6 ತಿಂಗಳಿಗೊಂದು ಮಾತು – ಯತ್ನಾಳ್ ವಿರುದ್ಧವೇ ಅಪ್ಪು ಪಟ್ಟಣಶೆಟ್ಟಿ ಆಕ್ರೋಶ

Public TV
1 Min Read

ವಿಜಯಪುರ: ಸಂತ್ರಸ್ತರ ಬಗ್ಗೆ ಮಾತುನಾಡುವವರು ತಮ್ಮ ಕ್ಷೇತ್ರದ ಬಗ್ಗೆ ಗಮನ ಹರಿಸಿಲ್ಲ. ನಗರಾದ್ಯಂತ ಗುಂಡಿ, ಧೂಳು ತುಂಬಿಕೊಂಡಿದೆ ಎಂದು ಸ್ವಪಕ್ಷೀಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವಾಹ ಪೀಡಿತವಾದಾಗ ಸಿದ್ದೇಶ್ವರ ಸಂಸ್ಥೆಯಿಂದಾಗಲಿ ಅಥವಾ ಯತ್ನಾಳ್ ಅವರಾಗಲಿ ಏನು ಮಾಡಲಿಲ್ಲ. ಸಂತ್ರಸ್ತರ ಭೇಟಿ ಮಾಡಲಿಲ್ಲ, ಅವರ ನೆರವಿಗೆ ಹೋಗಲಿಲ್ಲ. ಈಗ ಒಮ್ಮಿಂದೊಮ್ಮೆಲೆ ನೆರೆ ಸಂತ್ರಸ್ತರ ಬಗ್ಗೆ ಅನುಕಂಪ ಏಕೆ ಎನ್ನುವುದು ತಿಳಿಯಲಿಲ್ಲ. ಸಾರ್ವಜನಿಕರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಯಡ್ಡಿಯೂರಪ್ಪ ಹಠಾವೋ ಬಿಜೆಪಿ ಬಚಾವೋ ಎಂದು ಆಂದೋಲನ ಮಾಡಿದ್ದು ಇವರೇ. ಯಡ್ಡಿಯೂರಪ್ಪನವರು ಕೆಜೆಪಿ ಕಟ್ಟಿದಾಗ ಅವರ ವಿರುದ್ಧ ಬೇಕಾಬಿಟ್ಟಿ ಮಾತನಾಡಿದವರು ಇವರೇ ಎಂದು ಕಿಡಿ ಕಾರಿದರು.

ಇವರದ್ದು 6 ತಿಂಗಳಿಗೊಂದು ಮಾತು ಇರುತ್ತದೆ. ಇವರು ಸಂಸದರಾಗಿದ್ದಾಗ ಪ್ರವೀಣ್ ತೊಗಾಡಿಯಾ ಹಾಗೂ ನನ್ನ ಬಗ್ಗೆ ಮಾತನಾಡಿದ್ದಾರೆ. ಸುಮ್ಮನೆ ಬಿಲ್ಡಪ್ ಕೊಡುತ್ತಿದ್ದಾರೆ ಅಷ್ಟೇ. ಯತ್ನಾಳ್ ಅವರ ಸುಳ್ಳು ಹೇಳಿಕೆಗಳದ್ದೇ ಒಂದು ಪುಸ್ತಕ ಮಾಡಿ ಬಿಡುಗಡೆ ಮಾಡುತ್ತೇನೆ. ಅಧಿಕಾರ ಇದ್ದರೆ ಕೆಲಸ ಮಾಡಬೇಕು ಎಂದಿಲ್ಲ, ಪಕ್ಷದ ಒಂದೂ ಕಾರ್ಯಕ್ರಮಕ್ಕೆ ಬಂದಿಲ್ಲ. ನೀವು ಏನು ಕಟ್ಟುತ್ತೀರಿ, ಕಾರ್ಯಕರ್ತರು ಪಕ್ಷ ಕಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯಡಿಯೂರಪ್ಪ ಅವರನ್ನು ಖುಷಿ ಪಡಿಸಲು ಯತ್ನಾಳ್ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಎರಡನೇ ದರ್ಜೆ ನಾಯಕ ಆಗಬೇಕು ಎಂದು ಜಾಕೆಟ್ ಹಾಕಿಕೊಂಡು ಹೋಗುತ್ತಿದ್ದಾರೆ. ಯಡ್ಡಿಯೂರಪ್ಪನವರ ನಂತರ ನಾನೇ ಎಂಬ ಭ್ರಮೆಯಲ್ಲಿರುವವರಲ್ಲಿ ಇವರು ಒಬ್ಬರು. ನೆರೆ ಸಂತ್ರಸ್ತರ ಪರಿಸ್ಥಿತಿಯನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದು ಎಂದು ವಾಗ್ದಾಳಿ ನಡೆಸಿದರು.

Share This Article
Leave a Comment

Leave a Reply

Your email address will not be published. Required fields are marked *