ರಿಲಯನ್ಸ್ ಕಮ್ಯೂನಿಕೇಷನ್ ನಿರ್ದೇಶಕ ಹುದ್ದೆಗೆ ಅನಿಲ್ ಅಂಬಾನಿ ರಾಜೀನಾಮೆ

Public TV
2 Min Read

ಮುಂಬೈ: ಮಹತ್ವದ ಬೆಳವಣಿಗೆಯೊಂದರಲ್ಲಿ ರಿಲಯನ್ಸ್ ಕಮ್ಯೂನಿಕೇಷನ್ ನಿರ್ದೇಶಕ ಹುದ್ದೆಗೆ ಉದ್ಯಮಿ ಅನಿಲ್ ಅಂಬಾನಿ ರಾಜೀನಾಮೆ ನೀಡಿದ್ದಾರೆ.

ಅಂಬಾನಿ ಜೊತೆಗೆ ಛಾಯಾ ವೀರಾನಿ, ರೈನಾ ಕರಣಿ, ಮಂಜರಿ ಕಾಕರ್ ಮತ್ತು ಸುರೇಶ್ ರಂಗಾಚಾರ್ ಕೂಡ ನಿರ್ದೇಶಕ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ಮುಂಬೈ ಷೇರುಪೇಟೆ ರಿಲಯನ್ಸ್ ಕಮ್ಯೂನಿಕೇಷನ್ ಶುಕ್ರವಾರ ತಿಳಿಸಿದೆ.

ಅಂಬಾನಿ, ಛಾಯಾ ವೀರಾನಿ, ಮಂಜರಿ ಕಾಕರ್ ನ.15ರಂದು, ರೈನಾ ಕರಣಿ ನ.14ರಂದು ಮತ್ತು ಸುರೇಶ್ ರಂಗಾಚಾರ್ ನ. 13ರಂದು ರಾಜೀನಾಮೆ ನೀಡಿದ್ದಾರೆ.

ಮಣಿಕಂಠನ್ ವಿ. ಅವರು ಕಂಪನಿಯ ನಿರ್ದೇಶಕ ಹಾಗೂ ಮುಖ್ಯ ಹಣಕಾಸು ಅಧಿಕಾರಿ ಸ್ಥಾನಕ್ಕೆ ಅ. 4ರಂದೇ ರಾಜೀನಾಮೆ ನೀಡಿದ್ದರು. ದಿವಾಳಿ ಪ್ರಕ್ರಿಯೆ ಎದುರಿಸುತ್ತಿರುವ ರಿಲಯನ್ಸ್ ಕಮ್ಯೂನಿಕೇಷನ್ ಜುಲೈ, ಸೆಪ್ಟೆಂಬರ್ ತ್ರೈಮಾಸಿಕದಲ್ಲಿ 30,142 ಕೋಟಿ ರೂ. ನಷ್ಟ ಅನುಭವಿಸಿದೆ.  ಇದನ್ನೂ ಓದಿ: ಹೃದಯ ತುಂಬಿ ಬಂತು – ಜೈಲು ಶಿಕ್ಷೆಯಿಂದ ಪಾರು ಮಾಡಿದ ಅಣ್ಣನಿಗೆ ಅನಿಲ್ ಅಂಬಾನಿ ಧನ್ಯವಾದ

ಹೊಂದಾಣಿಕೆ ಮಾಡಲಾದ ನಿವ್ವಳ ಆದಾಯ (ಅಡ್ಜಸ್ಟೆಡ್ ಗ್ರಾಸ್ ರೆವೆನ್ಯೂ- ಎಜಿಆರ್) ಪ್ರಕರಣದಲ್ಲಿ ಅಕ್ಟೋಬರ್ 26 ರಂದು ಕೇಂದ್ರ ಸರ್ಕಾರದ ಪರ ತೀರ್ಪು ನೀಡಿರುವ ಸುಪ್ರೀಂಕೋರ್ಟ್ 92 ಸಾವಿರ ಕೋಟಿ ರೂ. ಹಣವನ್ನು ಟೆಲಿಕಾಂ ಕಂಪನಿಗಳಿಂದ ವಸೂಲು ಮಾಡಲು ಅನುಮತಿ ನೀಡಿತ್ತು. ಅಷ್ಟೇ ಅಲ್ಲದೇ ಕೋರ್ಟ್ 3 ತಿಂಗಳ ಒಳಗಡೆ ಈ ಹಣವನ್ನು ಪಾವತಿಸುವಂತೆ ಟೆಲಿಕಾಂ ಕಂಪನಿಗಳಿಗೆ ಗಡುವು ನೀಡಲಾಗಿದೆ.

ಭಾರತಿ ಏರ್ ಟೆಲ್ 21,682 ಕೋಟಿ ರೂ., ವೊಡಾಫೋನ್ ಜೊತೆ ಐಡಿಯಾ ವಿಲೀನಗೊಂಡಿದ್ದರಿಂದ 28,300 ಕೋಟಿ ರೂ., ರಿಲಯನ್ಸ್ ಕಮ್ಯುನಿಕೇಷನ್ಸ್ 16,456 ಕೋಟಿ ರೂ., ಬಿಎಸ್‍ಎನ್‍ಎಲ್ 2098 ಕೋಟಿ ರೂ. ಹಾಗೂ ಎಂಟಿಎನ್‍ಎಲ್ 2537 ಕೋಟಿ ರೂ. ಪಾವತಿಸಬೇಕಾಗಿದೆ. ಇದನ್ನೂ ಓದಿ: ಯಾವುದೇ ದಿನದಲ್ಲಿ ಭಾರತವನ್ನು ತೊರೆಯಬಹುದು ವೊಡಾಫೋನ್

ಏನಿದು ಎಜಿಆರ್?:
ದೇಶದ ಹೊಸ ಟೆಲಿಕಾಂ ನೀತಿ ಪ್ರಕಾರ, ದೂರಸಂಪರ್ಕ ಆದಾಯದ ಜತೆಗೆ ಬಾಡಿಗೆ, ಲಾಭಾಂಶ, ನಿಶ್ಚಿತ ಠೇವಣಿಯಿಂದ ಬರುವ ಲಾಭ ಹಾಗೂ ಇನ್ನಿತರೆ ಆದಾಯಗಳನ್ನು ಎಜಿಆರ್ ಎಂದು ಪರಿಗಣಿಸಲಾಗುತ್ತದೆ. ಕೇಂದ್ರ ಸರ್ಕಾರದ ಅನುಮತಿ ಪಡೆದು ಕಾರ್ಯನಿರ್ವಹಿಸುವ ಕಂಪನಿಗಳು ತಮ್ಮ ಎಜಿಆರ್ ನಲ್ಲಿ ಒಂದಷ್ಟು ಪಾಲನ್ನು ಕೇಂದ್ರ ಸರ್ಕಾರಕ್ಕೆ ನೀಡಬೇಕಾಗುತ್ತದೆ. ಅದನ್ನು ವಾರ್ಷಿಕ ಲೈಸೆನ್ಸ್ ಶುಲ್ಕ ಎಂದು ಕರೆಯಲಾಗುತ್ತದೆ. ಇದರ ಜತೆಗೆ ತಮಗೆ ಹಂಚಿಕೆಯಾದ ಸ್ಪೆಕ್ಟ್ರಂ ಅನ್ನು ಬಳಕೆ ಮಾಡಿದ್ದಕ್ಕೆ ಬಳಕೆ ಶುಲ್ಕವನ್ನೂ ಪಾವತಿಸಬೇಕಾಗಿದೆ.

Share This Article
Leave a Comment

Leave a Reply

Your email address will not be published. Required fields are marked *