ಏ.1 ದಾಸೋಹ ದಿನ, ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಸಿದ್ದಗಂಗಾ ಶ್ರೀಗಳ ಹೆಸರು: ಸಿಎಂ ಘೋಷಣೆ

Public TV
2 Min Read

ತುಮಕೂರು: ಎಲ್ಲಾ ಸಮುದಾಯದವರನ್ನು ಸೇರಿಸಿ ತ್ರಿವಿಧ ದಾಸೋಹ ಮಾಡಿದ ಸಿದ್ದಗಂಗಾ ಶ್ರೀಗಳ ಸ್ಮರಣಾರ್ಥ ಏಪ್ರಿಲ್‌ 1 ಅನ್ನು ದಾಸೋಹ ದಿನವೆಂದೂ, ಸರ್ಕಾರಿ ಶಾಲೆಗಳಲ್ಲಿ ಜಾರಿಯಲ್ಲಿರುವ ಮಧ್ಯಾಹ್ನದ ಬಿಸಿಯೂಟಕ್ಕೆ ಡಾ. ಶಿವಕುಮಾರ ಸ್ವಾಮೀಜಿ ಬಿಸಿಯೂಟ ಯೋಜನೆ ಎಂದು ಹೆಸರಿಡಲಾಗುವುದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.

ನಡೆದಾಡುವ ದೇವರು ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ 115ನೇ ಜನ್ಮದಿನೋತ್ಸವ ಹಿನ್ನೆಲೆ ತುಮಕೂರಿನಲ್ಲಿರುವ ಸಿದ್ದಗಂಗಾ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಲ್ಲಾ ಸಮುದಾಯದವರನ್ನು ಸೇರಿಸಿ ತ್ರಿವಿಧ ದಾಸೋಹ ಮಾಡಿದವರು ಶ್ರೀಗಳು. ಇದೊಂದು ದೈವ ಶಕ್ತಿ, ಇದು ಮನುಷ್ಯರ ಶಕ್ತಿ ಅಲ್ಲ. ಶ್ರೀಗಳ ಧ್ಯೇಯ ಶ್ರದ್ಧೆ, ನಿಷ್ಠೆ, ಪರಿಶ್ರಮವನ್ನು ನಾವು ಪರಿಪಾಲನೆ ಮಾಡಬೇಕು. ಶ್ರೀಗಳಿಗೆ ಜಾತಿ ಭೇದ ಇರಲಿಲ್ಲ. ಸರ್ವೋದಯ ಪರಿಕಲ್ಪನೆ ಈ ಮಠದಲ್ಲಿ ನಿತ್ಯ ನಿರಂತರವಾಗಿ ನಡೆಯುತ್ತಿದೆ. ಸರ್ವೋದಯ ಮತ್ತು ಅಂತೋದ್ಯಯ ಈ ಮಠದಲ್ಲಿ ನಡೆಯುತ್ತಿದೆ. ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಶಿವಕುಮಾರ್ ಸ್ವಾಮೀಜಿ ಹೆಸರಿಡಲಾಗುವುದು ಎಂದು ವೇದಿಕೆ ಮೇಲೆಯೇ ಘೋಷಿಸಿದರು. ಇದನ್ನೂ ಓದಿ: ಬಿಸಿಯೂಟ ಯೋಜನೆಗೆ ಶಿವಕುಮಾರ ಸ್ವಾಮಿಗಳ ಹೆಸರಿಡಬೇಕು- ಸಿಎಂಗೆ ವಿಜಯೇಂದ್ರ ಮನವಿ

ನಾನು ಭಕ್ತನಾಗಿ ಇವತ್ತು ಕಾರ್ಯಕ್ರಮಕ್ಕೆ ಬಂದಿದ್ದೇನೆ. ಈ ನೆಲದಲ್ಲಿ ಪ್ರೇರಣೆಯ ಶಕ್ತಿ ಇದೆ. ಶಿವಕುಮಾರ್ ಶ್ರೀಗಳ ಪರಂಪರೆಯನ್ನು ಕಿರಿಯ ಶ್ರೀಗಳು ಮುಂದುವರಿಸುತ್ತಿದ್ದಾರೆ. 88 ವರ್ಷ ಈ ನಾಡಿಗೆ ಸಿದ್ದಗಂಗಾ ಶ್ರೀಗಳು ಸೇವೆ ಸಲ್ಲಿಸಿದ್ದಾರೆ. ಇಡೀ ದೇಶದಲ್ಲಿ ಯಾರೂ ಈ ಸೇವೆ ಮಾಡಿರಲಿಲ್ಲ. ಅದಕ್ಕಾಗಿಯೇ ಅವರನ್ನು ನಡೆದಾಡುವ ದೇವರು ಎನ್ನುತ್ತೇವೆ. ಅವರು ಹಚ್ಚಿದ ಹೊಲೆಯ ಕಿಚ್ಚು ಬಡವರ ಹಸಿವಿನ ಕಿಚ್ಚು ನಿಗಿಸುತ್ತಿದೆ. ಅನ್ನ, ಅಕ್ಷರ, ಆಶ್ರಯ ಎಂಬುದನ್ನು ಪಾಲಿಸಿದವರು ಸಿದ್ದಗಂಗಾ ಶ್ರೀಗಳು ಎಂದು ಸ್ಮರಿಸಿದರು.

ಇಂದು ಕೂಡಾ ಸಿದ್ದಗಂಗಾ ಶ್ರೀಗಳು ನಮ್ಮ ಜೊತೆ ಇದ್ದಾರೆ. ಅವರು ಲಿಂಗೈಕ್ಯರಾಗಿದ್ದಾರೆ ಅಂತ ನಾನು ಹೇಳುವುದಿಲ್ಲ. ಅವರು ನಮ್ಮ ಜೊತೆ ಇರುತ್ತಾರೆ. ಅವರ ನಡೆ ನಮಗೆ ದಾರಿದೀಪ ಆಗುತ್ತದೆ. ಬದುಕಿನ ದಾರಿ ತೋರಿಸಿದವರು ಸಿದ್ದಗಂಗಾ ಶ್ರೀಗಳು ಎಂದು ತಿಳಿಸಿದರು. ಇದನ್ನೂ ಓದಿ: ಶಿವಕುಮಾರ ಸ್ವಾಮೀಜಿ ಅಸಂಖ್ಯಾತ ಜನರ ಹೃದಯದಲ್ಲಿ ಅಮರರಾಗಿದ್ದಾರೆ: ಮೋದಿ

ಜನರ ಪರವಾಗಿ ನಮ್ಮ ಸರ್ಕಾರ ಕೆಲಸ ಮಾಡುತ್ತದೆ. ನಿಮ್ಮ ಪ್ರೀತಿ, ವಿಶ್ವಾಸ ಗಳಿಸಿ ನಿಮ್ಮ ಮುಂದೆ ಬರುತ್ತೇವೆ. ಬಡವರು, ದೀನ ದಲಿತರು, ಮಹಿಳೆಯರ ಪರ ಕೆಲಸ ಮಾಡುತ್ತೇವೆ. ಅಮಿತ್ ಶಾ ಅವರ ಆಗಮನ ಸಂಚಲನ ಮೂಡಿಸಿದೆ. ಅವರ ಆಗಮನ ನಮಗೆ ದೊಡ್ಡ ಶಕ್ತಿ ನೀಡಿದೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *