ರೈತರಿಗೆ, ವಿದ್ಯಾರ್ಥಿಗಳಿಗೆ ವಿದ್ಯುತ್ ಸಮಸ್ಯೆ ಆಗಬಾರದು: ಯೋಗಿಯಿಂದ ಎರಡನೇ ಮಹತ್ವದ ಆದೇಶ

Public TV
2 Min Read

ಲಕ್ನೋ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ 24 ಗಂಟೆ ಮತ್ತು ಗ್ರಾಮೀಣ ಭಾಗದಲ್ಲಿ 18 ಗಂಟೆ ನಿರಂತರ ವಿದ್ಯುತ್ ನೀಡುವಂತೆ ಅಧಿಕಾರಿಗಳಿಗೆ ಆದೇಶ ಹೊರಡಿಸಿದ್ದಾರೆ.

ಮೊದಲ ಕ್ಯಾಬಿನೆಟ್‍ನಲ್ಲಿ ರೈತರ ಸಾಲಮನ್ನಾ ಮಾಡಿದ್ದ ಯೋಗಿ ಸರ್ಕಾರ ಎರಡನೇ ಕ್ಯಾಬಿನೆಟ್‍ನಲ್ಲಿ ವಿದ್ಯುತ್ ಸಮಸ್ಯೆ ನಿವಾರಣೆಗೆ ಕ್ರಮವನ್ನು ತೆಗೆದುಕೊಂಡಿದೆ.

ಗ್ರಾಮಾಂತರ ಭಾಗದಲ್ಲಿ ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳಿಗೆ ವಿದ್ಯುತ್ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಅದಕ್ಕಾಗಿ ಸಂಜೆ 6 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ವಿದ್ಯುತ್ ಕಡಿತಗೊಳಿಸಬಾರದು ಎಂದು ಯೋಗಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ದೋಷಪೂರಿತ ಅಥವಾ ಸುಟ್ಟು ಹೋಗಿರುವ ಎಲ್ಲಾ ಟ್ರಾನ್ಸ್ ಫಾರ್ಮರ್ ಗಳನ್ನು ಕೂಡಲೇ ಬದಲಾಯಿಸಬೇಕು. ಕೃಷಿಕರಿಗೆ ಮುಂದೆ ಯಾವುದೇ ಕಾರಣಕ್ಕೆ ವಿದ್ಯುತ್ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕೆಂದು ಯೋಗಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಉತ್ತರ ಪ್ರದೇಶದ ಗ್ರಾಮೀಣ ಭಾಗದಲ್ಲಿ 18 ಗಂಟೆಗಳ ಕಾಲ ವಿದ್ಯುತ್ ವಿತರಣೆಗೆ ಕ್ರಮ ಕೈಗೊಂಡಿರುವುದು ಇದೇ ಮೊದಲು ಎಂದು ಇಂಧನ ಸಚಿವ ಶ್ರೀಕಾಂತ್ ಶರ್ಮಾ ಹೇಳಿದ್ದಾರೆ.

ಪ್ರತಿಯೊಬ್ಬ ಬಡವನಿಗೆ ಮನೆ, ಪ್ರತಿಯೊಂದು ಗ್ರಾಮಕ್ಕೆ ವಿದ್ಯುತ್ ಕಲ್ಪಿಸುವುದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮತ್ತು ಸಿಎಂ ಯೋಗಿ ಅವರ ಕನಸು ಎಂದು ಅವರು ತಿಳಿಸಿದರು.

ಎಲ್ಲರಿಗೂ ವಿದ್ಯುತ್ ಎಂಬ ಮಹತ್ವದ ಯೋಜನೆಗೆ ಏಪ್ರಿಲ್ 14ರಂದು ಯೋಗಿ ಆದಿತ್ಯನಾಥ್ ಹಾಗೂ ಕೇಂದ್ರ ಇಂಧನ ಸಚಿವ ಪಿಯುಶ್ ಗೋಯಲ್ ಸಹಿ ಹಾಕಲಿದ್ದು,  2019ರ ವೇಳೆಗೆ ಉತ್ತರ ಪ್ರದೇಶದ ಎಲ್ಲಾ ಗ್ರಾಮಗಳು ವಿದ್ಯುತ್ ಸಂಪರ್ಕ ಪಡೆಯಲಿವೆ ಎಂದು ಶ್ರೀಕಾಂತ್ ಶರ್ಮಾ ಹೇಳಿದರು.

ಕ್ಯಾಬಿನೆಟ್ ಸಭೆ ನಡೆಯುದಕ್ಕೂ ಮೊದಲು ಹಿರಿಯ ಸಚಿವ ಸಿದ್ದಾರ್ಥ್ ನಾಥ್ ಸಿಂಗ್ ಇಂದಿನ ಕ್ಯಾಬಿನೆಟ್ ಸಭೆಯಲ್ಲಿ “ಶ್ರೀ ಸಾಮಾನ್ಯ ಸೇವೆ” ಅಜೆಂಡಾವನ್ನು ಇಟ್ಟುಕೊಂಡಿದ್ದೇವೆ ಎಂದು ಟ್ವೀಟ್ ಮಾಡಿದ್ದರು.

ಉತ್ತಪ್ರದೇಶದ ಚುನಾವಣೆಯ ವೇಳೆ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ರೈತರ ಸಾಲವನ್ನು ಮನ್ನಾ ಮಾಡುವುದಾಗಿ ಹೇಳಿತ್ತು. ಅದರಂತೆ ಮೊದಲ ಸಂಪುಟ ಸಭೆಯಲ್ಲಿ ಯೋಗಿ ಆದಿತ್ಯನಾಥ್ ರಾಜ್ಯದ ರೈತರ 36,359 ಕೋಟಿ ರೂ. ಸಾಲ ಮನ್ನಾ ಮಾಡುವ ನಿರ್ಧಾರವನ್ನು ಕೈಗೊಂಡಿದ್ದರು.

2.15 ಕೋಟಿ ರೈತರಲ್ಲಿ 1 ಲಕ್ಷ ರೂಪಾಯಿವರೆಗಿನ ಸಾಲ ಮನ್ನಾ ಮಾಡಲಾಗಿದೆ.  ಇದರ ಜೊತೆಗೆ ಪಾಳು ಬಿದ್ದಿರುವ ಜಮೀನು ಹೊಂದಿರುವ 7 ಲಕ್ಷ ರೈತರ 5,630 ಕೋಟಿ ರೂಪಾಯಿ ಮನ್ನಾ ಮಾಡಿದ್ದಾರೆ.2016ರ ಮಾರ್ಚ್ 31ರವರೆಗೆ ಸಾಲ ಪಡೆದ ರೈತರಿಗೆ ಇದು ಅನ್ವಯವಾಗಲಿದೆ. 2017ರ ಮಾರ್ಚ್‍ಗೆ 31ರವರೆಗೆ ಬಾಕಿ ಇರುವ ಸಾಲವನ್ನ ಸರ್ಕಾರ ಪಾವತಿಸುತ್ತದೆ.

Share This Article
Leave a Comment

Leave a Reply

Your email address will not be published. Required fields are marked *