ನೆರೆಮನೆಯವರು ಬೈದ ಸಿಟ್ಟಿಗೆ 11ರ ಬಾಲಕನ ಬಲಿ ಪಡೆದ ಯುವಕ!

Public TV
2 Min Read

ನವದೆಹಲಿ: ನೆರೆಮನೆಯವರು ಬೈದ ಸಿಟ್ಟಿಗೆ ಅವರ 11 ವರ್ಷದ ಮಗನನ್ನು ಯುವಕನೊಬ್ಬ ಕತ್ತು ಹಿಸುಕಿ ಕೊಂದ ಅಮಾನವೀಯ ಘಟನೆ ದೆಹಲಿಯಲ್ಲಿ ನಡೆದಿದೆ.

ಕಳೆದ ಎರಡು ವಾರದ ಹಿಂದೆ ಕಾಣೆಯಾಗಿದ್ದ ಬಾಲಕ ಈಗ ಹೆಣವಾಗಿ ಸಿಕ್ಕಿದ್ದಾನೆ. ಈಶಾನ್ಯ ದೆಹಲಿಯ ನೆಹರೂ ವಿಹಾರ್ ನಿವಾಸಿ ಡ್ಯಾನಿಷ್(28) ಕೃತ್ಯವೆಸೆಗಿರುವ ಆರೋಪಿ. ಡ್ಯಾನಿಷ್ ಹಾಗೂ ಬಾಲಕ ಅಕ್ಕಪಕ್ಕದ ಮನೆಯಲ್ಲಿ ವಾಸಿಸುತ್ತಿದ್ದರು. ಡ್ಯಾನಿಷ್ ಕೋಳಿ ಮಾರಿ ಜೀವನ ನಡೆಸುತ್ತಿದ್ದನು. ಬಾಲಕನೊಂದಿಗೆ ಆರೋಪಿ ಒಡನಾಟ ಚೆನ್ನಾಗಿಯೇ ಇತ್ತು. ಆದರೆ ಬಾಲಕನ ತಂದೆ ತಾಯಿ ಬೈದಿದ್ದಕ್ಕೆ ಆರೋಪಿ ಮಗನ ಮೇಲೆ ತನ್ನ ಸಿಟ್ಟನ್ನು ತೋರಿಸಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಒಂದು ಜೀವವನ್ನೇ ಬಲಿಪಡೆದಿದ್ದಾನೆ.

ಬಾಲಕನ ಪೋಷಕರು ದಿನಕೂಲಿ ಕಾರ್ಮಿಕರು, ಹೇಗೋ ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಡ್ಯಾನಿಷ್ ಹಾಗೂ ಬಾಲಕನ ಮನೆಯವರ ನಡುವೆ ಒಳ್ಳೆಯ ಒಡನಾಟವಿತ್ತು. ಆದರೆ ಕೆಲವು ದಿನಗಳ ಹಿಂದೆ ಡ್ಯಾನಿಷ್‍ಗೆ ಬಾಲಕನ ಪೋಷಕರು ಬೈದಿದ್ದರು. ಯಾವಾಗಲೂ ಮನೆ ಮುಂದೆ ಅಡ್ಡ ನಿಂತಿರುತ್ತೀಯ, ಓಡಾಡಲು ಕಷ್ಟವಾಗುತ್ತೆ ಎಂದು ಬೈದಿದ್ದರು. ಇಷ್ಟಕ್ಕೆ ಡ್ಯಾನಿಷ್ ಕೊಪಗೊಂಡಿದ್ದು, ಪೋಷಕರ ಮೇಲಿದ್ದ ಸಿಟ್ಟಿಗೆ ಮೇ 14ರಂದು ಬಾಲಕನನ್ನು ತನ್ನೊಡನೆ ಕರೆದೊಯ್ದು, ಖಜುರಿ ಖಾಸ್ ಫ್ಲೈಓವರ್ ಬಳಿ ಇರುವ ನಿರ್ಜನ ಪ್ರದೇಶದಲ್ಲಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಹಾಗೆಯೇ ಶವವನ್ನು ಅಲ್ಲಿಯೆ ಹೂತಿದ್ದಾನೆ.

ಬಾಲಕ ಕಾಣೆಯಾಗಿರುವ ಬಗ್ಗೆ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಈ ಬಗ್ಗೆ ತನಿಖೆ ಕೈಗೊಂಡಾಗ ಆರೋಪಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ತನಿಖೆ ಕೈಗೊಂಡ ಪೊಲೀಸರು ಬಾಲಕ ಪ್ರತಿನಿತ್ಯ ಓಡಾಡುತ್ತಿದ್ದ ಸ್ಥಳಗಳಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಮೊದಲು ಪರಿಶೀಲನೆ ನಡೆಸಿದ್ದರು. ಈ ವೇಳೆ ಅಂಗಡಿಯೊಂದರ ಮುಂದೆ ಇದ್ದ ಸಿಸಿಟಿವಿಯಲ್ಲಿ ಡ್ಯಾನಿಷ್ ಜೊತೆ ಬಾಲಕ ಹೋಗುತ್ತಿದ್ದ ದೃಶ್ಯ ಸೆರೆಯಾಗಿತ್ತು. ಬಳಿಕ ಡ್ಯಾನಿಷ್‍ನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ ಸತ್ಯಾಂಶವನ್ನು ಆತ ಬಾಯ್ಬಿಟ್ಟಿದ್ದಾನೆ.

ಇದೀಗ ಡ್ಯಾನಿಶ್ ಹೇಳಿಕೆಯನ್ನು ಮಾತ್ರ ದಾಖಲಿಸಿಕೊಂಡಿದ್ದೇವೆ. ಕೊಲೆಗೆ ಬೇರೆ ಕಾರಣಗಳು ಇರಬಹುದಾ ಎಂಬುದನ್ನು ಕೂಡ ಪತ್ತೆ ಹಚ್ಚುತ್ತಿದ್ದೇವೆ. ಹಾಗೆಯೇ ಬಾಲಕನ ಮೃತದೇಹ ಮಣ್ಣಿನಲ್ಲಿ ಹೂತಿಟ್ಟ ಕಾರಣಕ್ಕೆ ಕೊಳೆತಿದ್ದು, ಅದನ್ನು ಶವಪರೀಕ್ಷೆಂದು ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *