ವಿಜಯಪುರ ಬಿಜೆಪಿಯಲ್ಲಿ ನಾಯಕರ ಕಿತ್ತಾಟ – ಯತ್ನಾಳ್ ಗಂಡಸ್ತನ ಪ್ರಶ್ನಿಸಿದ ಅಪ್ಪು ಪಟ್ಟಣಶೆಟ್ಟಿ

Public TV
1 Min Read

ವಿಜಯಪುರ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಗಂಡಸ್ತನವನ್ನು ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಪ್ರಶ್ನಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತ್ನಾಳ್ ಅವರು ನಾನು ಕೇಳಿದ ಪ್ರಶ್ನೆಗೆ ಉತ್ತರಿಸಬೇಕಿತ್ತು. ಅವರಿಗೆ ಧೈರ್ಯ, ತಾಕತ್ತು, ಧಮ್, ಗಂಡಸ್ತನ ಇದ್ದರೆ ಯತ್ನಾಳ್ ನನ್ನ ವಿರುದ್ಧ ಸುದ್ದಿಗೋಷ್ಠಿ ನಡೆಸಿ ನನ್ನ ಪ್ರಶ್ನೆಗಳಿಗೆ ಉತ್ತರಿಸಲಿ. ನಾನು ಮಾಡಿದ ಆರೋಪಗಳಿಗೆ ಯತ್ನಾಳ್ ಸ್ಪಷ್ಟನೆ ನೀಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕ ಯತ್ನಾಳ್ ಅವರ ಮಾನಸಿಕ ಸ್ಥಿತಿ ಸರಿ ಇಲ್ಲ. ಮಾನಸಿಕ ಅಸ್ವಸ್ಥರಂತೆ ಮಾತನಾಡುತ್ತಿದ್ದಾರೆ. ಈ ವಿಚಾರವನ್ನು ನಾನು ಇಲ್ಲಿಗೆ ಬಿಡುವುದಿಲ್ಲ. ಯತ್ನಾಳ್ ಹಿಂದುತ್ವ ಎಂತದ್ದು? ಅವರು ಬಿಜೆಪಿಯಲ್ಲಿ ಇದ್ದಾಗ ಏನೆಲ್ಲ ಮಾಡಿದ್ದಾರೆ ಎನ್ನುವುದನ್ನು ಬಹಿರಂಗ ಪಡಿಸುತ್ತೇನೆ. ಇದು ನನ್ನ ಹಾಗೂ ಯತ್ನಾಳ್ ನಡುವಿನ ವೈಯಕ್ತಿಕ ಸಮರ. ಇದನ್ನು ಪಕ್ಷದ ಆಂತರಿಕ ಯುದ್ಧ ಎಂದು ಬಿಂಬಿಸಬೇಕಿಲ್ಲ. ಯಾವ ನಾಯಕರೂ ಸಹ ಈ ಕುರಿತು ತಪ್ಪು ತಿಳಿಯಬಾರದು ಎಂದು ಸ್ಪಷ್ಟಪಡಿಸಿದರು.

ಅವರು ನನ್ನ ಆರೋಪಗಳಿಗೆ ಉತ್ತರಿಸಬೇಕಿತ್ತು. ಆದರೆ ನಾಯಿಗೆ ಹೋಲಿಸಿ ಮನಬಂದಂತೆ ಮಾತನಾಡಿದ್ದಾರೆ. ಈ ಕುರಿತು ಸೂಕ್ತ ಉತ್ತರ ನೀಡಲಿ. ಅಲ್ಲದೆ ಇವರು ಜಾಕೆಟ್ ಹಾಕಿಕೊಂಡು ಓಡಾಡಿದ ತಕ್ಷಣ ನಾಯಕರಾಗುವುದಿಲ್ಲ. ಬಿಎಸ್‍ವೈ ಅವರಂತೆ ಆಗಲು ಸಾಧ್ಯವಿಲ್ಲ, ಯಡಿಯೂರಪ್ಪನವರು ಸಂಘಟನೆ, ಹೋರಾಟ, ಶ್ರಮದಿಂದ ನಾಯಕರಾದವರು. ಇವರಲ್ಲಿ ಆ ರೀತಿಯ ಯಾವುದೇ ಗುಣಗಳಿಲ್ಲ, ನಾಯಕಾರಗಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದರು.

ನಿನ್ನೆ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿಯವರನ್ನು ಶಾಸಕ ಯತ್ನಾಳ್ ಬೀದಿನಾಯಿಗೆ ಹೋಲಿಸಿ ಮಾತನಾಡಿದ್ದರು. ಇದರಿಂದ ಸಿಟ್ಟಿಗೆದ್ದ ಪಟ್ಟಣಶೆಟ್ಟಿ ಇಂದು ಯತ್ನಾಳ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಮೂಲಕ ವಿಜಯಪುರ ಜಿಲ್ಲಾ ಬಿಜೆಪಿಯಲ್ಲಿ ಆಂತರಿಕ ಯುದ್ಧ ಪ್ರಾರಂಭವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *