ಕೇಂದ್ರದ ನಿರ್ಧಾರ ಸ್ವಾಗತಿಸಿದ ಆಪಲ್ ಕಂಪನಿ

Public TV
1 Min Read

ನವದೆಹಲಿ: ಐಫೋನ್ ತಯಾರಕಾ ಕಂಪನಿ ಆಪಲ್ ವಿದೇಶಿ ನೇರ ಹೂಡಿಕೆ(ಎಫ್‍ಡಿಐ) ನಿಯಮ ಸಡಿಲಿಸಿದ ಭಾರತ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದೆ.

ಪ್ರಧಾನಿ ಮೋದಿ ಮತ್ತು ಅವರ ತಂಡದ ಕೆಲಸವನ್ನು ನಾವು ಶ್ಲಾಘಿಸುತ್ತೇವೆ. ಭಾರತದಲ್ಲಿನ ನಮ್ಮ ರಿಟೇಲ್ ಸ್ಟೋರ್ ಗೆ ಗ್ರಾಹಕರನ್ನು ಸ್ವಾಗತಿಸುತ್ತೇವೆ. ನಮ್ಮ ಯೋಜನೆಗಳು ಕಾರ್ಯಗತವಾಗಲು ಕೆಲ ಸಮಯ ಬೇಕಾಗಬಹುದು. ಮುಂದಿನ ದಿನಗಳಲ್ಲಿ ಮತ್ತಷ್ಟು ವಿಚಾರಗಳನ್ನು ಪ್ರಕಟಿಸುತ್ತೇವೆ ಎಂದು ಆಪಲ್ ಹೇಳಿದೆ.

ನಾವು ಭಾರತೀಯ ಗ್ರಾಹಕರನ್ನು ಪ್ರೀತಿಸುತ್ತೇವೆ ಮತ್ತು ಭಾರ5ತೀಯರಿಗೆ ವಿಶ್ವದಲ್ಲಿರುವ ಆಪಲ್ ಗ್ರಾಹಕರು ಪಡೆಯುತ್ತಿರುವ ಸೇವೆ ನೀಡಲು ಉತ್ಸಾಹಗೊಂಡಿದ್ದೇವೆ ಎಂದು ತಿಳಿಸಿದೆ.

ಬುಧವಾರ ಮೋದಿ ನೇತೃತ್ವದಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಕಲ್ಲಿದ್ದಲು, ಚಿಲ್ಲರೆ ಮಾರಾಟ ಮತ್ತು ಡಿಜಿಟಲ್ ಮಾಧ್ಯಮಗಳ ಮೇಲಿನ ವಿದೇಶಿ ನೇರ ಹೂಡಿಕೆ ಸಂಬಂಧ ನಿಯಮಗಳನ್ನು ಸಡಿಲಿಸುವ ನಿರ್ಧಾರವನ್ನು ಕೈಗೊಳ್ಳಲಾಗಿತ್ತು, ಒಂದೇ ಬ್ರಾಂಡ್ ಚಿಲ್ಲರೆ ಮಾರಾಟ ಕಂಪನಿಗಳು ಮಳಿಗೆ ಆರಂಭಿಸುವ ಮುನ್ನವೇ ಆನ್‍ಲೈನ್ ಮೂಲಕ ಮಾರಾಟಕ್ಕೆ ಅವಕಾಶಕ್ಕೆ ಸರ್ಕಾರ ಒಪ್ಪಿಗೆ ನೀಡಿತ್ತು. ಈ ಕಾರಣಕ್ಕೆ ಆಪಲ್ ಕೇಂದ್ರ ಸರ್ಕಾರದ ನಡೆಯನ್ನು ಸ್ವಾಗತಿಸಿದೆ.

ಮಾಧ್ಯಮಗಳಲ್ಲಿ ಪ್ರಕಟವಾದಂತೆ ಮುಂದಿನ 4-5 ತಿಂಗಳಿನಲ್ಲಿ ಮುಂಬೈನಲ್ಲಿ ಆಪಲ್ ತನ್ನ ರಿಟೇಲ್ ಸ್ಟೋರ್ ತೆರೆಯಲು ಸಿದ್ಧತೆ ಮಾಡುತ್ತಿದೆ. ಸದ್ಯಕ್ಕೆ ಆಪಲ್ ಆನ್‍ಲೈನ್ ಶಾಪಿಂಗ್ ತಾಣಗಳಾದ ಅಮೆಜಾನ್, ಫ್ಲಿಪ್‍ಕಾರ್ಟ್, ಪೇಟಿಎಂ ಮೂಲಕ ತನ್ನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ.

ಇಲ್ಲಿಯವರೆಗೆ ಒಂದೇ ಬ್ರ್ಯಾಂಡ್ ಚಿಲ್ಲರೆ ಮಾರಾಟ ಮಳಿಗೆಯಲ್ಲಿ ಪ್ರತಿ ವರ್ಷ ಶೇ.30 ರಷ್ಟು ಭಾರತೀಯ ಉತ್ಪನ್ನಗಳನ್ನು ಮಾರಾಟ ಮಾಡಬೇಕೆಂಬ ಷರತ್ತು ವಿಧಿಸಲಾಗಿತ್ತು. ಆದರೆ ಈಗ 5 ವರ್ಷದ ವ್ಯಾಪಾರದ ಅವಧಿಯಲ್ಲಿ ಸರಾಸರಿ ಶೇ.30 ರಷ್ಟು ದೇಶಿಯ ಉತ್ಪನ್ನ ಮಾರಾಟವಾದರೆ ಸಾಕು ಎನ್ನುವ ನಿಯಮವನ್ನು ಸರಳಗೊಳಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *