ಪೊಲೀಸರ ಗುಂಡಿಗೆ ಆ್ಯಪಲ್ ಸೇಲ್ಸ್ ಮ್ಯಾನೇಜರ್ ಬಲಿ: ತನಿಖೆಗೆ ಆದೇಶಿಸಿದ ಯುಪಿ ಸರ್ಕಾರ!

Public TV
2 Min Read

ಲಕ್ನೋ: ಆ್ಯಪಲ್ ಕಂಪೆನಿಯ ಸೇಲ್ಸ್ ಮ್ಯಾನೇಜರ್ ಒಬ್ಬ ಪೊಲೀಸರ ಗುಂಡಿಗೆ ಬಲಿಯಾಗಿರುವ ಘಟನೆ ಉತ್ತರ ಪ್ರದೇಶದ ಗೋಮತಿ ನಗರ್ ಪ್ರದೇಶದಲ್ಲಿ ನಡೆದಿದೆ.

ವಿವೇಕ್ ತಿವಾರಿ ಪೊಲೀಸರ ಗುಂಡಿಗೆ ಬಲಿಯಾದ ಆ್ಯಪಲ್ ಕಂಪನಿಯ ಸೇಲ್ಸ್ ಮ್ಯಾನೇಜರ್. ಶುಕ್ರವಾರ ಪೊಲೀಸರು ಕೊಲೆ ಪ್ರಕರಣ ಸಂಬಂಧ ತಿವಾರಿಯನ್ನು ಬಂಧಿಸಲು ಮುಂದಾದಾಗ, ಏಕಾಏಕಿ ಪೊಲೀಸರ ಮೇಲೆಯೇ ತನ್ನ ಕಾರನ್ನು ನುಗ್ಗಿಸಲು ಯತ್ನಿಸಿದ್ದಾನೆ. ಈ ವೇಳೆ ಪ್ರಶಾಂತ್ ಚೌಧರಿ ಎಂಬ ಪೊಲೀಸ್ ಅಧಿಕಾರಿಯು ತಿವಾರಿ ಕಾರಿನ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಆಗ ಗುಂಡು ಕಾರಿನ ಮುಂಭಾಗದ ಗ್ಲಾಸನ್ನು ಸೀಳಿ ತಿವಾರಿಗೆ ತಗುಲಿದೆ.

ಗುಂಡಿನ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ವಿವೇಕ್ ತಿವಾರಿಯನ್ನು ಗೋಮತಿ ನಗರದದ ಡಾ. ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗಿದೇ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಗೋಮತಿ ಪೊಲೀಸ್ ಠಾಣೆ ಅಧಿಕಾರಿಗಳು, ಪೊಲೀಸರ ದಾಳಿಗೆ ಮೃತಪಟ್ಟ ತಿವಾರಿಯ ವಿರುದ್ಧ ಆತನ ಸಂಬಂಧಿಕರು ಕೊಲೆ ಪ್ರಕರಣದ ದೂರನ್ನು ದಾಖಲಿಸಿದ್ದರು. ಹೀಗಾಗಿ ವಿವೇಕ್ ತಿವಾರಿಯನ್ನು ಬಂಧಿಸಲು ಹೋಗಿದ್ದಾಗ ಈ ಘಟನೆ ನಡೆದಿದೆ ಎಂದು ಹೇಳಿದ್ದಾರೆ.

ಘಟನೆ ಬಗ್ಗೆ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಸಹೋದರ ವಿಷ್ಣು ಶುಕ್ಲ, ಪ್ರಕರಣವನ್ನು ಸಿಬಿಐ ವಹಿಸುವಂತೆ ಆಗ್ರಹಿಸಿದ್ದಾರೆ. ಅಲ್ಲದೇ ಪೊಲೀಸರು ಗುಂಡು ಹಾರಿಸಲು ತಿವಾರಿ ಏನು ಉಗ್ರಗಾಮಿಯೇ ಎಂದು ಪ್ರಶ್ನಿಸಿದ ಅವರು, ಕೂಡಲೇ ನಮ್ಮೆಲ್ಲರ ಮುಖಂಡರಾಗಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ಪ್ರಕರಣದಲ್ಲಿ ಮಧ್ಯಸ್ಥಿಕೆ ವಹಿಸಬೇಕು ಎಂದು ಕೇಳಿಕೊಂಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ, ಘಟನೆ ಸಂಬಂಧ ಪ್ರಕರಣವನ್ನು ತನಿಖೆಗೆ ಆದೇಶಿಸಿದ್ದು, ಇದರಲ್ಲಿ ಯಾರಾದರೂ ತಪ್ಪು ಎಂದು ತಿಳಿದುಬಂದರೆ ಅವರ ವಿರುದ್ಧ ನಿರ್ದಾಕ್ಷೀಣ್ಯ ಕ್ರಮ ಕೈಗೊಳ್ಳುತ್ತೇನೆ. ಅಮಾಯಕ ವ್ಯಕ್ತಿಯನ್ನು ಪೊಲೀಸರು ಹತ್ಯೆ ಮಾಡಿದ್ದಾರೆ ಎನ್ನುವ ಬಗ್ಗೆ ವಿಚಾರಣೆ ನಡೆಯುತ್ತಿದೆ. ಶೀಘ್ರವೇ ವರದಿ ಬಂದ ನಂತರ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಘಟನೆ ಸಂಬಂಧ ಮಾತನಾಡಿರುವ ಹಿರಿಯ ಪೊಲೀಸ್ ಅಧಿಕಾರಿ, ಕೊಲೆ ಆರೋಪದ ಮೇಲೆ ವಿವೇಕ್ ತಿವಾರಿಯನ್ನು ಬಂಧಿಸಲು ಹೋದಾಗ, ಪೊಲೀಸರ ಮೇಲೆಯೇ ಕಾರನ್ನು ನುಗ್ಗಿಸಲು ಯತ್ನಿಸಿದ್ದಾನೆ. ಅಲ್ಲದೇ ತಿವಾರಿಯು ಅನುಮಾನಾಸ್ಪದ ಚಟುವಟಿಕೆಯಲ್ಲಿ ತೊಡಗಿರುವುದು ಸಹ ತಿಳಿದುಬಂದಿದೆ ಎಂದು ಹೇಳಿದ್ದಾರೆ.

ಮರಣೋತ್ತರ ವರದಿಯ ಪ್ರಕಾರ ಮೃತ ವಿವೇಕ್ ದೇಹದ ಹಲವು ಭಾಗಗಳಲ್ಲಿ ಗಂಭೀರವಾಗಿ ಗಾಯಗೊಂಡು, ತೀವ್ರ ರಕ್ತಸ್ರಾವದಿಂದ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *