2007ರ ಘಟನೆ ಉಲ್ಲೇಖಿಸಿ ಎಂಜೆಲಾ ಮರ್ಕೆಲ್ ಬಳಿ ಈಗ ಕ್ಷಮೆ ಕೇಳಿದ ಪುಟಿನ್‌

Public TV
2 Min Read

ಮಾಸ್ಕೋ: ರಷ್ಯಾದ (Russia) ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಅವರು ಜರ್ಮನಿಯ ಮಾಜಿ ಚಾನ್ಸೆಲರ್ (Germany ex- chancellor) ಎಂಜೆಲಾ ಮರ್ಕೆಲ್ (Angela Merkel) ಅವರಲ್ಲಿ ಕ್ಷಮೆಯಾಚಿಸಿದ್ದಾರೆ.

2007 ರಲ್ಲಿ ತಮ್ಮ ಮುದ್ದಿನ ಲ್ಯಾಬ್ರಡಾರ್ ನಾಯಿಯನ್ನು (Dog) ಅವರೊಂದಿಗೆ ಸಭೆಗೆ ಕರೆತಂದಾಗ ನಾನು ಅವರನ್ನು ಹೆದರಿಸುವ ಉದ್ದೇಶವನ್ನು ಹೊಂದಿರಲಿಲ್ಲ ಎಂದು ತಿಳಿಸಿದರು.

ಕಝಕಿಸ್ತಾನದ ರಾಜಧಾನಿ ಅಸ್ತಾನದಲ್ಲಿ ಮಾತನಾಡಿದ ಅವರು, ಅವರು ನಾಯಿಗೆ ಹೆದರುತ್ತಾರೆ ಎನ್ನುವುದು ನನಗೆ ತಿಳಿದಿರಲಿಲ್ಲ. ನಾನು ಮತ್ತೊಮ್ಮೆ ಮಾಧ್ಯಮದ ಮೂಲಕ ಎಂಜೆಲಾ ಮರ್ಕೆಲ್ ಅವರಲ್ಲಿ ಮನವಿ ಮಾಡುತ್ತಿದ್ದೇನೆ. ದಯವಿಟ್ಟು ನನ್ನನ್ನು ಕ್ಷಮಿಸಿ. ನೀವು ಮತ್ತೆ ರಷ್ಯಾಗೆ ಬನ್ನಿ. ಈ ಭೇಟಿಯ ಸಂದರ್ಭದಲ್ಲಿ ನಾನು ಈ ರೀತಿ ವರ್ತಿಸುವುದಿಲ್ಲ  ಎಂದು ಹೇಳಿದರು.

ಈಗ ಕ್ಷಮೆ ಕೇಳಿದ್ದು ಯಾಕೆ?
ಎಂಜೆಲಾ ಮರ್ಕೆಲ್ ಅವರ ಆತ್ಮಚರಿತ್ರೆ ಮಂಗಳವಾರ (ನ.26) ಬಿಡುಗಡೆಯಾಗಿತ್ತು. ಈ ಪುಸ್ತಕದಲ್ಲಿ ನನಗೆ ಇರುಸು ಮುರುಸು ಮಾಡಲೆಂದೇ ಪುಟಿನ್‌ ನಾಯಿ ತಂದಿದ್ದರು ಎಂದು ಬರೆದಿದ್ದರು.

ಪುಟಿನ್ ಕೆಲವೊಮ್ಮೆ ಸಾಕುಪ್ರಾಣಿಗಳನ್ನು ವಿದೇಶಿ ಅತಿಥಿಗಳ ಜೊತೆಗಿನ ಸಭೆಗೆ ಕರೆತರುವುದು ನನಗೆ ತಿಳಿದಿತ್ತು. ನಾನು ನಾಯಿಗೆ ಹೆದರುವ ಕಾರಣ ಪುಟಿನ್‌ ಜೊತೆಗಿನ ಸಭೆಗೆ ನಾಯಿ ತರದಂತೆ ನಾನು ಹೇಳಿದ್ದೆ. ಹೀಗಿದ್ದರೂ ನಾಯಿಯನ್ನು ತರಲಾಗಿತ್ತು. ನಾನು ನಾಯಿಯನ್ನು ನಿರ್ಲಕ್ಷಿಸಲು ಪ್ರಯತ್ನಿಸುತ್ತಿದ್ದೆ. ನನ್ನ ಪಕ್ಕದಲ್ಲೇ ನಾಯಿ ಸಂಚರಿಸುತ್ತಿದ್ದಾಗ ನನಗೆ ಭಯವಾಗುತ್ತಿತ್ತು. ಪುಟಿನ್‌ ಮುಖಭಾವವನ್ನು ಗಮನಿಸಿದಾಗ ಅವರು ನನ್ನ ಸ್ಥಿತಿಯನ್ನು ನೋಡಿ ಆನಂದಿಸುತ್ತಿದ್ದರು ಎಂದು ಬರೆದಿದ್ದಾರೆ.

2007 ರಲ್ಲಿ ಎಂಜೆಲಾ ಮರ್ಕೆಲ್ ಅವರನ್ನು ಪುಟಿನ್‌ ಅವರು ರಷ್ಯಾದ ಸೋಚಿಯಲ್ಲಿರುವ ತಮ್ಮ ಬೇಸಿಗೆಯ ನಿವಾಸದಲ್ಲಿ ಭೇಟಿಯಾದರು. ಈ ಭೇಟಿಯ ವೇಳೆ ಪುಟಿನ್‌ ಅವರು ನಾಯಿಯನ್ನು ಕರೆ ತಂದಿದ್ದರು. ಸಭೆಗೆ ನಾಯಿ ತಂದಿದ್ದರಿಂದ ಮರ್ಕೆಲ್ ಭಯಗೊಂಡಿದ್ದರು. ಅಷ್ಟೇ ಅಲ್ಲದೇ ಮರ್ಕೆಲ್‌ ಅಹಿತಕರವಾಗಿ ಕಾಣುವಂತೆ ಫೋಟೋ ತೆಗೆಯಲಾಗಿತ್ತು.

ಎಂಜೆಲಾ ಮರ್ಕೆಲ್ 22 ನವೆಂಬರ್ 2005 ರಿಂದ 8 ಡಿಸೆಂಬರ್ 2021 ರವರೆಗೆ ಜರ್ಮನಿಯ ಚಾನ್ಸೆಲರ್ ಆಗಿದ್ದರು . ಇಷ್ಟು ದೀರ್ಘ ಅವಧಿವರೆಗೆ ಚಾನ್ಸೆಲರ್ ಆಗಿದ್ದ ಏಕೈಕ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಎಂಜೆಲಾ ಮರ್ಕೆಲ್ ಪಾತ್ರವಾಗಿದ್ದಾರೆ.

ವ್ಲಾಡಿಮಿರ್ ಪುಟಿನ್ ಅವರಿಗೆ ನಾಯಿಗಳು ಪ್ರಾಣಿಗಳೆಂದರೆ ಇಷ್ಟ. ಹಿಂದೆ ಹಲವಾರು ಬಾರಿ ವಿಶ್ವದ ನಾಯಕರ ಜೊತೆಗಿನ ಭೇಟಿ ಸಂದರ್ಭದಲ್ಲಿ ನಾಯಿಗಳನ್ನು ಕರೆ ತಂದಿದ್ದರು.

Share This Article