10 ವರ್ಷಗಳಲ್ಲಿ ಭಾರತ ಅದ್ಭುತ ಅಭಿವೃದ್ಧಿಯನ್ನು ಸಾಧಿಸಿದೆ- ‘ನಮೋ’ ಸಾಧನೆ ಹೊಗಳಿದ ರಶ್ಮಿಕಾ ಮಂದಣ್ಣ

Public TV
2 Min Read

ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ (Rashmika Mandanna) ಸದ್ಯ ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಮುಂಬೈನಲ್ಲಿಯೇ ಬೀಡು ಬಿಟ್ಟಿರುವ ರಶ್ಮಿಕಾ, ಇದೀಗ ಮುಂಬೈನ ಅಟಲ್ ಸೇತು ಬಗ್ಗೆ ಸಂದರ್ಶನವೊಂದರಲ್ಲಿ ಹೆಮ್ಮೆಯ ಮಾತುಗಳನ್ನಾಡಿದ್ದಾರೆ. ಇದನ್ನೂ ಓದಿ:‘ಮ್ಯಾಕ್ಸ್’ ನಂತರ ಚರಣ್‍ ಚಿತ್ರಕ್ಕೆ ಕಾಲ್‍ ಶೀಟ್ ಕೊಟ್ಟ ಸುದೀಪ್

ಇದೇ ಜನವರಿ ತಿಂಗಳಲ್ಲಿ ಪ್ರಧಾನಿ ಮೋದಿಯವರಿಂದ ಉದ್ಘಾಟನೆಗೊಂಡ ಅಟಲ್ ಸೇತು ಬಗ್ಗೆ ಹಾಗೂ ಒಟ್ಟಾರೆ ದೇಶದ ಮೂಲಸೌಕರ್ಯ ಅಭಿವೃದ್ಧಿಯಾಗುತ್ತಿರುವ ಬಗ್ಗೆ ರಶ್ಮಿಕಾ ಹೆಮ್ಮೆಯಿಂದ ಮಾತನಾಡಿದ್ದಾರೆ. ನವಿ ಮುಂಬೈನಿಂದ ಮುಂಬೈಗೆ ಪ್ರಯಾಣಿಸಲು ಎರಡು ಗಂಟೆ ಹಿಡಿಯುತ್ತಿತ್ತು, ಈಗ 20 ನಿಮಿಷಗಳಲ್ಲಿ ಪ್ರಯಾಣಿಸಬಹುದು. ಅಸಾಧ್ಯವಾಗಿರೋದನ್ನು ಸಾಧಿಸಿ ತೋರಿಸಿದ್ದಾರೆ. ಗೋವಾದಿಂದ ಮುಂಬೈ, ಬೆಂಗಳೂರಿನಿಂದ ಮುಂಬೈ ರಸ್ತೆ ಹೀಗೆ ಪ್ರಯಾಣಿಸುವುದನ್ನು ಸುಲಭ ಮಾಡಿದ್ದಾರೆ. ಭಾರತ ಅಭಿವೃದ್ಧಿಯಾಗುತ್ತಿರುವ ರೀತಿ ನೋಡಿದರೆ ಹೆಮ್ಮೆ ಎನಿಸುತ್ತದೆ ಎಂದು ರಶ್ಮಿಕಾ ಮಂದಣ್ಣ ಮಾತನಾಡಿದ್ದಾರೆ.

ಭಾರತ ಈಗ ವೇಗವಾಗಿ ಸಾಗುತ್ತಿದೆ. ಎಲ್ಲೂ ನಿಲ್ಲುತ್ತಿಲ್ಲ. ಕಳೆದ 10 ವರ್ಷಗಳಲ್ಲಿ ಭಾರತ ಅದ್ಭುತವಾದ ಅಭಿವೃದ್ಧಿಯನ್ನು ಸಾಧಿಸಿದೆ. ಪ್ರಗತಿ ಎಂಬುದು ಬಹಳ ವೇಗವಾಗಿ ಆಗುತ್ತಿದೆ. ಈ ಅಟಲ್ ಸೇತು ಕೇವಲ ಏಳು ವರ್ಷಗಳಲ್ಲಿ ಮುಗಿದಿದೆಯಂತೆ. ಹೊಸ ಭಾರತ ಉದಯವಾಗುತ್ತಿದೆ. ಭಾರತ ವಿಶ್ವದ ಬುದ್ಧಿವಂತ ದೇಶ ಎಂದು ಹೇಳಲು ಬಯಸುತ್ತೇನೆ. ಭಾರತದ ಯುವಕರು ಜವಾಬ್ದಾರಿಯುತವಾಗಿ ಮತ ಹಾಕಬೇಕು. ನಮ್ಮ ದೇಶ ಸಾಧಿಸುತ್ತಿರುವ ಪ್ರಗತಿ ನಿಲ್ಲಬಾರದು. ಹಾಗಾಗಿ ಪ್ರಗತಿಯನ್ನು ಗಮನದಲ್ಲಿಟ್ಟುಕೊಂಡು ಮತ ಹಾಕಬೇಕು ಎಂದು ನಟಿ ಮಾತನಾಡಿದ್ದಾರೆ. ಈ ಮೂಲಕ ನರೇಂದ್ರ ಮೋದಿ ಅವರ ಸಾಧನೆಯನ್ನು ನಟಿ ಕೊಂಡಾಡಿದ್ದಾರೆ.

ರಶ್ಮಿಕಾ ಹೇಳಿಕೆಯ ಬೆನ್ನಲ್ಲೇ ನೆಟ್ಟಿಗರಿಂದ ಬಗೆ ಬಗೆಯ ಕಾಮೆಂಟ್‌ಗಳು ಹರಿದು ಬರುತ್ತಿವೆ. ಮೊದಲು ವೋಟ್ ಮಾಡಿ ಎಂದು ನಟಿಗೆ ಹೇಳಿದ್ದಾರೆ. ಚುನಾವಣೆ ಸಮಯದಲ್ಲಿ ಸರ್ಕಾರದ ಪರ ಪ್ರಚಾರ ಮಾಡುತ್ತಿದ್ದೀರಾ ಎಂದು ನೆಟ್ಟಿಗರು ರಶ್ಮಿಕಾಗೆ ಹೇಳಿದ್ದಾರೆ.

ಪುಷ್ಪ, ಅನಿಮಲ್ ಸಕ್ಸಸ್ ನಂತರ ರಶ್ಮಿಕಾ ಮಂದಣ್ಣಗೆ ಬೇಡಿಕೆ ಹೆಚ್ಚಾಗಿದೆ. ಸಲ್ಮಾನ್ ಖಾನ್ (Salman Khan) ಜೊತೆ ಸಿಖಂದರ್, ಧನುಷ್ (Dhanush) ಜೊತೆ ಕುಬೇರ, ಪುಷ್ಪ 2, ಅನಿಮಲ್ ಪಾರ್ಕ್, ಚಾವಾ, ರೈನ್‌ಬೋ, ದಿ ಗರ್ಲ್‌ಫ್ರೆಂಡ್ ಸಿನಿಮಾಗಳು ರಶ್ಮಿಕಾ ಕೈಯಲ್ಲಿವೆ.

Share This Article