– ISPRL ಬಿಡ್ ಗೆದ್ದ ಮೇಘಾ ಎಂಜಿನಿಯರಿಂಗ್ ಕಂಪನಿ
– 214 ಎಕರೆ ಜಾಗದಲ್ಲಿ ಘಟಕ ನಿರ್ಮಾಣ
ನವದೆಹಲಿ: ಉಡುಪಿಯ ಪಾದೂರಿನಲ್ಲಿ (Paduru) ಮೇಘಾ ಎಂಜಿನಿಯರಿಂಗ್ ಕಂಪನಿ (Megha Engineering & Infrastructures Ltd) ಭೂಗತ ತೈಲ ಸಂಗ್ರಹಣ ಘಟಕವನ್ನು ನಿರ್ಮಿಸಲಿದೆ.
ಮೇಘಾ ಎಂಜಿನಿಯರಿಂಗ್ ಇನ್ಫಾಸ್ಟ್ರಕ್ಚರ್ ಲಿಮಿಟೆಡ್ ಕಂಪನಿ ಇಂಡಿಯನ್ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ಸ್ ಲಿಮಿಟೆಡ್ (ISPRL) ಬಿಡ್ ಗೆದ್ದುಕೊಂಡಿದೆ. ISPRL ಬಿಡ್ ಅನ್ನು ಖಾಸಗಿ ಕಂಪನಿ ಮೊದಲ ಬಾರಿಗೆ ಗೆದ್ದುಕೊಂಡಿದ್ದು ಸುಮಾರು 5,700 ಕೋಟಿ ರೂ ವೆಚ್ಚದಲ್ಲಿ 2.5 ದಶಲಕ್ಷ ಮೆಟ್ರಿಕ್ ಟನ್ ಸಾಮರ್ಥ್ಯದ ಸಂಗ್ರಹಣ ಘಟಕ ನಿರ್ಮಾಣವಾಗಲಿದೆ.
ಸಂಗ್ರಹಣಾ ಸೌಲಭ್ಯವನ್ನು ನಿರ್ಮಿಸಲು ಪಾದೂರಿನಲ್ಲಿ 214 ಎಕರೆ ಭೂಮಿಯನ್ನು ಐಎಸ್‌ಪಿಆರ್‌ಎಲ್ ಮೇಘಾ ಎಂಜಿನಿಯರಿಂಗ್ ಕಂಪನಿಗೆ ಉಚಿತವಾಗಿ ಹಸ್ತಾಂತರಿಸಲಿದೆ.
ಪಾದೂರಿನಲ್ಲಿ ಈಗಾಗಲೇ ತೈಲ ಸಂಗ್ರಹಣ ಘಟಕವನ್ನು ISPRL ಸ್ಥಾಪನೆ ಮಾಡಿದೆ. ಎರಡನೇ ಹಂತದ ಘಟಕ ಸ್ಥಾಪನೆ ಮಾಡುವ ಸಂಬಂಧ ದೇಶೀಯ ಮತ್ತು ಜಾಗತಿಕ ಕಂಪನಿಗಳಿಂದ ISPRL ಬಿಡ್ ಆಹ್ವಾನಿಸಿತ್ತು. ಆದರೆ ಜಾಗತಿಕ ಕಂಪನಿಗಳು ಬಿಡ್‌ನಲ್ಲಿ ಭಾಗವಹಿಸಿರಲಿಲ್ಲ ಎಂದು ವರದಿಯಾಗಿದೆ.
ಮೇಘಾ ಕಂಪನಿಯು ಸರ್ಕಾರ ಅಥವಾ ತೈಲ ಕಂಪನಿಗಳಿಗೆ ಶೇಖರಣಾ ಸ್ಥಳವನ್ನು ಗುತ್ತಿಗೆ ನೀಡುವ ಮೂಲಕ ಆದಾಯ ಸಂಗ್ರಹಿಸಬಹುದಾಗಿದೆ. ಆದರೆ ತುರ್ತು ಸಂದರ್ಭಗಳಲ್ಲಿ ಸಂಗ್ರಹಿಸಿದ ತೈಲದ ಮೇಲೆ ಸರ್ಕಾರವು ಮೊದಲ ಹಕ್ಕನ್ನು ಹೊಂದಿರಲಿದೆ. ಈ ಗುತ್ತಿಗೆಯ ಪ್ರಕಾರ ಮೇಘಾ ಎಂಜಿನಿಯರಿಂಗ್ ಕಂಪನಿ 5 ವರ್ಷದ ಒಳಗಡೆ ಘಟಕ ನಿರ್ಮಿಸಬೇಕು ಮತ್ತು 60 ವರ್ಷಗಳ ಕಾಲ ನಿರ್ವಹಣೆ ಮಾಡಬೇಕಾಗುತ್ತದೆ.
ತೈಲ ಸಂಗ್ರಹಗಾರ ಯಾಕೆ ಬೇಕು?
ವಿಶ್ವದಲ್ಲೇ ತುರ್ತು ಸಂದರ್ಭಕ್ಕೆಂದು ತೈಲ ಸಂಗ್ರಹ ಮಾಡುವ ಸಾಮರ್ಥ್ಯ ಹೊಂದಿರುವ ದೇಶಗಳ ಪೈಕಿ ಚೀನಾ ಮೊದಲ ಸ್ಥಾನದಲ್ಲಿದೆ. ಚೀನಾದ 1,200 ದಶಲಕ್ಷ ಬ್ಯಾರೆಲ್ ತೈಲವನ್ನು ಸಂಗ್ರಹ ಮಾಡುವ ಸಾಮರ್ಥ್ಯ ಹೊಂದಿದರೆ ಅಮೆರಿಕ 714 ದಶಲಕ್ಷ ಬ್ಯಾರೆಲ್ ತೈಲವನ್ನು ಸಂಗ್ರಹ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಇದನ್ನೂ ಓದಿ: ಕೋವಿಡ್ 19 ವೇಳೆಯಲ್ಲಿ ದೇಶಕ್ಕೆ ಸಾವಿರಾರು ಕೋಟಿ ಉಳಿಸಿದ ಮಂಗಳೂರು
ಸದ್ಯ ಭಾರತ 5.33 ದಶಲಕ್ಷ ಬ್ಯಾರೆಲ್ ಟನ್ ತೈಲವನ್ನು ಸಂಗ್ರಹಿಸುವ ಸಾಮರ್ಥ್ಯವನ್ನು ಹೊಂದಿದ್ದು, ಈ ತೈಲವನ್ನು ತುರ್ತು ಸಂದರ್ಭದಲ್ಲಿ 9 ದಿನಗಳ ಕಾಲ ಮಾತ್ರ ಬಳಸಬಹುದು. ಮುಂದಿನ 10 ವರ್ಷಗಳಲ್ಲಿ ಭಾರತ 15 ದಶಲಕ್ಷ ಬ್ಯಾರೆಲ್ ಟನ್ ತೈಲವನ್ನು ಸಂಗ್ರಹಿಸಲು ಯೋಜಿಸಿದೆ. ಇಂಟರ್‌ನ್ಯಾಷನಲ್ ಎನರ್ಜಿ ಏಜೆನ್ಸಿ(ಐಇಎ) ತನ್ನ ಸದಸ್ಯ ರಾಷ್ಟ್ರಗಳು 90 ದಿನಗಳ ಕಾಲ ತೈಲ ಸಂಗ್ರಹವನ್ನು ಹೊಂದಿರಬೇಕೆಂದು ಹೇಳಿದೆ.
ಭಾರತದಲ್ಲಿ ಎಲ್ಲೆಲ್ಲಿ ಸಂಗ್ರಹ?
ಐಎಸ್‍ಪಿಆರ್‌ಎಲ್ ಮಂಗಳೂರು, ಉಡುಪಿ ಬಳಿಯ ಪಾದೂರು, ವಿಶಾಖಪಟ್ಟಣಂನಲ್ಲಿ ಭೂಗತ ತೈಲ ಸಂಗ್ರಹಣ ಘಟಕಗಳನ್ನು ಸ್ಥಾಪಿಸಿದೆ. ಮೂರು ತೈಲ ಸಂಗ್ರಹಗಾರಗಳ ಪೈಕಿ ಪಾದೂರಿನಲ್ಲಿ ಅತಿ ಹೆಚ್ಚು ತೈಲವನ್ನು ಸಂಗ್ರಹ ಮಾಡಬಹುದಾಗಿದೆ. ಪಾದೂರಿನಲ್ಲಿ 2.5 ದಶಲಕ್ಷ ಟನ್(17 ದಶಲಕ್ಷ ಬ್ಯಾರೆಲ್), ಮಂಗಳೂರಿನಲ್ಲಿ 1.5 ದಶಲಕ್ಷ ಟನ್, ವಿಶಾಖಪಟ್ಟಣದಲ್ಲಿ 1.33 ದಶಲಕ್ಷ ಟನ್ ತೈಲವನ್ನು ಸಂಗ್ರಹಿಸಬಹುದಾಗಿದೆ.
ಶೇ.83ರಷ್ಟು ತೈಲವನ್ನು ಭಾರತ ಆಮದು ಮಾಡುತ್ತಿದೆ. 65 ದಿನಗಳಿಗೆ ಆಗುವಷ್ಟು ತೈಲವನ್ನು ಸಂಗ್ರಹಿಸಿಟ್ಟುಕೊಳ್ಳುವ ಸಾಮರ್ಥ್ಯ ರಿಫೈನರಿಗಳಿಗೆ ಇದೆ. 90 ದಿನಗಳ ಬಳಕೆಗೆ ಆಗುವಷ್ಟು ತೈಲ ಸಂಗ್ರಹಿಸುವ ನಿಟ್ಟಿನಲ್ಲಿ ಐಎಸ್‌ಪಿಆರ್‌ಎಲ್ ಒಡಿಶಾದ ಚಂಡಿಕೋಲ್, ರಾಜಸ್ಥಾನದ ಬಿಕಾನೆರ್, ಗುಜರಾತಿನ ರಾಜ್‍ಕೋಟ್ ಬಳಿ ಭೂಗತ ತೈಲಗಾರ ನಿರ್ಮಿಸಲು ಮುಂದಾಗುತ್ತಿದೆ.
ಕೋವಿಡ್ 19ನಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಭಾರೀ ಇಳಿಕೆ ಕಂಡಿತ್ತು. ಈ ಸಂದರ್ಭದಲ್ಲಿ ಭಾರತ ಕಡಿಮೆ ದರದಲ್ಲಿ ತೈಲವನ್ನು ಖರೀದಿಸಿ ಈ ಸಂಗ್ರಹಾಗಾರದಲ್ಲಿ ಸಂಗ್ರಹಿಸಿ ಭರ್ತಿ ಮಾಡಿತ್ತು. ಇದರಿಂದಾಗಿ ಒಟ್ಟು 5 ಸಾವಿರ ರೂ. ಕೋಟಿ ರೂ. ವಿದೇಶಿ ವಿನಿಮಯ ಉಳಿತಾಯವಾಗಿತ್ತು ಎಂದು ಪೆಟ್ರೋಲಿಯಂ ಸಚಿವಾಲಯ ಈ ಹಿಂದೆ ತಿಳಿಸಿತ್ತು.