ಯಶ್ ಅಭಿನಯದ ಕೆಜಿಎಫ್‍ಗೆ ಬಿಗ್ ರಿಲೀಫ್

Public TV
1 Min Read

ಬೆಂಗಳೂರು: ಬಿಡುಗಡೆಗೂ ಮುನ್ನವೇ ಸಂಚಲನ ಮೂಡಿಸಿದ್ದ ಕೆಜಿಎಫ್ ಸಿನಿಮಾದಲ್ಲಿನ ಕಥೆಯನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ವಾಪಸ್ ಪಡೆಯಲಾಗಿದ್ದು, ಚಿತ್ರ ತಂಡಕ್ಕೆ ಬಿಗ್ ರಿಲೀಫ್ ಸಿಕ್ಕಿದೆ.

ಶುಕ್ರವಾರ 10ನೇ ಸಿಟಿ ಸಿವಿಲ್ ನ್ಯಾಯಾಲಯಕ್ಕೆ ಆಗಮಿಸಿದ್ದ ನಿರ್ಮಾಪಕ ವೆಂಕಟೇಶ್ ಅರ್ಜಿಯನ್ನು ಹಿಂದಕ್ಕೆ ಪಡೆದಿದ್ದಾರೆ. ಅರ್ಜಿ ವಾಪಸ್ ಪಡೆಯುವ ವೇಳೆ ನ್ಯಾಯಾಧೀಶರು ನಿರ್ಮಾಪಕರಿಗೆ, ಗುರುವಾರ ಅರ್ಜಿ ಹಾಕಿ ಇವತ್ತು ವಾಪಸ್ ಯಾಕೆ ಪಡೆದ್ದೀರಿ? ಈ ಮೂಲಕ ನೀವೇ ಚಿತ್ರಕ್ಕೆ ಪ್ರಚಾರ ಕೊಟ್ಟಂತಾಯ್ತು ಅಲ್ಲವೇ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ರೌಡಿ ತಂಗಂ ಜೀವನದ ಕಥೆಯನ್ನು ಕೆಜಿಎಫ್ ಹೋಲುತ್ತಿದೆ. ಹೀಗಾಗಿ ಚಿತ್ರ ಬಿಡುಗಡೆಗೆ ತಡೆ ಕೋರಿ ರಾಜೇಶ್ವರಿ ಕಂಬೈನ್ಸ್ ಮಾಲೀಕರಾದ ವೆಂಕಟೇಶ್ ಜಿ ಬಿಡುಗಡೆಗೆ ತಡೆ ಕೋರಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಮಾನ್ಯ ಮಾಡಿದ್ದ 10ನೇ ಸಿಟಿ ಸಿವಿಲ್ ಕೋರ್ಟ್ 2019ರ ಜನವರಿ 7ರವರೆಗೆ ಬಿಡುಗಡೆ ಮಾಡದಂತೆ ಮಧ್ಯಂತರ ತಡೆಯಾಜ್ಞೆ ನೀಡಿತ್ತು.

ಕೋರ್ಟ್ ತಡೆಯಾಜ್ಞೆ ನೀಡುವ 15 ದಿನಗಳ ಮೊದಲೇ ಕೆಜಿಎಫ್ ಚಿತ್ರ ತಂಡ ಹೈಕೋರ್ಟ್ ನಿಂದ ಕೇವಿಯಟ್ ತಂದಿದ್ದ ಹಿನ್ನೆಲೆಯಲ್ಲಿ ಯಾವುದೇ ಅಡ್ಡಿಯಾಗದೇ ಚಿತ್ರ ಬಿಡುಗಡೆಯಾಗಿತ್ತು. ಚಿತ್ರದ ವಿರುದ್ಧದ ದೂರು ದಾಖಲಾದರೆ, ತಮ್ಮ ವಾದ ಆಲಿಸಬೇಕು. ನಂತರ ಆದೇಶ ನೀಡುವಂತೆ ಕೆಜಿಎಫ್ ಚಿತ್ರ ತಂಡ ಮನವಿ ಮಾಡಿಕೊಂಡಿತ್ತು.

ಕೇವಿಯಟ್ ಎಂದರೇನು?
ನಮ್ಮ ಅಹವಾಲನ್ನು ಕೇಳದೇ ಯಾವುದೇ ಆದೇಶ ನೀಡಬೇಡಿ ಎಂದು ಕೋರ್ಟ್‍ಗೆ ಮನವಿ ಮಾಡುವುದನ್ನು ಕೇವಿಯಟ್ ಎನ್ನಲಾಗುತ್ತದೆ. ಒಂದು ವಿಚಾರದಲ್ಲಿ ಬೇರೊಬ್ಬರು ಅರ್ಜಿ ಸಲ್ಲಿಸಿದಾಕ್ಷಣ, ಅವರ ವಾದ ಕೇಳಿ ಯಾವ ಆದೇಶವನ್ನೂ ನೀಡಬಾರದು. ಅಲ್ಲದೇ ನಮ್ಮ ವಾದಕ್ಕೂ ಮನ್ನಣೆ ನೀಡಬೇಕು. ಆ ಬಳಿಕವಷ್ಟೇ ಆದೇಶ ಹೊರಡಿಸಿ ಎಂದು ಕೇಳಿಕೊಳ್ಳುವ ಮನವಿಯೇ ಕೇವಿಯಟ್. ಕೇವಿಯಟ್‍ಗೆ 90 ದಿನಗಳ ಕಾಲಾವಕಾಶ ಇರುತ್ತದೆ. ಕೇವಿಯಟ್ ಸಲ್ಲಿಸಿದವರು ಮರಣ ಹೊಂದಿದರೆ ಮಾತ್ರ ಅದು ಅನೂರ್ಜಿತವಾಗುತ್ತದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *