ವಿಶಾಖಪಟ್ಟಣಂ ದುರಂತ- 2 ಟ್ಯಾಂಕಿನ ಒಟ್ಟು 10 ಸಾವಿರ ಟನ್ ವಿಷಾನಿಲ ಸೋರಿಕೆ

Public TV
2 Min Read

– 13 ಮಂದಿ ಸಾವು, 1000ಕ್ಕೂ ಹೆಚ್ಚು ಮಂದಿ ಅಸ್ವಸ್ಥ
– ನಾಯಿ, ಪಕ್ಷಿ, ಹಸುಗಳು ಅಸ್ವಸ್ಥ

ವಿಶಾಖಪಟ್ಟಣಂ: ಆಂಧ್ರಪ್ರದೇಶದ ರಾಸಾಯನಿಕ ಕಾರ್ಖಾನೆಯ ವಿಷ ಅನಿಲ ಸೋರಿಕೆ ದುರಂತ ಒಟ್ಟು 13 ಮಂದಿಯನ್ನು ಬಲಿಪಡೆದಿದ್ದು, ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆಗಳೀವೆ. ಇದರ ಜೊತೆ ಸುಮಾರು 180 ಮಂದಿಯ ಸ್ಥಿತಿ ಗಂಭೀರವಾಗಿದ್ದು, 1000ಕ್ಕೂ ಹೆಚ್ಚು ಮಂದಿ ಅಸ್ವಸ್ಥವಾಗಿದ್ದಾರೆ.

ಇಂದು ಮುಂಜಾನೆ ಆಂಧ್ರಪ್ರದೇಶದ ವಿಶಾಖಪಟ್ಟಣಂನ ಆರ್.ಆರ್.ವೆಂಕಟಪುರಂನಲ್ಲಿರುವ ಬಹುರಾಷ್ಟ್ರೀಯ ಕಂಪನಿ ಎಲ್.ಜಿ. ಪಾಲಿಮರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‍ನ ರಾಸಾಯನಿಕ ಅನಿಲ ಕಾರ್ಖಾನೆಯಲ್ಲಿ ವಿಷಾನಿಲ ಸೋರಿಕೆಯಾಗಿದ್ದು, ಇದು ಗಾಳಿಯಲ್ಲಿ ಸೇರಿಕೊಂಡು ಸುತ್ತಮುತ್ತಲಿನ ಹಳ್ಳಿಗಳಿಗೂ ಹರಡಿದೆ. ಕಾರ್ಖಾನೆಯಲ್ಲಿ ಇದ್ದ ಎರಡು ಟ್ಯಾಂಕ್‍ಗಳಲ್ಲಿದ್ದ ವಿಷಾನಿಲ ಸೋರಿಕೆಯಾಗಿದ್ದು, ಒಟ್ಟು 10 ಸಾವಿರ ಟನ್ ವಿಷ ಅನಿಲ ಸೋರಿಕೆಯಾಗಿದೆ.

ಎರಡು ಟ್ಯಾಂಕ್‍ಗಳಲ್ಲಿ ಇದ್ದ ಸ್ಪೈರಿನ್ ಎಂಬ ಅನಿಲ ಸೋರಿಕೆಯಾಗಿದ್ದು, ಇದು ಗಾಳಿಯಲ್ಲಿ ವೇಗವಾಗಿ ಹರಡಿದೆ. ಪರಿಣಾಮ ಸುತ್ತಮುತ್ತಲಿನ ಹಳ್ಳಿಯ ಜನ, ಬೆಳಗ್ಗಿನ ವೇಳೆ ವಾಕಿಂಗ್ ಬಂದವರು ಮಕ್ಕಳು ರಸ್ತೆಯಲ್ಲಿ ಓಡಾಡುವವರು ನಿಂತಲ್ಲೇ ಕುಸಿದು ಬಿದ್ದಿದ್ದಾರೆ. ಜೊತೆಗೆ ಈ ವಿಷ ಅನಿಲ ಸೇವನೆಯಿಂದ ನಾಯಿಗಳು ಮತ್ತು ಹಸುಗಳು ಪಕ್ಷಿಗಳು ಕೂಡ ಸಾವನ್ನಪ್ಪುತ್ತಿವೆ.

ಈ ಕಾರ್ಖಾನೆ ವಿಶಾಖಪಟ್ಟಣಂ ನಗರದಿಂದ 14 ಕಿಲೋಮೀಟರ್ ದೂರದಲ್ಲಿರುವ ಆರ್.ಆರ್.ವೆಂಕಟಪುರಂನಲ್ಲಿ ಇದ್ದು, ಈ ಕಂಪನಿ ದಕ್ಷಿಣ ಕೊರಿಯಾದ ಬ್ಯಾಟರಿ ತಯಾರಕ ಎಲ್.ಜಿ ಕೆಮಿಕಲ್ ಲಿಮಿಟೆಡ್ ಎಂದು ತಿಳಿದು ಬಂದಿದೆ. ಈ ವಿಚಾರವಾಗಿ ಮಾತನಾಡಿರುವ ಕಂಪನಿಯ ಅಡಳಿತ ಮಂಡಳಿ, ಸೋರಿಕೆ ಹೇಗೆ ಆಯ್ತು ಮತ್ತು ಅದಕ್ಕೆ ನಿಖರ ಕಾರಣವೇನು? ಜನರು ಸಾಯುವುದಕ್ಕೆ ಕಾರಣ ಮತ್ತು ಘಟನೆಯ ವಿವರಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ಹೇಳಿದೆ.

ವಿಶಾಖಪಟ್ಟಣಂನ ಸಹಾಯಕ ಪೊಲೀಸ್ ಆಯುಕ್ತ ಸ್ವರೂಪಾ ರಾಣಿ ಮಾತನಾಡಿ, ಮಾರ್ಚ್ ಅಂತ್ಯದಿಂದ ದೇಶವೇ ಕೊರೊನಾ ವೈರಸ್ ಲಾಕ್‍ಡೌನ್ ಆಗಿದ್ದರಿಂದ ಈ ಕಾರ್ಖಾನೆ ಎರಡು ತಿಂಗಳು ಕಾರ್ಯನಿರ್ವಹಿಸಿರಲಿಲ್ಲ. ಆದರೆ ಈಗ ಲಾಕ್‍ಡೌನ್ ಸಡಿಲಿಕೆ ಆದ ಮೇಲೆ ಕಾರ್ಖಾನೆಯನ್ನು ತೆರೆಯಲಾಗಿದೆ. ಈ ಟ್ಯಾಂಕ್‍ಗಳಲ್ಲಿ ಮೊದಲೇ ಉಳಿದಿದ್ದ ಅನಿಲ ಈಗ ರಾಸಾಯನಿಕ ಕ್ರಿಯೆಗೆ ಒಳಪಟ್ಟು ಶಾಖೋತ್ಪತ್ತಿಯಾಗಿ ಸೋರಿಕೆಯಾಗಿದೆ ಎಂದು ಪ್ರಾಥಮಿಕ ವರದಿಯಲ್ಲಿ ತಿಳಿದು ಬಂದಿದೆ ಎಂದು ಹೇಳಿದ್ದಾರೆ.

ಸ್ಥಳೀಯ ಯುವಕನೋರ್ವ ಘಟನೆಯ ಬಗ್ಗೆ ವಿವರಿಸಿ, ನಾವು ಬೆಳಗ್ಗೆ ಎದ್ದಾಗ ಗಾಳಿಯಲ್ಲಿ ದಟ್ಟವಾಗಿ ಏನೋ ಕಾಣಿಸಿಕೊಂಡಿತು. ಆ ಸಮಯದಲ್ಲಿ ನಮಗೆ ಉಸಿರಾಡಲು ಕಷ್ಟವಾಯಿತು. ತಕ್ಷಣ ನಾವು ಮನೆಯಿಂದ ಮೂರು ಕಿ.ಮೀ ಓಡಿ ಬಂದಿವೆ. ಆದರೆ ಅದು ತುಂಬ ವೇಗವಾಗಿ ಗಾಳಿಯಲ್ಲಿ ಹರಡಿತು. ಈಗ ಉಸಿರಾಡಲು ತೊಂದರೆಯಾಗುತ್ತಿದೆ ಎಂದು ತಿಳಿಸಿದ್ದಾನೆ.

ಈಗ ಕಾರ್ಖಾನೆಯ ಮೂರು ಕಿ.ಮೀ ಅಂತರದಲ್ಲಿ ಇರುವ ಎಲ್ಲಾ ಜನರನ್ನು ಸ್ಥಳಾಂತರ ಮಾಡಿದ್ದೇವೆ ಎಂದು ವಿಶಾಖಪಟ್ಟಣಂ ಮಹಾನಗರ ಪಾಲಿಕೆ ಟ್ವೀಟ್ ಮಾಡಿದೆ. ಜೊತೆಗೆ ಎಲ್‍ಜಿ ಪಾಲಿಮರ್ಸ್ ಕಾರ್ಖಾನೆಯಲ್ಲಿ ವಿಷ ಅನಿಲ ಸೋರಿಕೆಯನ್ನು ಗುರುತಿಸಲಾಗಿದೆ. ಹೀಗಾಗಿ ಸುರಕ್ಷತಾ ಮುನ್ನೆಚ್ಚರಿಕೆಗಾಗಿ ಸುತ್ತಮುತ್ತಲಿನ ನಾಗರಿಕರು ಮನೆಗಳಿಂದ ಹೊರಬರದಂತೆ ಪಾಲಿಕೆ ಮನವಿ ಮಾಡಿಕೊಂಡಿದೆ.

ಈ ವಿಚಾರವಾಗಿ ಮಾತನಾಡಿರುವ ವಿಶಾಖಪಟ್ಟಣಂನ ಎಸಿಪಿ ರಾಣಿ, ಇಂದು ಬೆಳಗ್ಗೆ ಸುಮಾರು 4 ಗಂಟೆಗೆ ನಮ್ಮ ಅಧಿಕಾರಿಯೊಬ್ಬರು ಕರೆ ಮಾಡಿ ವಿಷಯ ತಿಳಿಸಿದರು. ನಾನು ತಕ್ಷಣ ಅಲ್ಲಿಗೆ ಹೋದೆ. ಅಲ್ಲಿ ಹಲವಾರು ಜನರು ಪ್ರಜ್ಞೆ ಇಲ್ಲದೇ ಬಿದ್ದಿದ್ದರು. ನಾನೇ ಸುಮಾರು 15 ಜನರನ್ನು ಅಂಬುಲೆನ್ಸ್ ಗೆ ಹತ್ತಿಸಿ ಕಳುಹಿಸಿದೆ. ಹಳ್ಳಿಗಳಿಂದ ಜನರು ಓಡಿಬಂದು ರಸ್ತೆಯಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ ಎಂದು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *