2 ವರ್ಷದ ಸೇಡು- ದರೋಡೆ ಮಾಡಿ ಹಳೆಯ ಬಾಸ್‍ನಿಂದ 5 ಲಕ್ಷ ದೋಚಿದ್ರು!

Public TV
2 Min Read

– ಓರ್ವ 40 ಸಾವಿರ ಅಕೌಂಟಿಗೆ ಹಾಕ್ಕೊಂಡ
– ಇನೋರ್ವ ದುಬಾರಿ ಬೆಲೆಯ ಮೊಬೈಲ್ ಖರೀದಿಸಿದ

ನವದೆಹಲಿ: ಮಾಜಿ ಬಾಸ್‍ಗೆ ಗನ್ ತೋರಿಸಿ 5 ಲಕ್ಷ ರೂ. ಹಣ ದರೋಡೆ ಮಾಡಿದ ಘಟನೆಯೊಂದು ಕೇಂದ್ರ ದೆಹಲಿಯ ಕರೋಲ್ ಬಾಗ್‍ನಲ್ಲಿ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

ಬಂಧಿತರನ್ನು ಚಂದನ್(30) ಹಾಗೂ ರಂಜಿತ್(24) ಎಂದು ಗುರುತಿಸಲಾಗಿದೆ. ಮತ್ತೊಬ್ಬ ಆರೋಪಿ ಜಾನ್ ಮೊಹಮ್ಮದ್ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಪ್ರಮುಖ ಆರೋಪಿ ಚಂದನ್‍ಗೆ ತನ್ನ ಹಳೆಯ ಬಾಸ್ ಮೇಲೆ ವಿಪರೀತ ಸೇಡಿತ್ತು. ಈ ಸೇಡು ತೀರಿಸಿಕೊಳ್ಳಲು ತನ್ನಿಬ್ಬರು ಗೆಳೆಯರನ್ನು ಸೇರಿಸಿಕೊಂಡು ಆತ ಹಲವು ಸಮಯಗಳಿಂದ ಕಾದು ಕುಳಿತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಜನವರಿ 23ರಂದು ರಾತ್ರಿ 8.30ರ ಸುಮಾರಿಗೆ ಗಾರ್ಮೆಂಟ್ ವ್ಯಾಪಾರಿಯಾಗಿದ್ದ ಚಂದನ್ ಹಳೆಯ ಬಾಸ್ ಸಂಜಯ್ ಸಹದೇವರನ್ನು ಅವರ ಮನೆಯ ಹೊರಗಡೆಯೇ ದರೋಡೆ ಮಾಡಿದ್ದಾರೆ. ಅಲ್ಲದೆ ಬಾಸ್ ಭಯದಿಂದ ಕಿರುಚಿಕೊಳ್ಳಬಹುದೆಂಬ ನಿಟ್ಟಿನಲ್ಲಿ ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಸೈಲೆಂಟಾಗಿರುವಂತೆ ಎಚ್ಚರಿಕೆ ನೀಡಿದ್ದಾರೆ. ನಂತರ ಸಹದೇವ್ ಬ್ಯಾಗ್ ಕಸಿದು ಅದರಲ್ಲಿದ್ದ ಹಣ ಹಾಗೂ ಕೆಲ ಪ್ರಮುಖ ದಾಖಲೆಗಳನ್ನು ತೆಗೆದುಕೊಂಡು ತಮ್ಮ ಗಾಡಿ ಹತ್ತಿ ಪರಾರಿಯಾಗಿದ್ದರು ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಮಂದೀಪ್ ಸಿಂಗ್ ರಾಂಧವಾ ತಿಳಿಸಿದ್ದಾರೆ.

ಘಟನೆಯ ಬಳಿಕ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಲು ದರೋಡೆ ಮಾಡಿದ ಸ್ಥಳದಲ್ಲಿದ್ದ ಸಿಸಿಟಿವಿಗಳನ್ನು ಪರಿಶೀಲಿಸಿದ್ದಾರೆ. ಪೊಲೀಸರಿಗೆ ಈ ವಿಚಾರ ತಿಳಿದಿದೆ ಎಂದು ಗೊತ್ತಾದ ತಕ್ಷಣವೇ ಅಜಾದ್ ಪುರ್ ಹಾಗೂ ಮಾಡೆಲ್ ಟೌನ್ ಪ್ರದೇಶದಲ್ಲಿ ವಾಸಿಸುತ್ತಿದ್ದ ಚಂದನ್ ಹಾಗೂ ರಂಜಿತ್ ಅಲ್ಲಿಂದ ಎಸ್ಕೇಪ್ ಆಗಿದ್ದು, ಕೊನೆಗೆ ಇಬ್ಬರನ್ನೂ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾದರು.

ಬಂಧಿತರಿಂದ ದರೋಡೆಗೆ ಬಳಸಿದ ಸ್ಕೂಟರ್, ಹಣ, ದಾಖಲೆಗಳು ಹಾಗೂ ದರೋಡೆಯ ಬಳಿಕ ಖರೀದಿಸಿದ ಮೊಬೈಲನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ”ಸಹದೇವ್ ನಮ್ಮನ್ನು ಕೆಲಸದಿಂದ ವಜಾ ಮಾಡಿದ್ದರು. ಇದರಿಂದ ಸಿಟ್ಟುಗೊಂಡು ಒಂದಲ್ಲ ಒಂದು ದಿನ ಆತನಿಗೆ ಪಾಠ ಕಲಿಸಲೇಬೇಕೆಂದು ನಿರ್ಧಾರ ಮಾಡಿದ್ದೆ” ಎಂದು ತನಿಖೆಯ ವೇಳೆ ಪೊಲೀಸರ ಬಳಿ ಚಂದನ್ ತಿಳಿಸಿದ್ದಾನೆ.

ಕೆಲಸದಿಂದ ವಜಾ ಮಾಡಿದ ನಂತರ ಚಂದನ್, ತನ್ನ ಹಳೆಯ ಆಫೀಸ್ ಪಕ್ಕದಲ್ಲೇ ಇರುವ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಅಲ್ಲದೆ ಸಹದೇವ್ ವಿರುದ್ಧ ಸೇಡು ತೀರಿಸಿಕೊಳ್ಳಲು ಸರಿಯಾದ ಸಮಯಕ್ಕಾಗಿ ಕಾಯುತ್ತಿದ್ದನು.

ಇತ್ತ ಚಳಿಗಾಲದಲ್ಲಿ ಜಾಕೆಟ್ ಗಳು ಹೆಚ್ಚು ಸೇಲ್ ಆಗುತ್ತಿದ್ದು, ಈ ಸಮಯದಲ್ಲಿ ಸಹದೇವ್ ಬಳಿ ಹೆಚ್ಚಿನ ಹಣವಿರುತ್ತೆ ಎಂಬುದು ಚಂದನ್‍ಗೆ ಮೊದಲೇ ತಿಳಿದಿರುತ್ತದೆ. ಹೀಗಾಗಿ ಇದೇ ಸಮಯವನ್ನು ಉಪಯೋಗಿಸಿಕೊಂಡು ದರೋಡೆ ಮಾಡಿದ್ದಾನೆ.

ಹಳೆಯ ಬಾಸ್ ನ್ನು ದರೋಡೆ ಮಾಡಿದ ನಂತರ ಚಂದನ್ ತನ್ನ ಅಕೌಂಟಿಗೆ 40 ಸಾವಿರ ರೂ. ಹಾಕಿಕೊಂಡರೆ, ಇತ್ತ ರಂಜಿತ್ ದುವಾರಿ ಬೆಲೆಯ ಮೊಬೈಲ್ ಫೋನ್ ಖರೀದಿಸಿದ್ದಾನೆ ಎಂದು ಪೊಲೀಸ್ ಅಧಿಕಾರಿ ವಿವರಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *