ಪಾಕ್ ಪರ ಘೋಷಣೆ ಕೂಗಿದ್ದು ವಿಕೃತ ಮನಸ್ಸಿನವರು: ಅನಿತಾ ಕುಮಾರಸ್ವಾಮಿ

Public TV
1 Min Read

ರಾಮನಗರ: ಪಾಕ್ ಪರ ಘೋಷಣೆ ಕೂಗುತ್ತಿರುವುದನ್ನು ನೋಡಿ ನಿಜವಾಗಿಯೂ ನನಗೆ ಆಶ್ಚರ್ಯವಾಗುತ್ತಿದೆ. ನಮ್ಮ ದೇಶದವರಾಗಿ ಪಾಕಿಸ್ತಾನದ ಪರ ಘೋಷಣೆ ಕೂಗುವುದು ವಿಕೃತ ಮನಸ್ಸಿನವರು ಅಂತ ಹೇಳಬೇಕು ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನ ಪರ ಅಮೂಲ್ಯ ಘೋಷಣೆ ಕೂಗಿದ ವಿಚಾರವಾಗಿ ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ಪಾಕ್ ಪರ ಘೋಷಣೆ ಕೂಗಿದವರ ವಿರುದ್ಧ ಕ್ರಮ ತೆಗೆದುಕೊಳ್ಳಲೇಬೇಕು. ಮುಂದೆ ಇನ್ಯಾರು ಆ ರೀತಿ ಮಾಡಬಾರದು, ಆ ರೀತಿ ಕ್ರಮ ಕೈಗೊಂಡರೆ ಬೇರೆಯವರಿಗೂ ಹೆದರಿಕೆ ಇರುತ್ತದೆ. ಆ ರೀತಿಯಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಇದೇ ಸಂದರ್ಭದಲ್ಲಿ ಮಾಜಿ ಸಚಿವ ಸಾ.ರಾ ಮಹೇಶ್ ಪ್ರತಿಕ್ರಿಯಿಸಿ, ದೇಶದಲ್ಲಿ ಬಾಳುವಂತಹ ಪ್ರತಿಯೊಬ್ಬರೂ ದೇಶಕ್ಕೆ ಋಣಿಯಾಗಿರಬೇಕು. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಯಾರೇ ಆದರೂ ಅಷ್ಟೇ. ಗುರುವಾರ ಆಗಿರುವ ಘಟನೆ ನಾವೆಲ್ಲರೂ ತಲೆ ತಗ್ಗಿಸುವ ವಿಚಾರ. ಆಯೋಜಕರು ಇದರ ಬಗ್ಗೆ ಸೂಕ್ಷ್ಮತೆ ಅರಿಯಬೇಕಿತ್ತು. ಯಾರೇ ಮಾಡಿದ್ದರೂ ಅದು ತಪ್ಪೇ, ನಿನ್ನೆಯೇ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ ಎಂದರು.

ಹೋರಾಟಗಳಲ್ಲಿ ಕಿಡಿ ಹಚ್ಚುವವರ ವಿರುದ್ಧ ಪೊಲೀಸರು ಮೊದಲೇ ಕ್ರಮ ವಹಿಸಬೇಕಿತ್ತು. ಎಲ್ಲರಿಗೂ ಇದು ಮುಜುಗರ ತರುವಂತಹ ವಿಚಾರ. ಹೋರಾಟ ಮಾಡುವ ವೇಳೆ ಕೆಲವು ಕಿಡಿಗೇಡಿಗಳು ಇರುತ್ತಾರೆ. ಈ ವಿಚಾರವಾಗಿ ಆಯೋಜಕರು ಸೂಕ್ಷ್ಮವಾಗಿ ಗಮನಿಸಬೇಕಿತ್ತು. ಅಲ್ಲದೆ ಪೊಲೀಸರು ಮುಂಜಾಗೃತಾ ಕ್ರಮ ವಹಿಸಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

ನಡೆದಿದ್ದೇನು?
ಸಿಎಎ ಹಾಗೂ ಎನ್‍ಸಿಆರ್ ವಿರೋಧಿಸಿ ಗುರುವಾರ ನಗರದ ಪ್ರೀಡಂ ಪಾರ್ಕಿನಲ್ಲಿ ಆಸಾದುದ್ದೀನ್ ಓವೈಸಿ ಭಾಗವಹಿಸಿದ್ದ ಪ್ರತಿಭಟನಾ ಕಾರ್ಯಕ್ರಮದ ವೇದಿಕೆಯಲ್ಲೇ ಅಮೂಲ್ಯ ಲಿಯೋನಾ, ‘ಪಾಕಿಸ್ತಾನ ಜಿಂದಾಬಾದ್’ ಎಂದು ಜೈಕಾರ ಕೂಗಿದ್ದಳು. ಅಮೂಲ್ಯ ಈ ರೀತಿ ಘೋಷಣೆ ಕೂಗುತ್ತಿದ್ದಂತೆ ಓವೈಸಿ ಗೊಂದಲಗೊಂಡಿದ್ದು, ಆಕೆಯನ್ನು ಮಾತನಾಡದಂತೆ ತಡೆಯಲು ಪ್ರಯತ್ನಿಸಿದರು. ಕೂಡಲೇ ತಕ್ಷಣ ಸಂಘಟಕರು ಮೈಕ್ ಕಿತ್ತುಕೊಂಡು ಅಮೂಲ್ಯ ಅವರನ್ನು ತಡೆದಿದ್ದು, ಇದೀಗ ಪೊಲೀಸರು ಆಕೆಯನ್ನು ಜೈಲಿಗಟ್ಟಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *