ಕೊಪ್ಪಳ: ವಿಶ್ವ ದರ್ಜೆಯ ಮಟ್ಟದಲ್ಲಿ ಸಾಹಸಮಯ ಕ್ರೀಡೆ ಎನಿಸಿಕೊಂಡಿರುವ ರಾಕ್ ಕ್ಲೈಂಬಿಂಗ್, ಜಿಪ್ ಲೈನ್ ಕ್ರೀಡೆಗಳು ಇತ್ತೀಚೆಗೆ ಸಾಕಷ್ಟು ಕ್ರೀಡಾಪಟುಗಳನ್ನು ಸೆಳೆಯುತ್ತಿವೆ. ತರಬೇತಿಗಾಗಿಯೇ ಸಾಕಷ್ಟು ಪ್ರವಾಸಿಗರು ಗಂಗಾವತಿ ತಾಲೂಕಿನ ಆನೆಗೊಂದಿ, ಹಂಪಿ ಭಾಗಕ್ಕೆ ಭೇಟಿಯನ್ನು ನೀಡುತ್ತಿದ್ದಾರೆ. ದಿನದಿಂದ ದಿನಕ್ಕೆ ರಾಕ್ ಕ್ಲೈಂಬಿಂಗ್ ಕ್ರೀಡೆಯಲ್ಲಿ ಆನೆಗೊಂದಿ ಫೇಮಸ್ ಆಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ಸಾಹಸಮಯವಾದ ರಾಕ್ ಕ್ಲೈಂಬಿಂಗ್ ಕ್ರೀಡೆಯ ಬಗ್ಗೆ ಸಾಕಷ್ಟು ಆಸಕ್ತಿ ಹೆಚ್ಚಾಗಿದೆ. ಈ ಕಾರಣಕ್ಕೆ ಪ್ರವಾಸಿಗರು ಸಹ ರಾಕ್ ಕ್ಲೈಂಬಿಂಗ್, ಜಿಪ್ ಲೈನ್ ಕ್ರೀಡೆಗಳನ್ನು ಇಲ್ಲಿ ನಡೆಸುತ್ತಿದ್ದಾರೆ. ಈ ಕ್ರೀಡೆಗಳಿಗೆ ಸೂಕ್ತ ಜಾಗವಾಗಿರುವ ಕಾರಣಕ್ಕೆ ನಾನಾ ದೇಶಗಳಿಂದ ರಾಕ್ ಕ್ಲೈಂಬಿಂಗ್‌ನಲ್ಲಿ ಆಸಕ್ತಿ ಇರುವವರು ಆಗಮಿಸಿ, ತಿಂಗಳುಗಳ ಕಾಲ ಇಲ್ಲಿಯೇ ಇದ್ದುಕೊಂಡು ಸ್ಥಳೀಯ ತರಬೇತುದಾರರಿಂದ ತರಬೇತಿ ಪಡೆದುಕೊಳ್ಳುತ್ತಿರುವ ವಿದೇಶಿ ಪ್ರಜೆಗಳು, ಬೆಟ್ಟಗಳಲ್ಲಿ ಕಾಣಸಿಗುವ ಗುಂಡುಗಳನ್ನು ಯಾವುದೇ ಸಹಾಯ ಇಲ್ಲದೆ ಏರಲು ಮುಂದಾಗುತ್ತಿದ್ದಾರೆ. ಇನ್ನೂ ಬೆಟ್ಟದ ತುತ್ತತುದಿಯಿಂದ ಮತ್ತೊಂದು ಬೆಟ್ಟದ ತುದಿಗೆ ಹಗ್ಗದ ಮೇಲೆಯೇ ನಡೆದುಕೊಂಡು ಹೋಗುವಂತ ಸಾಹಸಮಯ ಕ್ರೀಡೆಗಳ ಕುರಿತು ತರಬೇತಿಯನ್ನು ನಡೆಸುತ್ತಿದ್ದಾರೆ. ಸದ್ಯ ಈ ಸಾಹಸಮಯ ಕ್ರೀಡೆಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳು ಸಾಕಷ್ಟು ವೈರಲ್ ಆಗುತ್ತಿದ್ದು, ಬಹುಪಾಲು ಸಂಖ್ಯೆಯಲ್ಲಿ ಪ್ರವಾಸಿಗರು ಈ ಕ್ರೀಡೆಯ ತರಬೇತಿಗೆ ಆಗಮಿಸುತ್ತಿದ್ದಾರೆ.ಇದನ್ನೂ ಓದಿ: ವಿಬಿ-ಜಿ ರಾಮ್ ಜಿ ಕಾನೂನು ಮೂಲಕ ಗ್ರಾಮೀಣ ಭಾರತದ ಸರ್ವಾಂಗೀಣ ಅಭಿವೃದ್ಧಿಗೆ ಮುನ್ನುಡಿ: ರಾಷ್ಟ್ರಪತಿ ಮುರ್ಮು ಶ್ಲಾಘನೆ
ಆನೆಗೊಂದಿ ಭಾಗ ಫೇವರೆಟ್:
ಆನೆಗೊಂದಿ ಭಾಗದಲ್ಲಿ ಇರುವ ವಿರುಪಾಪುರ ಗಡ್ಡೆ, ಸಣಾಪೂರ ಬೆಟ್ಟ, ಬಾಲಾಂಜನೇಯ ಬೆಟ್ಟ, ಹನುಮನ ಹಳ್ಳಿಯ ಋಷಿಮುಖ ಪರ್ವತಗಳಲ್ಲಿ ಕಂಡು ಬರುವ ದೊಡ್ಡ ದೊಡ್ಡದಾದ ಬಂಡೆಗಳು, ಬೆಟ್ಟದ ಮೇಲಿರುವ ಕಲ್ಲಿನ ಗುಂಡುಗಳು ರಾಕ್ ಕ್ಲೈಂಬಿಂಗ್ ನಡೆಸಲು ಹೇಳಿ ಮಾಡಿಸಿದಂತಿವೆ. ಹಾಗಾಗಿಯೇ ಅತಿ ಹೆಚ್ಚು ಜನ ಈ ಬೆಟ್ಟಗಳಲ್ಲಿ ರಾಕ್ ಕ್ಲೈಂಬಿಂಗ್ ಹಾಗೂ ಜಿಪ್ ಲೈನ್ ಕ್ರೀಡೆಯನ್ನು ನಡೆಸಲು ಮುಂದಾಗುತ್ತಿದ್ದಾರೆ. ಇಲ್ಲಿನ ಕೆಲ ಸ್ಥಳೀಯ ಪ್ರತಿಭೆಗಳು ರಾಕ್ ಕ್ಲೈಂಬಿಂಗ್, ಜಿಪ್ ಲೈನ್ ಮಾಡುವುದು ಕರಗತವನ್ನು ಮಾಡಿಕೊಂಡಿದ್ದಾರೆ. ವಿದೇಶಿ ಪ್ರವಾಸಿಗರಿಗೆ ಸ್ಥಳೀಯ ಪ್ರತಿಭೆಗಳು ತರಬೇತಿಯನ್ನು ನೀಡುವ ಮೂಲಕ ಪ್ರವಾಸೋದ್ಯಮಕ್ಕೆ ಉತ್ತೇಜನವನ್ನು ನೀಡುತ್ತಿದ್ದಾರೆ. ಅಷ್ಟೇ ಅಲ್ಲದೆ ನಾನಾ ಭಾಗಗಳಿಂದ ರಾಕ್ ಕ್ಲೈಂಬಿಂಗ್ ತರಬೇತುದಾರರು ಆನೆಗೊಂದಿ ಭಾಗಕ್ಕೆ ಆಗಮಿಸಿ, ಆಸಕ್ತಿದಾಯಕವಾಗಿರುವ ಪ್ರವಾಸಿಗರಿಗೆ ತರಬೇತಿಯನ್ನು ನೀಡುತ್ತಿದ್ದಾರೆ.



