Exclusive: ಅರ್ಜುನ್ ಸರ್ಜಾ ನಿರ್ದೇಶನದ ಚಿತ್ರದಲ್ಲಿ ಉಪ್ಪಿ ಅಣ್ಣನ ಮಗ ನಟಿಸುತ್ತಾರಾ? ನಿರಂಜನ್ ಸ್ಪಷ್ಟನೆ

Public TV
2 Min Read

‘ನಮ್ಮ ಹುಡುಗರು’ ಸಿನಿಮಾ ಮೂಲಕ ಭರವಸೆಯ ಯುವ ನಟನಾಗಿ ಮಿಂಚಿದ ನಿರಂಜನ್ ಸುಧೀಂದ್ರ (Niranjan Sudhindra) ಅವರು ಇದೀಗ ಟಾಲಿವುಡ್‌ನತ್ತ ಮುಖ ಮಾಡಿದ್ದಾರೆ. ಅರ್ಜುನ್ ಸರ್ಜಾ (Arjun Sarja) ನಿರ್ದೇಶನದಲ್ಲಿ ರಿಯಲ್ ಸ್ಟಾರ್ ಉಪೇಂದ್ರ (Upendra) ಅವರ ಅಣ್ಣನ ಮಗ ನಿರಂಜನ್ ನಟಿಸುತ್ತಾರೆ ಎಂದು ಕೆಲದಿನಗಳಿಂದ ಸುದ್ದಿ ಹರಿದಾಡುತ್ತಿತ್ತು. ಈ ಸುದ್ದಿ ನಿಜಾನಾ ಎಂಬುದಕ್ಕೆ ಸ್ವತಃ ನಿರಂಜನ್ ಅವರು ಪಬ್ಲಿಕ್ ಟಿವಿ ಡಿಜಿಟಲ್‌ಗೆ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ:ಮದುವೆಯಾದ್ಮೇಲೆ ದೇಹದ ಸರ್ಜರಿ ಮಾಡಿಸಿಕೊಂಡ್ರಾ ಎಂದವರಿಗೆ ಹನ್ಸಿಕಾ ಖಡಕ್ ಉತ್ತರ

ಸೆಕೆಂಡ್ ಹಾಫ್, ನಮ್ಮ ಹುಡುಗರು ಸಿನಿಮಾದಲ್ಲಿ ನಟಿಸುವ ಮೂಲಕ ಈಗಾಗಲೇ ಕನ್ನಡ ಸಿನಿಪ್ರೇಕ್ಷಕರಿಗೆ ಪರಿಚಿತರಾಗಿರುವ ಹ್ಯಾಂಡ್‌ಸಮ್ ಹಂಕ್ ನಿರಂಜನ್ ಕೈಯಲ್ಲಿ ಸಾಕಷ್ಟು ಸಿನಿಮಾಗಳಿದೆ. ಚಿಕ್ಕಪ್ಪ ಉಪೇಂದ್ರ ಅವರು ನಡೆದು ಬಂದ ಹಾದಿಯಲ್ಲಿ ನಿರಂಜನ್ ಕೂಡ ಹೆಜ್ಜೆ ಇಡುತ್ತಿದ್ದಾರೆ. ಭಿನ್ನ ಪಾತ್ರಗಳ ಪ್ರಯೋಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಬಹುಭಾಷೆಯಲ್ಲಿ ತಯಾರಾಗುತ್ತಿರುವ ನಟ, ನಿರ್ದೇಶಕ ಅರ್ಜುನ್ ಸರ್ಜಾ ನಿರ್ದೇಶನದ ಚಿತ್ರದಲ್ಲಿ ನಿರಂಜನ್ ಹೀರೋ ಆಗಿ ಫೈನಲ್ ಆಗಿರೋದು ನಿಜ. ಮುಂದಿನ ಜುಲೈನಲ್ಲಿ ಅಫಿಷಿಯಲ್ ಆಗಿ ಅನೌನ್ಸ್‌ಮೆಂಟ್ ಮಾಡುತ್ತಾರೆ ಎಂದು ಪಬ್ಲಿಕ್ ಟಿವಿ ಡಿಜಿಟಲ್‌ಗೆ ನಿರಂಜನ್ ಸ್ಪಷ್ಟನೆ ನೀಡಿದ್ದಾರೆ. ನಿರಂಜನ್ ಸುಧೀಂದ್ರ ನಟನೆಯ ಎರಡು ಸಿನಿಮಾಗಳು ಈಗಾಗಲೇ ಬಿಡುಗಡೆಯಾಗಿವೆ. ಇನ್ನೆರಡು ಸಿನಿಮಾಗಳು ಶೂಟಿಂಗ್ ಹಂತದಲ್ಲಿದ್ದು, ಮುಂದಿನ ತಿಂಗಳು ಜುಲೈನಲ್ಲಿ ಅರ್ಜುನ್ ಸರ್ಜಾ ಅವರ ಕಡೆಯಿಂದ ಅಧಿಕೃತವಾಗಿ ಘೋಷನೆ ಆಗಲಿದೆ.‌ ವಿಭಿನ್ನ ಕಥೆಯಲ್ಲಿ ಎಂದೂ ಮಾಡಿರದ ಪಾತ್ರದಲ್ಲಿ ನಿರಂಜನ್‌ ಕಾಣಿಸಿಕೊಳ್ತಿದ್ದಾರೆ.

ಅರ್ಜುನ್ ಸರ್ಜಾ ತಮ್ಮ ಪುತ್ರಿ ಐಶ್ವರ್ಯಾ (Aishwarya Sarja) ಅವರನ್ನು ನಾಯಕಿಯನ್ನಾಗಿಸಿ ತೆಲುಗು ಮತ್ತು ತಮಿಳು ಸಿನಿಮಾ ನಿರ್ದೇಶನ ಮಾಡುತ್ತಿದ್ದರು. ಇದಕ್ಕೆ ತೆಲುಗಿನ ಖ್ಯಾತ ನಟರೊಬ್ಬರು ನಾಯಕರಾಗಿ ಆಯ್ಕೆಯಾಗಿ, ಸಿನಿಮಾದ ಮುಹೂರ್ತ ಕೂಡ ನಡೆದಿತ್ತು. ಆದರೆ ಕಾರಣಾಂತರಗಳಿಂದ ನಾಯಕ ನಟ ಆ ಸಿನಿಮಾದಿಂದ ಹೊರ ಬಂದಿದ್ದರು. ಅದೇ ಚಿತ್ರಕ್ಕೆ ಈಗ ನಾಯಕರಾಗಿ ನಿರಂಜನ್ ಆಯ್ಕೆಯಾಗಿದ್ದಾರೆ. ಈ ಸಿನಿಮಾದಲ್ಲಿ ನಿರಂಜನ್‌ಗೆ ನಾಯಕಿಯಾಗಿ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ನಟಿಸಲಿದ್ದಾರೆ.

ಈ ಹಿಂದೆ ಸಿದ್ಧ ಮಾಡಿದ್ದ ಕಥೆಯಲ್ಲಿ ಕೊಂಚ ಬದಲಾವಣೆ ಮಾಡಿ, ನಿರಂಜನ್- ಐಶ್ವರ್ಯರನ್ನ ಜೋಡಿಯಾಗಿ ತೋರಿಸಲು ಅರ್ಜುನ್ ಸರ್ಜಾ ಪ್ಲ್ಯಾನ್ ಮಾಡಿದ್ದಾರೆ. ಕಳೆದ ಎರಡು ದಿನಗಳಿಂದ ಅರ್ಜುನ್ ಸರ್ಜಾ ಸಿನಿಮಾದಲ್ಲಿ ಉಪ್ಪಿ ಅಣ್ಣನ ಮಗ ನಟಿಸುತ್ತಾರೆ ಎಂಬ ಸುದ್ದಿಗೆ ತಂಡದ ಕಡೆಯಿಂದ ಯಾವುದೇ ಸ್ಪಷ್ಟನೆ ಸಿಕ್ಕಿರಲಿಲ್ಲ. ಇದೀಗ ಪಬ್ಲಿಕ್ ಡಿಜಿಟಲ್‌ಗೆ ಯುವನಟ ನಿರಂಜನ್ ಪ್ರತಿಕ್ರಿಯೆ ನೀಡಿದ್ದಾರೆ. ಒಟ್ನಲ್ಲಿ ಅರ್ಜುನ್‌ ಸರ್ಜಾ ಚಿತ್ರದಲ್ಲಿ ನಿರಂಜನ್‌ ನಟಿಸುವ ಸುದ್ದಿ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

ಶೃತಿ ರಿಪ್ಪನ್‌ಪೇಟೆ, ಪಬ್ಲಿಕ್‌ ಟಿವಿ ಡಿಜಿಟಲ್‌ 

Share This Article