ, ಸ್ಥಳದಲ್ಲಿ ಸೇನೆ

Public TV
2 Min Read

ಇಂಫಾಲ್: ಪರಿಶಿಷ್ಟ ಪಂಗಡದ ಸ್ಥಾನಮಾನದ ಕುರಿತು ನ್ಯಾಯಾಲಯದ ಆದೇಶದ ವಿರುದ್ಧ ಬುಡಕಟ್ಟು ಗುಂಪುಗಳು ನಡೆಸುತ್ತಿರುವ ಪ್ರತಿಭಟನೆಯು (Protests) ಹಿಂಸಾಚಾರಕ್ಕೆ ತಿರುಗಿದ ಬೆನ್ನಲ್ಲೇ ಇಂಟರ್‌ನೆಟ್ ಸ್ಥಗಿತಗೊಂಡಿದ್ದು, ಸ್ಥಳಕ್ಕೆ ಸೇನೆ (Army) ಆಗಮಿಸಿದೆ.

ಮಣಿಪುರ (Manipur) ಹೊತ್ತಿ ಉರಿಯುತ್ತಿದೆ. ಇಂಫಾಲ್ (Imphal), ಚುರಾಚಂದ್‍ಪುರ ಹಾಗೂ ಕಾಂಗ್‍ಪೋಕ್ಪಿಯಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಸಿಕ್ಕ ಸಿಕ್ಕಲ್ಲೆಲ್ಲಾ ಪ್ರತಿಭಟನಾಕಾರರು ಬೆಂಕಿ ಹಚ್ಚುತ್ತಿದ್ದಾರೆ. ಇದರ ಬೆನ್ನಲ್ಲೇ ಮಣಿಪುರದ 8 ಜಿಲ್ಲೆಗಳಲ್ಲಿ ಕರ್ಫೂ ವಿಧಿಸಲಾಗಿದೆ. ಜೊತೆಗೆ ಹಿಂಸಾಚಾರವನ್ನು ನಿಯಂತ್ರಿಸಲು ಮಣಿಪುರ ಸರ್ಕಾರ ರಾಜ್ಯದಲ್ಲಿ ಮೊಬೈಲ್ ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸಿದೆ.

ಹೆಚ್ಚುತ್ತಿರುವ ಹಿಂಸಾಚಾರವನ್ನು ನಿಯಂತ್ರಿಸಲು ಸೇನೆ ಮತ್ತು ಅಸ್ಸಾಂ ರೈಫಲ್ಸ್‌ಗೆ ಕರೆ ನೀಡಲಾಗಿದೆ. ಪರಿಸ್ಥಿತಿಯನ್ನು ಹತೋಟಿಯಲ್ಲಿಡಲು ಸೇನೆ ಮತ್ತು ಅಸ್ಸಾಂ ರೈಫಲ್ಸ್‌ನಿಂದ ಇಂದು ಧ್ವಜ ಮೆರವಣಿಗೆ ನಡೆಸಲಾಯಿತು. ಹಿಂಸಾಚಾರದ ನಂತರ ರಾಜ್ಯದ ವಿವಿಧ ಪ್ರದೇಶಗಳಲ್ಲಿ 7,500ಕ್ಕೂ ಹೆಚ್ಚು ಜನರಿಗೆ ಸೇನಾ ಶಿಬಿರಗಳು ಮತ್ತು ಸರ್ಕಾರಿ ಕಚೇರಿಗಳಲ್ಲಿ ಆಶ್ರಯ ನೀಡಲಾಯಿತು.

ಬುಧವಾರ ಬಾಕ್ಸರ್ ಮೇರಿಕೋಮ್ ಟ್ವೀಟ್ ಮಾಡಿ, ನನ್ನ ರಾಜ್ಯ ಮಣಿಪುರ ಹೊತ್ತಿ ಉರಿಯುತ್ತಿದೆ. ದಯವಿಟ್ಟು ಸಹಾಯ ಮಾಡಿ ಎಂದು ಮನವಿ ಮಾಡಿದ್ದರು.

ಘಟನೆಯೇನು?:
ಬುಡಕಟ್ಟು ಜನಾಂಗದವರಲ್ಲದ ಮೀಟೈಸ್ ಸಮುದಾಯದ ಪರಿಶಿಷ್ಟ ಪಂಗಡದ ಸ್ಥಾನಮಾನದ ಬೇಡಿಕೆಯನ್ನು ವಿರೋಧಿಸಿ ಬುಧವಾರದಂದು, ಆಲ್ ಟ್ರೈಬಲ್ ಸ್ಟೂಡೆಂಟ್ ಯೂನಿಯನ್ ಮಣಿಪುರ ಚುರಾಚಂದ್‍ಪುರ ಜಿಲ್ಲೆಯ ಟೋರ್ಬಂಗ್ ಪ್ರದೇಶದಲ್ಲಿ ಬುಡಕಟ್ಟು ಐಕ್ಯತಾ ಮೆರವಣಿಗೆಗೆ ಕರೆ ನೀಡಿತ್ತು. ಈ ರ‍್ಯಾಲಿಯಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು. ಆದರೆ ಈ ಸಂದರ್ಭದಲ್ಲಿ ಆದಿವಾಸಿಗಳು ಮತ್ತು ಬುಡಕಟ್ಟು ಜನಾಂಗದವರ ನಡುವೆ ಹಿಂಸಾಚಾರ ನಡೆದಿದೆ. ಇದನ್ನೂ ಓದಿ: ಹೊಂದಾಣಿಕೆ ರಾಜಕೀಯ ಮಾಡಿಕೊಳ್ಳೋ ದಾರುಣ ಪರಿಸ್ಥಿತಿ ನನಗಾಗಲಿ, ತಂದೆಗಾಗಲಿ ಬಂದಿಲ್ಲ: ವಿಜಯೇಂದ್ರ

ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರು ಬುಧವಾರ ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡಬೇಕಿದ್ದ ಸ್ಥಳವನ್ನು ಧ್ವಂಸಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ನಿಯಂತ್ರಿಸಲು ರಾಜ್ಯದ ಇತರ ಭಾಗಗಳಿಂದಲೂ ಹೆಚ್ಚುವರಿ ಭದ್ರತಾ ಪಡೆಗಳು ಸ್ಥಳಕ್ಕೆ ಧಾವಿಸಿವೆ. ಇದನ್ನೂ ಓದಿ: ಅಮಿತ್ ಶಾ ತಮ್ಮ ಮಗನನ್ನು ಬಜರಂಗದಳದ ರಾಷ್ಟ್ರಾಧ್ಯಕ್ಷನನ್ನಾಗಿ ಮಾಡಲಿ – ಕಾಂಗ್ರೆಸ್ ಕಿಡಿ

Share This Article