– ʻಬಂದರೋ ಬಂದರೋ ಬಾವ ಬಂದರೋʼ ಹಾಡಿಗೆ ಭಾವಿ ದಂಪತಿ ಭರ್ಜರಿ ಡಾನ್ಸ್
ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ದಾಂಪತ್ಯ (Anushree) ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಕೊಡಗು ಮೂಲದ ರೋಷನ್ ಜೊತೆ ಆ್ಯಂಕರ್ ಅನುಶ್ರೀ ಆಗಸ್ಟ್ 28ರಂದು ಹಸೆಮಣೆ ಏರುತ್ತಿದ್ದು, ಹಳದಿ ಶಾಸ್ತ್ರದಲ್ಲಿ (Haldi Ceremony) ಮಿಂದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ಹೌದು. ಆಗಸ್ಟ್ 28ರ ಗುರುವಾರ ಅನುಶ್ರೀ ತಮ್ಮ ಬಹುಕಾಲದ ಗೆಳೆಯ ರೋಷನ್ ಜೊತೆ ದಾಂಪತ್ಯ ಬದುಕಿಗೆ ಕಾಲಿಡುತ್ತಿದ್ದು, ವೆಡ್ಡಿಂಗ್ ಕಾರ್ಡ್ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿಬಿಟ್ಟಿದೆ.
ಮದುವೆಗೂ ಮುನ್ನಾದಿನವಾದ ಇಂದು ಹಳದಿ ಶಾಸ್ತ್ರದ ಫೋಟೋಗಳು ವೈರಲ್ ಆಗಿವೆ. ಹಳದಿ ಶಾಸ್ತ್ರದಲ್ಲಿ ಭಾವಿ ದಂಪತಿಗಳು ಹಳದಿ ಉಡುಗೆಯಲ್ಲೇ ಕಾಣಿಸಿಕೊಂಡಿದ್ದಾರೆ. ಸುತ್ತಲೂ ಸೂರ್ಯಕಾಂತಿ ಹೂವಿನ ಅಲಂಕಾರ ಈ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿದೆ. ಹಳದಿ ಶಾಸ್ತ್ರದ ವೇಳೆ ಅನುಶ್ರೀ – ರೋಷನ್ ಸು ಫ್ರಂ ಸೋ ಚಿತ್ರದ ʻಬಂದರೋ ಬಂದರೋ ಬಾವ ಬಂದರೋʼ ಹಾಡಿಗೆ ಕುಣಿದು ಕುಪ್ಪಳಿಸಿದ್ದಾರೆ.
ಗುರುವಾರ ಬೆಳಗ್ಗೆ 10:56ರ ಶುಭ ಮುಹೂರ್ತದಲ್ಲಿ ಅನುಶ್ರೀ ಹಾಗೂ ರೋಷನ್ ಮದುವೆ ನಡೆಯಲಿದೆ. ಅಂದಹಾಗೆ, ಇವರಿಬ್ಬರ ಮದುವೆಯು (Anushree Roshan Wedding) ಬೆಂಗಳೂರಿನ ಹೊರವಲಯದ ಕಗ್ಗಲಿಪುರದಲ್ಲಿರುವ ಒಂದು ಖಾಸಗಿ ರೆಸಾರ್ಟ್‌ನಲ್ಲಿ ನಡೆಯಲಿದೆ.
ಮೂಲತಃ ಉದ್ಯಮಿ ಆಗಿರುವ ರೋಷನ್ ಜೊತೆ ಅನುಶ್ರೀ ಮದುವೆಯಾಗುತ್ತಿದ್ದಾರೆ. ಕೂರ್ಗ್‌ನವರಾದ ರೋಷನ್ ತಂದೆ ಹೆಸರು ರಾಮಮೂರ್ತಿ ಹಾಗೂ ತಾಯಿ ಹೆಸರು ಸಿಸಿಲಿಯಾ ಎಂದು. ಇದು ಲವ್ ಕಂ ಅರೇಂಜ್ಡ್ ಮ್ಯಾರೇಜ್ ಅಂತ ಹೇಳಲಾಗುತ್ತಿದೆ.
ಕನ್ನಡದಲ್ಲಿ ಬಹು ಬೇಡಿಕೆಯುಳ್ಳ ನಿರೂಪಕಿಯಾಗಿ ಗುರುತಿಸಿಕೊಂಡಿರುವ ಅನುಶ್ರೀ ಮದುವೆ ಬಗ್ಗೆ ಅವರ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿತ್ತು. ಅವರು ಎಲ್ಲೇ ಹೋದರೂ, ʻಮದುವೆ ಯಾವಾಗ?ʼ ಅನ್ನೋ ಪ್ರಶ್ನೆಯನ್ನ ಅಭಿಮಾನಿಗಳಲ್ಲದೇ ನಟ-ನಟಿಯರೂ ಕೇಳುತ್ತಲೇ ಇದ್ದರು. ಆಗೆಲ್ಲಾ ಫನ್ನಿಯಾಗಿ ಏನನ್ನಾದರೂ ಉತ್ತರಿಸಿ ಅನುಶ್ರೀ ಸುಮ್ಮನಾಗಿ ಬಿಡುತ್ತಿದ್ದರು. ಆದರೆ, ʻಈ ವರ್ಷ ಮದುವೆ ಆಗುತ್ತೇನೆʼ ಎಂದು ಇತ್ತೀಚೆಗೆ ಹೇಳಿಕೊಂಡಿದ್ದರು. ಅದರಂತೆಯೇ ಅನುಶ್ರೀ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈ ಸುದ್ದಿ ಕೇಳಿ ಅನುಶ್ರೀ ಅವರ ಅಭಿಮಾನಿಗಳಿಗೆ ಖುಷಿಯಾಗಿದೆ.
ರಿಯಾಲಿಟಿ ಶೋಗಳನ್ನು ನಿರೂಪಣೆ ಮಾಡಿ ಸೈ ಎನಿಸಿಕೊಂಡಿರುವ ಅನುಶ್ರೀ, ʻಬಿಗ್ ಬಾಸ್ʼನಲ್ಲಿಯೂ ಸ್ಪರ್ಧಿಸಿದ್ದರು. ನಟಿಯಾಗಿಯೂ ತಮ್ಮ ಪ್ರತಿಭೆಯನ್ನು ತೋರಿದ ಅನುಶ್ರೀ, ಕೆಲವು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.