4 ವಾರದಲ್ಲಿ ಹಣ ಪಾವತಿಸಿ ಇಲ್ಲವೇ ಜೈಲಿಗೆ ಹೋಗಿ: ಅನಿಲ್ ಅಂಬಾನಿಗೆ ಸುಪ್ರೀಂ ಆದೇಶ

Public TV
2 Min Read

ನವದೆಹಲಿ: ಎರಿಕ್ಸನ್ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ರಿಲಯನ್ಸ್ ಕಮ್ಯೂನಿಕೇಶನ್ (ಆರ್‍ಕಾಂ) ಕಂಪನಿಯ ಮುಖ್ಯಸ್ಥ ಅನಿಲ್ ಅಂಬಾನಿಗೆ ಭಾರೀ ಹಿನ್ನಡೆಯಾಗಿದ್ದು, ದೋಷಿಯಾಗಿರುವ ಅನಿಲ್ ಅಂಬಾನಿ ಮತ್ತು ಇಬ್ಬರು ನಿರ್ದೇಶಕರು ದಂಡ ಪಾವತಿಸಬೇಕು, ಇಲ್ಲದೇ ಇದ್ದರೆ 3 ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕು ಎಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ಪ್ರಕಟಿಸಿದೆ.

ಎರಿಕ್ಸನ್ ಕಂಪನಿಗೆ ನಾಲ್ಕು ವಾರದ ಒಳಗಾಗಿ 453 ಕೋಟಿ ರೂ. ಪಾವತಿಸಬೇಕು. ಒಂದು ವೇಳೆ ಹಣ ಪಾವತಿಸದಿದ್ದರೆ ಮೂರು ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ದ್ವಿಸದಸ್ಯ ಪೀಠ ಸೂಚಿಸಿದೆ.

ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಧೀಶರಾದ ಆರ್.ಎಫ್.ನಾರಿಮನ್ ಮತ್ತು ವಿನೀತ್ ಸಹರಾನ್ ಅವರು ಈ ಪ್ರಕರಣದಲ್ಲಿ ಅನಿಲ್ ಅಂಬಾನಿ ಜೊತೆ ರಿಲಯನ್ಸ್ ಟೆಲಿಕಾಂ ಮುಖ್ಯಸ್ಥ ಸತೀಶ್ ಸೇಠ್ ಮತ್ತು ರಿಲಯನ್ಸ್ ಇನ್ಫ್ರಾಟೆಲ್ ಮುಖ್ಯಸ್ಥೆ ಛಾಯಾ ವೈರನಿ ಸಹ ದೋಷಿಯಾಗಿದ್ದಾರೆ ಎಂದು ಹೇಳಿ ಅವರಿಗೂ ದಂಡ ವಿಧಿಸಿದ್ದಾರೆ.

ರಿಲಯನ್ಸ್ ಕಮ್ಯುನಿಕೇಷನ್, ರಿಲಯನ್ಸ್ ಟೆಲಿಕಮ್ಯುನಿಕೇಶನ್ ಮತ್ತು ರಿಲಯನ್ಸ್ ಇನ್ಫ್ರಾಟೆಲ್‍ಗೆ ತಲಾ 1 ಕೋಟಿ ರೂ. ಹಣವನ್ನು ನಾಲ್ಕು ವಾರಗಳಲ್ಲಿ ಸುಪ್ರೀಂ ಕೋರ್ಟ್ ಗೆ ಪಾವತಿಸಬೇಕು. ಇಲ್ಲವಾದಲ್ಲಿ ಈ ಕಂಪೆನಿಗಳ ಅಧ್ಯಕ್ಷರು ಒಂದು ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಪೀಠ ಬಿಸಿ ಮುಟ್ಟಿಸಿದೆ. ಇದರ ಜೊತೆಯಲ್ಲಿ ರಿಲಯನ್ಸ್ ಕಮ್ಯೂನಿಕೇಶನ್ ಈಗಾಗಲೇ ಸುಪ್ರೀಂ ಕೋರ್ಟ್ ರಿಜಿಸ್ಟ್ರಿಯಲ್ಲಿ ಠೇವಣಿ ಇಟ್ಟಿರುವ 118 ಕೋಟಿ ರೂ. ಹಣವನ್ನು ಎರಿಕ್ಸನ್ ಕಂಪನಿಗೆ ಒಂದು ವಾರದ ಒಳಗಡೆ ಪಾವತಿಸಬೇಕೆಂದು ಪೀಠ ಸೂಚಿಸಿದೆ.

ಎರಿಕ್ಸನ್ ಕಂಪನಿಗೆ ಪಾವತಿಸಬೇಕಿದ್ದ 550 ಕೋಟಿ ರೂ. ಪಾವತಿಸಲು ಈ ಹಿಂದೆ 120 ದಿನಗಳ ಅವಕಾಶ ನೀಡಲಾಗಿತ್ತು. ಮತ್ತೆ 60 ದಿನಗಳ ಅವಕಾಶವನ್ನು ವಿಸ್ತರಿಸಿದರೂ ಹಣವನ್ನು ಪಾವತಿಸದೇ ತನ್ನ ಆದೇಶವನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ರಿಲಯನ್ಸ್ ಸಲ್ಲಿಸಿದ ಕ್ಷಮಾಯಾಚನೆಯನ್ನು ಕೋರ್ಟ್ ತಿರಸ್ಕರಿಸಿದೆ.

ಏನಿದು ನ್ಯಾಯಾಂಗ ನಿಂದನೆ ಕೇಸ್?
ಸ್ವೀಡನ್ ಮೂಲದ ದೂರ ಸಂಪರ್ಕ ಉಪಕರಣಗಳ ನಿರ್ಮಾಣ ಕಂಪನಿ ಎರಿಕ್ಸನ್‍ಗೆ ರಿಲಯನ್ಸ್ ಕಮ್ಯುನಿಕೇಷನ್ಸ್ 550 ಕೋಟಿ ರೂ. ಪಾವತಿಸಬೇಕಿತ್ತು. ಈ ಹಣವನ್ನು ಅಂಬಾನಿ ಪಾವತಿ ಮಾಡದ ಹಿನ್ನೆಲೆಯಲ್ಲಿ ಎರಿಕ್ಸನ್ ಈ ಹಿಂದೆ ಸುಪ್ರೀಂ ಮೆಟ್ಟಿಲೇರಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್ ಬಾಕಿ ಹಣವನ್ನು 2018ರ ಸೆ.30ರ ಒಳಗಡೆ ಪಾವತಿಸುವಂತೆ ಆರ್‍ಕಾಂಗೆ ಸೂಚಿಸಿತ್ತು. ಈ ಗಡುವಿನ ಒಳಗಡೆ ಹಣವನ್ನು ಪಾವತಿ ಮಾಡದ ಹಿನ್ನೆಲೆಯಲ್ಲಿ ಎರಿಕ್ಸನ್ ಕಂಪನಿ ಅಕ್ಟೋಬರ್ ನಲ್ಲಿ ಮತ್ತೆ ಕೋರ್ಟ್ ಮೊರೆ ಹೋಗಿತ್ತು. ಈ ವೇಳೆ ಕೋರ್ಟ್ ಡಿಸೆಂಬರ್ 15ರ ಒಳಗಡೆ ಹಣವನ್ನು ಪಾವತಿಸಬೇಕೆಂದು ಆದೇಶಿಸಿತ್ತು. ಈ ಆದೇಶವನ್ನೂ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಎರಿಕ್ಸನ್ ಕಂಪನಿ ರಿಲಯನ್ಸ್ ಕಮ್ಯೂನಿಕೇಶನ್ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *