ಮ್ಯಾನ್ಮಾರ್‌ನಲ್ಲಿ ಮತ್ತೆ ಭೂಕಂಪ – ಆಸ್ಪತ್ರೆ ಕಟ್ಟಡಗಳೇ ನಾಮಾವಶೇಷ, ರಸ್ತೆಯಲ್ಲೇ ರೋಗಿಗಳಿಗೆ ಚಿಕಿತ್ಸೆ

Public TV
2 Min Read

– 200ಕ್ಕೂ ಅಧಿಕ ಮಂದಿ ಬಲಿ

ನೇಪಿಟಾವ್/ಬ್ಯಾಂಕಾಕ್‌: ಮ್ಯಾನ್ಮಾರ್‌ನಲ್ಲಿ ಶುಕ್ರವಾರ ಒಂದೇ ದಿನ ಮೂರು ಬಾರಿ ಭೂಕಂಪ (Earthquake) ಸಂಭವಿಸಿದ್ದು, ಭೂಕಂಪನದ ತೀವ್ರತೆ ಥ್ಯಾಯ್ಲೆಂಡ್ ನ ಬ್ಯಾಂಕಾಂಕ್ ಮತ್ತು ಬಾಂಗ್ಲಾದೇಶದ ವರಗೂ ವ್ಯಾಪಿಸಿದೆ. ಭೂ ಕಂಪನದ ಕೇಂದ್ರ ಬಿಂದು ಇದ್ದ ಮಯನ್ಮಾರ್‌ನಲ್ಲಿ (Myanmar) ಭಾರೀ ಹಾನಿಯಾಗಿದ್ದು ಈವರೆಗೆ 200ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ.

ಅಲ್ಲದೇ ಶುಕ್ರವಾರ ರಾತ್ರಿಯೂ ಮತ್ತೆ ಭೂಕಂಪನವಾಗಿದ್ದು, ಸಾವು ನೋವಿನ ಪ್ರಮಾಣವನ್ನು ಮತ್ತಷ್ಟು ಏರಿಕೆ ಮಾಡಿದೆ. ಶುಕ್ರವಾರ ರಾತ್ರಿ 11:56ರ ವೇಳೆ ಮ್ಯಾನ್ಮಾರ್‌ನಲ್ಲಿ ಭೂಕಂಪನವಾಗಿದ್ದು, ರಿಕ್ಟರ್‌ ಮಾಪಕದಲ್ಲಿ 4.2 ತೀವ್ರತೆ ದಾಖಲಾಗಿದೆ.

ಅಫ್ಘಾನಿಸ್ತಾನದಲ್ಲೂ ಕಂಪಿಸಿದ ಭೂಮಿ:
ಮ್ಯಾನ್ಮಾರ್‌, ಥಾಯ್ಲೆಂಡ್‌ನಲ್ಲಿ ಭೂಂಕಪದ ಬೆನ್ನಲ್ಲೇ ಶನಿವಾರ ಮುಂಜಾನೆ ಅಫ್ಘಾನಿಸ್ತಾನದಲ್ಲೂ ಭೂಮಿ ಕಂಪಿಸಿದ ಅನುಭವವಾಗಿದೆ. ಇಂದು ಮುಂಜಾನೆ 5:16ಕ್ಕೆ ಭೂಮಿ ಕಂಪಿಸಿದ್ದು, ಭೂಮಿಯಿಂದ 180 ಕಿಮೀ ಆಳದಲ್ಲಿ ಕೇಂದ್ರ ಬಿಂದು ಪತ್ತೆಯಾಗಿದ್ದೆ. ರಿಕ್ಟರ್‌ ಮಾಪಕದಲ್ಲಿ 4.7 ತೀವ್ರತೆ ದಾಖಲಾಗಿದೆ. ಸದ್ಯದ ಮಾಹಿತಿ ಪ್ರಕಾರ ಅಫ್ಘಾನಿಸ್ತಾನದಲ್ಲಿ ಯಾವುದೇ ಸಾವುನೋವು ಸಂಭವಿಸಿಲ್ಲ ಎಂದು ವರದಿಗಳು ತಿಳಿಸಿವೆ.

ರಸ್ತೆಗಳಲ್ಲೇ ಚಿಕಿತ್ಸೆ:
ಮ್ಯಾನ್ಮಾರ್‌ನಲ್ಲಿ ಉಂಟಾದ ಭೀಕರ ಭೂಕಂಪ ಸಾಕಷ್ಟು ಸಾವು-ನೋವು ಉಂಟುಮಾಡಿದೆ. ಒಂದೆಡೆ ಕ್ಷಣಕ್ಷಣಕ್ಕೂ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಈವರೆಗೆ 200ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಇನ್ನೂ ನೂರಾರು ಮಂದಿ ಅವಶೇಷಗಳ ಅಡಿ ಸಿಲುಕಿರುವ ಶಂಕೆಯಿದೆ. ಮತ್ತೊಂದೆಡೆ ಜೀವ ಉಳಿಸಬೇಕಾದ ಆಸ್ಪತ್ರೆಗಳೇ ಕಣ್ಣೀರಿನ ಕಥೆ ಹೇಳುತ್ತಿವೆ. ಸಾವಿರಾರು ಹಾಸಿಗೆ ಸೌಲಭ್ಯ ಹೊಂದಿರುವ ಆಸ್ಪತ್ರೆಗಳು ನಾಮಾವಶೇಷವಾಗಿದ್ದು, ನೊಂದ ಸಂತ್ರಸ್ತರಿಗೆ ರಸ್ತೆಯಲ್ಲೇ ಚಿಕಿತ್ಸೆ ನೀಡುವಂತಹ ಪರಿಸ್ಥಿತಿ ಬಂದೊದಗಿವೆ. ಇದರಿಂದ ಮ್ಯಾನ್ಮಾರ್‌ನ ನೈಪಿತಾವು ಸೇರಿ 6 ಪ್ರದೇಶ ಹಾಗೂ ರಾಜ್ಯಗಳಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ.

Share This Article