ಹಠ ಮಾಡಿ ಇಲ್ಲಿಗೆ ಬಂದೆ, ಇದೀಗ ಹಠದಲ್ಲೇ ಹೋಗ್ತಿದ್ದೀನಿ: ಅಂಜು ಡೆತ್‍ನೋಟ್

Public TV
2 Min Read

ಬೆಂಗಳೂರು: ಪ್ರೀತಿಸಿ ಮದುವೆಯಾಗಿ 4 ತಿಂಗಳಲ್ಲಿಯೇ ಆತ್ಮಹತ್ಯೆಗೆ ಶರಣಾಗಿರುವ ಮಹಿಳಾ ಎಂಜಿನಿಯರ್ ಅಂಜು ಅವರು ತಾವು ನಿರ್ಧಾರ ತೆಗೆದುಕೊಳ್ಳುವ ಮೊದಲು ಡೆತ್ ನೋಟ್ ಬರೆದಿಟ್ಟಿದ್ದಾರೆ.

ಈ ಡೆತ್‍ನೋಟ್‍ನಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗಿರುವ ಕುರಿತು ಹೇಳಿಕೊಂಡಿದ್ದಾರೆ. ಅಲ್ಲದೆ ಅಮ್ಮನ ಬಳಿ ಕ್ಷಮೆಯಾಚಿಸಿದ್ದಾರೆ. ಹಠ ಮಾಡಿ ಮದುವೆಯಾಗಿ ಇಲ್ಲಿಗೆ ಬಂದೆ. ಇದೀಗ ಅದೇ ಹಠದಿಂದ ಇಲ್ಲಿಂದ ಹೋಗುತ್ತಿರುವುದಾಗಿ ಅಂಜು ಬರೆದಿದ್ದಾರೆ.

ಡೆತ್ ನೋಟ್ ನಲ್ಲಿ ಏನಿದೆ..?: ನನ್ನ ಸಾವಿಗೆ ನಾನೇ ಕಾರಣ. ನನ್ನ ಮನಸ್ಥಿತಿ ಸರಿ ಇಲ್ಲ. ಏನು ಮಾಡ್ತಿದ್ದೀನಿ ಗೊತ್ತಾಗ್ತಿಲ್ಲ ಅಂಜನ್. ಐ ಡೋಂಟ್ ನೋ ವಾಟ್ ಐ ಆ್ಯಮ್ ಡೂಯಿಂಗ್. ನನಗೆ ಬೆನ್ನು ನೋವಿದೆ. ಆದರೂ ಹೇಳಿಕೊಳ್ಳಲು ಆಗ್ತಿಲ್ಲ. ಕೋಪ ಹಠ ಮಾಡಿಕೊಳ್ಳುತ್ತಿದ್ದೆ. ನನಗೆ ಹರ್ಟ್ ಆಗ್ತಿತ್ತು. ನನ್ನ ಜೊತೆ ಇದ್ದರೂ ದೂರ ಇದ್ದೀಯಾ ಅಂತಾ ಅನ್ನಿಸ್ತಿದೆ. ಏನೂ ಗೊತ್ತಾಗ್ತಿಲ್ಲ ಬರಿಯೋದಕ್ಕೆ. ಬಾಯ್ ಇನ್ಯಾವತ್ತೂ ನಿನಗೆ ಹಿಂಸೆ ಕೊಡೋದಕ್ಕೆ ಬರೋದಿಲ್ಲ. ಅಮ್ಮಾ ಐ ಲವ್ ಯೂ, ಹಠ ಮಾಡಿಕೊಂಡು ಇಲ್ಲಿಗೆ ಬಂದೆ. ಹಠ ಮಾಡಿಕೊಂಡು ಹೋಗ್ತಿದ್ದೀನಿ. ಅಮ್ಮಾ ನನ್ನ ಕ್ಷಮಿಸು ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಪೋಷಕರ ಆರೋಪವೇನು..?: ಕಡೂರು ತಾಲೂಕು ಬೋಳನಹಳ್ಳಿಯ ರವಿಕುಮಾರ್ ಹೇಮಾವತಿ ದಂಪತಿಯ ಎರಡನೇ ಪುತ್ರಿಯಾಗಿರುವ ಅಂಜು ಖಾಸಗಿ ಕಂಪನಿಯಲ್ಲಿ ಎಂಜಿನಿಯರ್ ಅಗಿ ಕೆಲಸ ನಿರ್ವಹಿಸುತ್ತಿದ್ದರು. ಈಕೆ ಪ್ರೀತಿ ಮಾಡಿ ಕಳೆದ 4 ತಿಂಗಳ ಹಿಂದೆಯಷ್ಟೇ ಅರಕಲಗೂಡು ನಿವಾಸಿ ಅಂಜನ್ ಕಣಿಯಾರ್ (28) ಎಂಬಾತನನ್ನು ವರಿಸಿದ್ದರು. ಇದನ್ನೂ ಓದಿ: ಪ್ರೀತಿಸಿ 4 ತಿಂಗಳ ಹಿಂದೆಯಷ್ಟೇ ಮದ್ವೆಯಾಗಿದ್ದ ಮಹಿಳಾ ಎಂಜಿನಿಯರ್ ಆತ್ಮಹತ್ಯೆ

ಸಿವಿಲ್ ಎಂಜಿನಿಯರಿಂಗ್ ನಲ್ಲಿ ಬಿಇ ಮಾಡಿದ್ದ ಅಂಜು ಹಾಸನದಲ್ಲಿ ಓದುವಾಗ ಇಬ್ಬರ ನಡುವೆ ಪ್ರೀತಿಯಾಗಿತ್ತು. ನಂತರ ಪೋಷಕರನ್ನ ಒಪ್ಪಿಸಿ ಕಳೆದ ಫೆಬ್ರವರಿಯಲ್ಲಿ ಕಡೂರಿನ ಬಳ್ಳೆಕೆರೆಯಲ್ಲಿ ಮದುವೆಯಾಗಿದ್ದರು. ಬಳಿಕ ಯುವತಿಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಆರೋಪ ಕೇಳಿಬಂದಿತ್ತು. ಅಲ್ಲದೆ ತನ್ನ ತಾಯಿ ಬಳಿ ಆಗಾಗ ಅಂಜು ಕಷ್ಟ ಹೇಳಿಕೊಳ್ಳುತ್ತಿದ್ದರಂತೆ. ಹೀಗಾಗಿ ಇದೀಗ ಹುಡುಗನ ಮನೆಯವರು ಕೊಲೆ ಮಾಡಿದ್ದಾರೆ ಎಂದು ಅಂಜು ಪೋಷಕರು ಆರೋಪ ಮಾಡುತ್ತಿದ್ದಾರೆ.

ಪತಿ ಹೇಳಿದ್ದೇನು..?: ನಿನ್ನೆ ಬೆಳಗ್ಗೆ ಸಂಬಂಧಿ ಹುಟ್ಟುಹಬ್ಬಕ್ಕೆ ಕುಟುಂಬಸ್ಥರ ಜೊತೆ ತೆರಳಿದ್ದೆ. ಅಂಜು ಮನೆಯಲ್ಲಿಯೇ ಇದ್ದಳು. ಈ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕಾರ್ಯಕ್ರಮ ಮುಗಿಸಿ ಸಂಜೆ 6 ಗಂಟೆಗೆ ವಾಪಸ್ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ ಎಂದು ಅಂಜನ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಡೆತ್ ನೋಟ್ ಪ್ರಕಾರ ಅನಾರೋಗ್ಯದಿಂದ ಆತ್ಮಹತ್ಯೆ ಮಾಡಿಕೊಂಡ್ರಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಅಂಜುಗೆ ಅನಾರೋಗ್ಯ ಸಮಸ್ಯೆ ಕಾಡ್ತಿತ್ತಂತೆ. ಥೈರಾಯಿಡ್ ಸಮಸ್ಯೆಯಿಂದ ಬಳಲುತ್ತಿದ್ದ ಅಂಜುಗೆ ಹಲವು ಕಡೆಗಳಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಇದೇ ಕಾರಣಕ್ಕೆ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿರೊ ಶಂಕೆ ವ್ಯಕ್ತವಾಗುತ್ತಿದೆ. ಈ ಸಂಬಂಧ ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *