ಗೋದಾವರಿಯಲ್ಲಿ ಮುಳುಗಿದ ಬೋಟ್ – 13 ಮಂದಿ ಸಾವು, 40 ಜನ ನಾಪತ್ತೆ

Public TV
1 Min Read

ಹೈದರಾಬಾದ್: ಆಂಧ್ರ ಪ್ರದೇಶದ ಗೋದಾವರಿ ನದಿಯಲ್ಲಿ ಇಂದು ಮಧ್ಯಾಹ್ನ 63 ಪ್ರಯಾಣಿಕರಿದ್ದ ಪ್ರವಾಸಿ ಬೋಟ್ ಅಪಘಾತಕ್ಕೀಡಾಗಿ, 13 ಜನರು ಸಾವನ್ನಪ್ಪಿದ್ದು, 40 ಮಂದಿ ನಾಪತ್ತೆಯಾಗಿದ್ದಾರೆ.

ಪೂರ್ವ ಗೋದಾವರಿ ಜಿಲ್ಲೆಯ ದೇವಿಪಟ್ನಂ ಮಂಡಲದ ಕಾಚುಲೂರು ಗ್ರಾಮದ ಬಳಿ ಈ ಘಟನೆ ನಡೆದಿದೆ. ಬೋಟ್ ನಲ್ಲಿ ಒಟ್ಟು 63 ಜನರಿದ್ದು, ಅದರಲ್ಲಿ 50 ಪ್ರವಾಸಿಗರು ಮತ್ತು 13 ಮಂದಿ ಬೋಟ್ ಸಿಬ್ಬಂದಿ ಇದ್ದಾರೆ. ಗೋದಾವರಿ ನದಿಯ ಬಳಿಯಿರುವ ಪಾಪಿಕೊಂಡಲು ಬೆಟ್ಟಗಳನ್ನು ನೋಡಲು ಪ್ರವಾಸಕ್ಕೆ ಹೋಗಿದ್ದಾಗ ಈ ಘಟನೆ ಸಂಭವಿಸಿದೆ.

ಈ ಹಡಗಿನಲ್ಲಿದ್ದ 63 ಜನರ ಪೈಕಿ 13 ಮಂದಿಯ ಮೃತ ದೇಹ ಸಿಕ್ಕಿದ್ದು, ಇನ್ನೂ ಸುಮಾರು 40 ಮಂದಿ ನದಿಯಲ್ಲಿ ಕಾಣೆಯಾಗಿದ್ದಾರೆ. ಮೂಲಗಳ ಪ್ರಕಾರ, ದೋಣಿಯಲ್ಲಿದ್ದ ಎಲ್ಲರಿಗೂ ಲೈಫ್ ಜಾಕೆಟ್‍ಗಳು ಇದ್ದು, ಅವರಲ್ಲಿ ಕೆಲವರು ಧರಿಸಿಲ್ಲ ಎಂದು ವರದಿಯಾಗಿದೆ. ವಿಶಾಖಪಟ್ಟಣಂ ಮತ್ತು ಗುಂಟೂರಿನಿಂದ ಎರಡು ಎನ್‍ಡಿಆರ್‍ಎಫ್ ತಂಡಗಳು ಬಂದಿದ್ದು, ಸ್ಥಳೀಯ ಪೊಲೀಸರು ಮತ್ತು ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಶೋಧ ಕಾರ್ಯಚರಣೆ ಮಾಡುತ್ತಿದ್ದಾರೆ.

ಗೋದಾವರಿ ನದಿಗೆ ಪ್ರವಾಹದ ಸಮಯದಲ್ಲಿ ಸುಮಾರು 5 ಲಕ್ಷ ಕ್ಯೂಸೆಕ್ ನೀರು ಹರಿದು ಬಂದಿತ್ತು. ಅದ್ದರಿಂದ ಅಲ್ಲಿನ ಪ್ರವಾಸೋದ್ಯಮ ಅಧಿಕಾರಿಗಳು ಶನಿವಾರದವರೆಗೆ ನದಿಯಲ್ಲಿ ಪ್ರವಾಸಿಗರ ಸೇವೆಯನ್ನು ನಿಲ್ಲಿಸಿತ್ತು. ಆದರೆ ಇತ್ತೀಚಿಗೆ ನೀರಿನ ಪ್ರಮಾಣ ಕಡಿಮೆಯಾದ ಕಾರಣ ಇಂದು ಬೋಟ್‍ನಲ್ಲಿ ಹೋಗಲು ಅನುಮತಿ ನೀಡಿದ್ದರು ಎಂದು ವರದಿಯಾಗಿದೆ.

ಈ ವಿಚಾರದ ತಿಳಿದು ತಕ್ಷಣ ಅಧಿಕಾರಿಗಳೊಂದಿಗೆ ಮಾತನಾಡಿದ ಆಂಧ್ರ ಪ್ರದೇಶದ ಮುಖ್ಯಮಂತ್ರಿ ವೈ.ಎಸ್ ಜಗಮೋಹನ್ ರೆಡ್ಡಿ, ತಕ್ಷಣವೇ ರಕ್ಷಣಾ ಕಾರ್ಯಚರಣೆ ಕೈಗೊಳ್ಳುವಂತೆ ಸೂಚಿಸಿ, ಮೃತವ್ಯಕ್ತಿಯ ಕುಟುಂಬಕ್ಕೆ 10 ಲಕ್ಷ ಪರಿಹಾರ ಹಣವನ್ನು ಘೋಷಣೆ ಮಾಡಿದ್ದಾರೆ. ಇದರ ಜೊತೆಗೆ ನೌಕಪಡೆ ಮತ್ತು ಹೆಲಿಕಾಪ್ಟರ್ ಬಳಸಿ ಕಾರ್ಯಚರಣೆ ನಡೆಸುವಂತೆ ಆದೇಶ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *