ಏನಿದು ಆಯುಷ್ಮಾನ್ ಭಾರತ್ ಯೋಜನೆ? ಯಾರಿಗೆ ವಿಮೆ ಸಿಗುತ್ತೆ? ಯಾವೆಲ್ಲಾ ರೋಗಗಳಿಗೆ ಚಿಕಿತ್ಸೆ?

Public TV
2 Min Read

ನವದೆಹಲಿ: 72ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅತಿದೊಡ್ಡ ಗಿಫ್ಟ್ ನೀಡಿದೆ. ಜಗತ್ತಿನ ಅತೀ ದೊಡ್ಡ ಆರೋಗ್ಯ ರಕ್ಷಾ ಯೋಜನೆ ‘ಆಯುಷ್ಮಾನ್ ಭಾರತ’ ಯೋಜನೆಯನ್ನು ಪ್ರಕಟಿಸಿದೆ.

ದೆಹಲಿಯ ಕೆಂಪುಕೋಟೆ ಆವರಣದಲ್ಲಿ ಸ್ವಾತಂತ್ರೋತ್ಸವದ ಪ್ರಯುಕ್ತ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ದೇಶದ 50 ಕೋಟಿ ಮಂದಿಗೆ ಅನುಕೂಲವಾಗುವ ಆರೋಗ್ಯ ಯೋಜನೆಯನ್ನು ಘೋಷಿಸಿದ್ದಾರೆ.

ಪಂಡಿತ್ ದೀನ್ ದಯಾಳು ಉಪಾಧ್ಯಾಯರ ಜನ್ಮದಿನವಾದ ಸೆಷ್ಟೆಂಬರ್ 25ರಂದು ಈ ಯೋಜನೆ ಆರಂಭವಾಗಲಿದ್ದು, ಕುಟುಂಬವೊಂದಕ್ಕೆ ವಾರ್ಷಿಕ ಐದು ಲಕ್ಷ ರೂಪಾಯಿಗಳ ಆರೋಗ್ಯ ಸೇವಾ ವೆಚ್ಚವನ್ನು ಸರ್ಕಾರ ಭರಿಸಲಿದೆ. ಮೊದಲ ಹಂತವಾಗಿ 11 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಯೋಜನೆಯನ್ನು ಜಾರಿಗೆ ತರಲಾಗುತ್ತದೆ.

ಆದರೆ ಮೊದಲ ಹಂತದಲ್ಲಿ ಕರ್ನಾಟಕ, ಕೇರಳ, ಮಹಾರಾಷ್ಟ್ರ, ಪಂಜಾಬ್ ಹಾಗೂ ನವದೆಹಲಿ ರಾಜ್ಯಗಳು ಈ ಯೋಜನೆಗೆ ಒಳಪಡುವುದಿಲ್ಲ. ತದನಂತರ ಈ ರಾಜ್ಯಗಳು ಒಳಪಡಲಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಏನಿದು ಆಯುಷ್ಮಾನ್ ಭಾರತ್ ಯೋಜನೆ?
10 ಕೋಟಿ ಕುಟುಂಬಗಳ 50 ಕೋಟಿ ಜನರಿಗೆ ಆರೋಗ್ಯ ವಿಮೆ ಸಿಗಲಿದೆ. ಕುಟುಂಬವೊಂದಕ್ಕೆ ವಾರ್ಷಿಕ 5 ಲಕ್ಷವರೆಗೆ ಆಸ್ಪತ್ರೆ ಖರ್ಚು ಭರಿಸಲಾಗುತ್ತದೆ. ಮೊದಲ ಹಂತದಲ್ಲಿ ಛತ್ತೀಸ್‍ಗಢ, ತ್ರಿಪುರ, ಅರುಣಾಚಲ ಪ್ರದೇಶ, ಆಂಧ್ರಪ್ರದೇಶ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಚಂಡೀಗಢ, ಗುಜರಾತ್ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ 70-80 ಜಿಲ್ಲೆಗಳಲ್ಲಿ ಜಾರಿಯಾಗಲಿದೆ. ಈ ಆರೋಗ್ಯ ಯೋಜನೆಯಲ್ಲಿ 100 ಆಸ್ಪತ್ರೆಗಳಿರುತ್ತವೆ. ಮೊದಲಿಗೆ ಶಸ್ತ್ರಚಿಕಿತ್ಸೆ ಹಾಗೂ ಇತರೆ ವೈದ್ಯಕೀಯ ಚಿಕಿತ್ಸಾ ಸೇವೆ ಸಿಗುತ್ತದೆ. ವಿಮೆ ಪಡೆದ ದಿನದಿಂದಲೇ ಎಲ್ಲಾ ಪೂರ್ವ ನಿರ್ಧಾರಿತ ಕಾಯಿಲೆಗಳಿಗೂ ಚಿಕಿತ್ಸೆ ಸಿಗಲಿದೆ.

ಯಾರಿಗೆ ವಿಮೆ ಸೌಲಭ್ಯ ಸಿಗಲಿದೆ?
ಯೋಜನೆಯ ಸೌಲಭ್ಯಕ್ಕಾಗಿ ಪಡಿತರ ಚೀಟಿ ಇದ್ದರೆ ಸಾಕಾಗುತ್ತದೆ. ಈ ಯೋಜನೆಗೆ ಆಧಾರ್ ಕಾರ್ಡ್ ಕಡ್ಡಾಯ ಅಲ್ಲ. ರೇಷನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಮತದಾರರ ಚೀಟಿ ಇದ್ದರೂ ಸಾಕಾಗುತ್ತದೆ. ಕುಟುಂಬದ ಗಾತ್ರ ಮತ್ತು ವಯಸ್ಸಿಗೆ ಯಾವುದೇ ಮಿತಿ ಹೇರಿಲ್ಲ. ಖಾಸಗಿ ಅಥವಾ ಮಾನ್ಯತೆ ಪಡೆದ ಖಾಸಗಿ ಆಸ್ಪತ್ರೆಗಳಲ್ಲಿ ನಗದುರಹಿತ ಸೇವೆ. ಫಲಾನುಭವಿಗಳಿಗೆ ಆಸ್ಪತ್ರೆಗೆ ಸಂಚರಿಸಲು ನಿಗದಿತ ಪ್ರಯಾಣ ಭತ್ಯೆಯೂ ಒಳಗೊಂಡಿದೆ.

`ಆಯಷ್ಮಾನ್ ಭಾರತ’ ಯಾರಿಗೆ ಅನ್ವಯ..?
* ಜಾತಿ ಗಣತಿ/ಪಡಿತರ ಚೀಟಿ ಆಧಾರದ ಮೇಲೆ ಚಿಕಿತ್ಸೆ
* ಒಂದು ಕೊಠಡಿಯಲ್ಲಿ ವಾಸಿಸುವ ಕುಟುಂಬಗಳು
* ಎಸ್‍ಸಿ/ಎಸ್‍ಟಿ, ಬುಡಕಟ್ಟು ಸಮುದಾಯದವರು
* ನಿರ್ವಸಿತರು, ಕೂಲಿ ಕಾರ್ಮಿಕರು, ಜೀತ ವಿಮುಕ್ತರು
* ರದ್ದಿ ಆಯುವವರು, ಭಿಕ್ಷುಕರು, ಪೌರಕಾರ್ಮಿಕರು
* ಕಟ್ಟಡ ಕಾರ್ಮಿಕರು, ಮನೆ ಕೆಲಸದವರು, ಕುಸುರಿ ಕೆಲಸಗಾರರು
* ಟೈಲರ್, ಪ್ಲಂಬರ್, ಸಾರಿಗೆ ನೌಕರರು, ರಿಕ್ಷಾವಾಲಾಗಳು
* ಎಲೆಕ್ಟ್ರಿಷಿಯನ್, ಮೆಕಾನಿಕ್, ಹೆಲ್ಪರ್‍ಗಳು
* ಚಿಕಿತ್ಸೆಗೆ ಆಧಾರ್ ಕಾರ್ಡ್ ಕಡ್ಡಾಯವಲ್ಲ
* 10 ಕೋಟಿ ಕುಟುಂಬಗಳ 50 ಕೋಟಿ ಮಂದಿಗೆ ಪ್ರಯೋಜನ

ಯಾವೆಲ್ಲಾ ರೋಗಗಳಿಗೆ ಚಿಕಿತ್ಸೆ?
* ಧೀರ್ಘಕಾಲಿನ ರೋಗಗಳು
* ಹೃದಯದ ಬೈಪಾಸ್ ಸರ್ಜರಿ
* ಮಂಡಿ ಚಿಪ್ಪು ಅಳವಡಿಕೆ
* ಆಸ್ಪತ್ರೆ ಸೇರುವ ಮೊದಲು/ನಂತರದ ವೆಚ್ಚ
* ಕನಿಷ್ಟ 25 ಸಾವಿರ ರೂ. ಕ್ಲೈಂ
* ಒಮ್ಮೆ ನೋಂದಣಿ ಮಾಡಿಕೊಂಡರೆ ದೇಶದ ಯಾವುದೇ ಚಿಕಿತ್ಸೆ ಪಡೆಯಬಹುದು

ಈಗಾಗಲೇ ವೆಬ್‍ಸೈಟ್ ಆರಂಭಿಸಲಾಗಿದ್ದು ಮಾಹಿತಿಗಳು ಲಭ್ಯವಾಗಿಲ್ಲ. ಶೀಘ್ರವೇ ಈ ಯೋಜನೆಗೆ ಸಂಬಂಧಿಸಿದ ವಿವರಗಳನ್ನು ಪ್ರಕಟಿಸಲಾಗುವುದು ಬರೆಯಲಾಗಿದೆ:  www.abnhpm.gov.in/coming-soon

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *