ಮೊದಲು ಕ್ಷಮೆ ಕೇಳಿ, ಜನರ ಭಾವನೆಗೆ ಧಕ್ಕೆ ತರಬೇಡಿ: ಕಮಲ್‌ಗೆ ಹೈಕೋರ್ಟ್‌ ಚಾಟಿ

Public TV
2 Min Read

– ನೀವು ಭಾಷಾ ತಜ್ಞರೇ? ಇಲ್ಲ ಇತಿಹಾಸಕಾರರೇ?
– ಭಾವನೆಗೆ ಧಕ್ಕೆ ತಂದು ಇಲ್ಲಿ ಸಂಪಾದನೆ ಮಾಡಬೇಕಾ?

ಬೆಂಗಳೂರು: ಭಾಷೆ ಹುಟ್ಟಿದರ ಬಗ್ಗೆ ಮಾತನಾಡುವುದಕ್ಕೆ ನೀವು ಭಾಷಾ ತಜ್ಞರೇ? ಇಲ್ಲ ಇತಿಹಾಸಕಾರರೇ ಎಂದು ಕರ್ನಾಟಕ ಹೈಕೋರ್ಟ್‌ (Karnataka High Court) ಕಮಲ್‌ ಹಾಸನ್‌ Kamal Hassan) ಅವರಿಗೆ ಖಾರವಾದ ಪ್ರಶ್ನೆ ಕೇಳಿದೆ.

ಥಗ್‌ ಲೈಫ್‌ (Thug Life) ಚಿತ್ರ ಬಿಡುಗಡೆಗೆ ಕರ್ನಾಟಕದಲ್ಲಿ ವಿರೋಧ ವ್ಯಕ್ತವಾಗುತ್ತಿದ್ದಂತೆ ಕಮಲ್‌ ಹಾಸನ್‌ ಅವರು ಬಿಡುಗಡೆಗೆ ಅವಕಾಶ ನೀಡಬೇಕು ಮತ್ತು ಚಿತ್ರ ಮಂದಿರಕ್ಕೆ ಪೊಲೀಸ್‌ ಭದ್ರತೆ ಒದಗಿಸಬೇಕೆಂದು ಕೋರಿ ಅರ್ಜಿ ಸಲ್ಲಿಸಿದ್ದರು.

ಇಂದು ಈ ಅರ್ಜಿಯ ವಿಚಾರಣೆ ನ್ಯಾ. ನಾಗಪ್ರಸನ್ನ ಅವರಿದ್ದ ಪೀಠದಲ್ಲಿ ನಡೆಯಿತು. ಈ ವೇಳೆ ಕಮಲ್‌ ಹಾಸನ್‌ ಪರ ವಕೀಲ ಧ್ಯಾನ್ ಚಿನ್ನಪ್ಪ ವಾದ ಮಂಡನೆ ಮಾಡಿದರು.

ಎರಡು ದಿನದಲ್ಲಿ ಚಲನಚಿತ್ರ ಬಿಡುಗಡೆ ಆಗಲಿದ್ದು, ಈ ಸಂದರ್ಭದಲ್ಲಿ ವಿವಾದ ಶುರುವಾಗಿದೆ. ಆಡಿಯೋ ಬಿಡುಗಡೆಯ ಸಂದರ್ಭದಲ್ಲಿ ವಿವಾದ ಆರಂಭವಾಗಿದೆ ಎಂದು ಕೋರ್ಟ್‌ ಗಮನಕ್ಕೆ ತಂದರು.

ಈ ವೇಳೆ ನ್ಯಾಯಮೂರ್ತಿಗಳು, ನೆಲ, ಭಾಷೆಯ ಜೊತೆ ಜನರ ಭಾವನೆ ಇರುತ್ತದೆ. ಜನರ ಭಾವನೆಗೆ ಯಾರೂ ಧಕ್ಕೆ ತರಬಾರದು. ಜನರು ಕ್ಷಮೆ ಕೇಳುವಂತೆ ಒತ್ತಾಯಿಸುತ್ತಿದ್ದಾರೆ. ಕಮಲ್‌ ಹಾಸನ್‌ ಕ್ಷಮೆ ಕೇಳಿದ್ದಾರಾ ಎಂದು ಪ್ರಶ್ನಿಸಿದರು.

ಭಾಷೆ ಹುಟ್ಟಿದರ ಬಗ್ಗೆ ನೀವು ಮಾತನಾಡುವುದಕ್ಕೆ ನೀವು ಭಾಷಾ ತಜ್ಞರೇ ಅಥವಾ ಇತಿಹಾಸಕಾರರೇ? ಒಂದೇ ಒಂದು ಕ್ಷಮೆ ಕೇಳೋದಕ್ಕೆ ಯಾಕೆ ಇಷ್ಟೊಂದು ಹಾವ ಭಾವ? ಈ ಹಿಂದೆ ರಾಜಗೋಪಾಲಾಚಾರಿ ವಿವಾದಾತ್ಮಕ ಹೇಳಿಕೆ ನೀಡಿದ ಬಳಿಕ ಕ್ಷಮೆಯಾಚನೆ ಮಾಡಿದ್ದು ನಿಮಗೆ ಗೊತ್ತಿಲ್ವೆ ಎಂದು ಕುಟುಕಿದರು.

350 ಕೋಟಿ ರೂ. ಸಿನಿಮಾಗೆ ಹಾಕಿದ್ದೀರಿ ಎನ್ನುತ್ತೀರಿ. ಭಾವನೆಗೆ ಧಕ್ಕೆ ಮಾಡಿ ಇಲ್ಲಿ ಸಂಪಾದನೆ ಮಾಡಬೇಕಾ? ಎಲ್ಲವೂ ಸರಾಗವಾಗಿ ಆಗಬೇಕು ಅಂದರೆ ಕ್ಷಮೆಯನ್ನು ಕೋರಿ. ಅಭಿವ್ಯಕ್ತಿ ಸ್ವಾತಂತ್ರ‍್ಯದಿಂದ ಭಾವನೆ ಧಕ್ಕೆ ಆಗಬಾರದು. ಕೋಟ್ಯಂತರ ರೂ. ಹಾಕಿದ್ದೀರಿ. ಕರ್ನಾಟಕದಲ್ಲಿ ಯಾಕೆ ಸಿನಿಮಾ ರಿಲೀಸ್‌ ಮಾಡುತ್ತೀರಿ? ಕರ್ನಾಟಕವನ್ನು ಬಿಟ್ಟು ಬಿಡಿ ಎಂದು ಖಾರವಾಗಿ ತಿಳಿಸಿದರು.

 

ಈ ಸಂದರ್ಭದಲ್ಲಿ ಸಿನಿಮಾ ನೋಡುವುದು ಎಲ್ಲರ ಮೂಲಭೂತ ಹಕ್ಕು. ಹೀಗಾಗಿ ಭದ್ರತೆಗೆ ನೀಡಲು ಮನವಿ ಮಾಡುತ್ತಿದ್ದೇವೆ. ಏನೋ ಹೇಳಲು ಹೋಗಿ ಏನೋ ಆಗಿದೆ ಎಂದು ಕಮಲ್‌ ಪರ ವಕೀಲರು ಮನವಿ ಮಾಡಿಕೊಂಡರು.

ಇದಕ್ಕೆ ನಾಲಿಗೆ ತಪ್ಪಾಗಿ ಹೇಳಿದರೆ ಇಷ್ಟು ಹೊತ್ತಿಗೆ ಕ್ಷಮೆ ಕೇಳಬಹುದಿತ್ತು. ಚಿತ್ರ ಮಂದಿರಕ್ಕೆ ಭದ್ರತೆ ಬೇಕಾ? ಬೇಡ್ವಾ ಎಂದು ಆದೇಶ ಮಾಡುವ ಮೊದಲು ಕ್ಷಮೆ ಕೇಳಲಿ. ಒಂದು ವೇಳೆ ಇತಿಹಾಸಕಾರರ ದಾಖಲೆ ಸಮೇತ ಹೇಳಿದರೆ ಚರ್ಚೆ ವಿಷಯ ಆಗುತ್ತಿತ್ತು. ಕ್ಷಮೆ ಕೇಳದ ಹೊರತು ಹೇಳಿಕೆ ಹಿಂಪಡೆಯಲು ಸಾಧ್ಯವಿಲ್ಲ ಎಂದು ಜಡ್ಜ್‌ ಖಡಕ್‌ ಆಗಿ ಸೂಚಿಸಿದರು.

ಕಮಲ್‌ ಪರ ವಕೀಲರಿಗೆ ಕ್ಷಮೆ ಕೇಳಲು ಸೂಚಿಸಿದ ನ್ಯಾಯಾಧೀಶರು ಇಂದು ಮಧ್ಯಾಹ್ನ 2:30ಕ್ಕೆ ಅರ್ಜಿ ವಿಚಾರಣೆಯನ್ನು ಮುಂದೂಡಿದರು.

Share This Article