ಕೆಪಿಎಸ್‍ಸಿ ನೇಮಕಾತಿಯಲ್ಲಿ ಮತ್ತೊಂದು ಹಗರಣ ಬಯಲು- ಕಲಬುರಗಿಯಲ್ಲಿ ಇಬ್ಬರ ಬಂಧನ

Public TV
1 Min Read

ಕಲಬುರಗಿ: ಕರ್ನಾಟಕ ಲೋಕಸೇವಾ ಆಯೋಗ ನಡೆಸ್ತಿರೋ ನೇಮಕಾತಿಯಲ್ಲಿ ಬೃಹತ್ ಹಗರಣ ಬಯಲಾಗಿದ್ದು, ಕಲಬುರಗಿ ಪೊಲೀಸರು ಬೇಟೆ ಶುರು ಹಚ್ಕೊಂಡಿದ್ದಾರೆ.

ಪ್ರಕರಣ ಸಂಬಂಧ ಪೊಲೀಸರು ಈಗಾಗಲೇ ಚಂದ್ರಕಾಂತ್ ಮತ್ತು ಭೀಮರಾಯ್ ಎಂಬ ಇಬ್ಬರನ್ನು ಬಂಧಿಸಿದ್ದಾರೆ. ಸದ್ಯ ಅವರ ದೂರವಾಣಿ ಕರೆ ಸೇರಿದಂತೆ ಮಹತ್ವದ ಮಾಹಿತಿಗಳನ್ನು ಸಂಗ್ರಹಿಸ್ತಿದ್ದಾರೆ. ಕಲಬುರಗಿ ಮಾತ್ರವಲ್ಲದೇ ವಿಜಯಪುರ, ಶಿವಮೊಗ್ಗ, ಬೆಂಗಳೂರಲ್ಲೂ ಜಾಲ ಹಬ್ಬಿರುವ ಬಗ್ಗೆ ಪೊಲಿಸರಿಗೆ ಮಾಹಿತಿ ದೊರೆತಿದೆ.

ಹತ್ತರಿಂದ ಹದಿನೈದು ಲಕ್ಷ ರೂಪಾಯಿ ಪಡೆದು ಕೆಪಿಎಸ್‍ಸಿ ಪರೀಕ್ಷೆ ಪಾಸ್ ಮಾಡೋ ಜಾಲ ಇದಾಗಿದೆ. ಈ ಸಂಬಂಧ ಡಿಸಿಐಬಿ ಮತ್ತು ಅಶೋಕ ನಗರ ಠಾಣೆ ಪೊಲೀಸರು ಈಗಾಗಲೇ ಹಲವರನ್ನು ವಿಚಾರಣೆಗೊಳಪಡಿಸಿದ್ದಾರೆ.

ಫೆಬ್ರವರಿ 26ರಂದು ಕೆಪಿಎಸ್‍ಸಿ ಪರೀಕ್ಷೆಯಲ್ಲಿ ಅಕ್ರಮ ನಡೆಸಿದ ತಂಡವೊಂದನ್ನು ಕಲಬುರಗಿ ಪೊಲೀಸರು ಭೇದಿಸಿದ್ದು, ಪ್ರಕರಣ ಸಂಬಂಧ ಒಟ್ಟು 12 ಜನರನ್ನು ವಶಕ್ಕೆ ಪಡೆದಿದ್ದರು. ಇದರ ಕಿಂಗ್ ಪಿನ್ ಹಾಗು ಸರ್ಕಾರಿ ಶಾಲೆಯ ಶಿಕ್ಷಕ ಮೊಹಮ್ಮದ್ ನದಾಫ್ ಪರಾರಿಯಾಗಿದ್ದಾನೆ. ಇವರು ಪರೀಕ್ಷಾರ್ಥಿಗಳಿಂದ ಒಂದು ಹುದ್ದೆಗೆ 10 ಲಕ್ಷ ರೂಪಾಯಿ ಹಣ ಪಡೆದು, ಅವರಿಗೆ ಮೈಕ್ರೋ ಇಯರ್ ಫೋನ್ ಮುಖಾಂತರ ಪರೀಕ್ಷೆಯಲ್ಲಿ ಉತ್ತರಗಳನ್ನು ಹೇಳುತ್ತಿದ್ದರು.

ಇನ್ನೊಂದೆಡೆ ಕಲಬುರಗಿಯ ನ್ಯಾಷನಲ್ ಕಾಲೇಜು ಮತ್ತು ಗ್ಲೋಬಲ್ ಕಾಲೇಜಿನ ಎರಡು ಕಡೆ ಅದೇ ದಿನ ಪ್ರಶ್ನೆಪತ್ರಿಕೆ ಬಹಿರಂಗವಾಗಿದ್ದು, ಪ್ರಕರಣ ಸಂಬಂಧ ನ್ಯಾಷನಲ್ ಕಾಲೇಜು ಡಾ.ರೆಹೆನಾ ಬೇಗಂ ಮತ್ತು ಗ್ಲೋಬಲ್ ಕಾಲೇಜಿನ ಪ್ರಿನ್ಸಿಪಲ್ ಡಾ.ಉಮೇರಾ ಬೇಗಂರನ್ನು ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಸೂಚಿಸಿರುವುದು ಮಂಗಳವಾರ ವರದಿಯಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *